ವಾಷಿಂಗ್ಟನ್ : ‘ಅಫ್ಘಾನಿಸ್ಥಾನದಲ್ಲಿ ಪಾಕಿಸ್ಥಾನ ಅನೇಕ ವರ್ಷಗಳ ಕಾಲ ಅಮೆರಿಕದ ಬೆನ್ನಿಗೆ ಇರಿದು ನಿಧಾನ ರಕ್ತಸ್ರಾವದಿಂದ ಅದು (ಅಮೆರಿಕ) ಸಾಯುವಂತೆ ಮಾಡಿದೆ’ ಎಂದು ಅಮೆರಿಕದ ನಿವೃತ್ತ ಕರ್ನಲ್ ಹೇಳಿದ್ದಾರೆ.
‘ಭಯೋತ್ಪಾದನೆಯನ್ನು ಮಟ್ಟ ಹಾಕುವುದಾಗಿ ನಂಬಿಸಿ ಪಾಕಿಸ್ಥಾನ ಕಳೆದ ಹದಿನೇಳು ವರ್ಷಗಳಿಂದ ಅಮೆರಿಕದಿಂದ ಬಿಲಿಯಗಟ್ಟಲೆ ಮಿಲಿಟರಿ ಮತ್ತು ಆರ್ಥಿಕ ನೆರವನ್ನು ಪಡೆದೂ ಅಮೆರಿಕವನ್ನು ತನ್ನ ಇಬ್ಬಗೆಯ ತಂತ್ರದಿಂದ ವಂಚಿಸಿದೆ; ಅಮೆರಿಕದ ಬೆನ್ನಿಗೆ ಇರಿದಿದೆ; ಮೋಸ ಮಾಡಿದೆ’ ಎಂದು ಅಮೆರಿಕದ ಹಿರಿಯ ಸೇನಾ ಕರ್ನಲ್ ಲಾರೆನ್ಸ್ ಸೆಲಿನ್ ಆರೋಪಿಸಿದ್ದಾರೆ.
ಕರ್ನಲ್ ಸೆಲಿನ್ ಅಫ್ಘಾನಿಸ್ಥಾನ, ಉತ್ತರ ಇರಾಕ್ ಮತ್ತು ಪಶ್ಚಿಮ ಆಫ್ರಿಕದಲ್ಲಿ ಅಮೆರಿಕ ಸೇನೆಯ ಮಾನವೀಯ ನೆರವು ಅಭಿಯಾನದಲ್ಲಿ ದುಡಿದವರಾಗಿದ್ದಾರೆ.
“ದ ಡೇಲಿ ಕಾಲರ್’ ಪತ್ರಿಕೆಯಲ್ಲಿ ಬರೆದಿರುವ ಲೇಖನಲ್ಲಿ ಕರ್ನಲ್ ಸೆಲಿನ್ ಅವರು “ಪಾಕಿಸ್ಥಾನದ ಬೇಹು ಸಂಸ್ಥೆಯಾಗಿರುವ ಐಎಸ್‌ಐ 2001ರ ಅಕ್ಟೋಬರ್‌ನಲ್ಲಿ, ಅಮೆರಿಕ ಅಫ್ಘಾನ್ ಬಾಂಬಿಂಗ್ ಆರಂಭಿಸಿದ ತರುವಾಯದಲ್ಲಿ, ತಾಲಿಬಾನ್ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ” ಎಂದು ಹೇಳಿದ್ದಾರೆ.
‘ತಾಲಿಬಾನ್ ಮತ್ತು ಅಲ್ ಕಾಯಿದಾ ವಿರುದ್ಧದ ಅಮೆರಿಕ ಸಮರವನ್ನು ಪಾಕಿಸ್ಥಾನ ಎಷ್ಟು ಮಾತ್ರಕ್ಕೂ ಬೆಂಬಲಿಸಬಾರದು ಎಂದು ಅಂದಿನ ಪಾಕ್ ಅಧ್ಯಕ್ಷ ಜನರಲ್ ಪರ್ವೇಜ್ ಮುಶರ್ರಫ್ ಅವರು ಐಎಸ್‌ಐ ನಿರ್ದೇಶಕ ಲೆ| ಜ| ಮಹಮೂದ್ ಅಹ್ಮದ್ ಮತ್ತು ಇತರ ಸೇನಾ ಉನ್ನತಾಧಿಕಾರಿಗಳೊಂದಿಗಿನ ಸಭೆಯಲ್ಲಿ ಹೇಳಿದ್ದರು’ ಎಂದು ಕರ್ನಲ್ ಸೆಲಿನ್ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.
ತಾಲಿಬಾನ್ ಮತ್ತು ಹಕ್ಕಾನಿ ಜಾಲದ ಉಗ್ರರನ್ನು ಮಟ್ಟ ಹಾಕುವುದಾಗಿ ಹೇಳಿ ಅಮೆರಿಕದಿಂದ ಬಿಲಿಯಗಟ್ಟಲೆ ಡಾಲರ್ ಸೇನಾ ಮತ್ತು ಆರ್ಥಿಕ ನೆರವನ್ನು ಪಡೆದ ಹೊರತಾಗಿಯೂ ಪಾಕ್ ಸರಕಾರ ಬೆನ್ನ ಹಿಂದೆ ಅವೇ ಉಗ್ರ ಸಂಘಟನೆಗಳಿಗೆ ಶಸ್ತ್ರಾಸ್ತ್ರ ನೆರವು ನೀಡಿ ಅಮೆರಿಕದ ವಿರುದ್ಧವೇ ಹೋರಾಡುವಂತೆ ಮಾಡುವ ಮೂಲಕ ಅಮೆರಿಕಕ್ಕೆ ಪಾಕಿಸ್ಥಾನ ದ್ರೋಹ ಬಗೆದಿದೆ; ಬೆನ್ನಿಗೆ ಇರಿದಿದೆ ಎಂದು ಕ| ಸೆಲಿನ್ ಬರೆದಿದ್ದಾರೆ.