ಹೊಸದಿಲ್ಲಿ: ಕೋವಿಡ್ 19 ವೈರಸ್ ಆತಂಕದ ನಡುವೆಯೂ ಕದನ ವಿರಾಮ ಉಲ್ಲಂಘಿಸಿ ಗಡಿ ಗ್ರಾಮಗಳ ಮೇಲೆ ಬೇಕಂತಲೇ ಪಿರಂಗಿ, ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ಥಾನ, ಈಗ ಹೊಸದೊಂದು ಉಗ್ರ ಸಂಘಟನೆಗೆ ಸೊಪ್ಪು ಹಾಕಿ ಬೆಳೆಸುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನಗಳನ್ನು 2019ರ ಆಗಸ್ಟ್‌ನಲ್ಲಿ ರದ್ದುಗೊಳಿಸಿದ ಬಳಿಕ ದಿ ರೆಸಿಸ್ಟಂಟ್ ಫ್ರಂಟ್ (TRF) ಎಂಬ ಹೊಸ ಉಗ್ರಗಾಮಿ ಸಂಘಟನೆ ಹುಟ್ಟಿಕೊಂಡಿದೆ.
ಆ ಸಂಘಟನೆಗೆ ಪಾಕಿಸ್ತಾನ ಹಣಕಾಸು ನೆರವು, ಶಸ್ತ್ರಾಸ್ತ್ರ ಸರಬರಾಜು ಸೇರಿ ಎಲ್ಲ ರೀತಿಯ ಬೆಂಬಲ ನೀಡುತ್ತಿದೆ ಎಂದು ಭಯೋತ್ಪಾದನಾ ನಿಗ್ರಹ ತಂಡದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆಯನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ಎರಡು ದಶಕಗಳಿಂದಲೂ ಕುತಂತ್ರ ನಡೆಸುತ್ತಲೇ ಬಂದಿರುವ ಪಾಕಿಸ್ಥಾನವು ಬೆಂಬೆಲಿಸಿ ಬೆಳೆಸುತ್ತಿರುವ ಹತ್ತಾರು ಉಗ್ರಗಾಮಿ ಸಂಘಟನೆಗಳ ಸಾಲಿಗೆ ಟಿಆರ್‌ಎಸ್ ಹೊಸ ಸೇರ್ಪಡೆಯಾಗಿದೆ.
ಈ ಸಂಘಟನೆಗೆ ಲಷ್ಕರ್-ಇ-ತೈಯಬಾ ಬೆಂಬಲ ಕೂಡ ಇದೆ. ಇದರೊಂದಿಗೆ ಜೆಕೆ ಪಿರ್ ಪಂಜಲ್ ಪೀಸ್ ಎಂಬ ಮತ್ತೂಂದು ಸಂಘಟನೆಗೂ ಪಾಕ್ ಬೆಂಬಲ ನೀಡುತ್ತಿರುವ ಬಗ್ಗೆ ಅನುಮಾನವಿದೆ.
ಉಗ್ರರ ಚಟುವಟಿಕೆಗಳನ್ನು ಪತ್ತೆ ಹಚ್ಚುವ ಸಂಬಂಧ ಸಾಮಾಜಿಕ ಮಾಧ್ಯಮಗಳ ಒಳಗೆ ಮತ್ತು ಹೊರಗೆ ನಾವು ನಿರಂತರವಾಗಿ ಟ್ರ್ಯಾಕ್ ಮಾಡುತ್ತಿದ್ದು, ಈ ವೇಳೆ ಭಾರತದ ಒಳಗೂ ಉಗ್ರರ ನೆಲೆಗಳನ್ನು ಸೃಷ್ಟಿಸುವ ಪ್ರಯತ್ನಕ್ಕೆ ಪಾಕ್ ಕೈಹಾಕಿರುವುದು ಬೆಳೆಕಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.