Advertisement

ಉಗ್ರನ ಗಡಿ ದಾಟಿಸಲು ಪಾಕ್‌ ಯತ್ನ

02:58 AM Jan 27, 2019 | |

ಜಮ್ಮು: ಇತ್ತ ಇಡೀ ದೇಶವೇ ಗಣರಾಜ್ಯ ದಿನದ ಸಂಭ್ರಮದಲ್ಲಿ ತೊಡಗಿರುವಾಗ, ಅತ್ತ ಪಾಕಿಸ್ಥಾನ ತನ್ನ ಕುತಂತ್ರ ಬುದ್ಧಿ ತೋರಿಸಿದ್ದು, ಉಗ್ರನೊಬ್ಬನನ್ನು ಭಾರತದೊಳಕ್ಕೆ ನುಸುಳಿಸಲು ಯತ್ನಿಸಿದೆ. ಆದರೆ, ನೆರೆರಾಷ್ಟ್ರದ ಈ ಯತ್ನವನ್ನು ತಡೆಯುವಲ್ಲಿ ಯಶಸ್ವಿಯಾಗಿರುವ ಯೋಧರು, ನುಸುಳು ಕೋರನನ್ನು ಜೀವಂತವಾಗಿ ಸೆರೆಹಿಡಿದಿದೆ.

Advertisement

ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಶನಿವಾರ 22 ವರ್ಷದ ಪಾಕಿಸ್ಥಾನಿ ನುಸುಳುಕೋರನನ್ನು ಬಿಎಸ್‌ಎಫ್ ಬಂಧಿಸಿದೆ. ಆರಂಭದಲ್ಲಿ ಈತ ಸತ್ತಿದ್ದಾನೆಂದು ನಂಬಲಾಗಿತ್ತಾದರೂ, ಅನಂತರ ಜೀವಂತವಾಗಿರುವುದು ಗೊತ್ತಾಗಿ, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಕಿಸ್ಥಾನದ ಶಕರ್‌ಗಡದ ಭೊಲ್ಲಿ ಯಾನ್‌ ಡಾ ಕೊತಾಯ್‌ ಎಂಬ ಗ್ರಾಮ ದವನಾದ 22 ವರ್ಷದ ಫಾರೂಕ್‌ ಅಹ್ಮದ್‌ ಸೆರೆಸಿಕ್ಕ ನುಸುಳುಕೋರ. ಈತ ಮಧ್ಯಾಹ್ನ 1.30ರ ವೇಳೆಗೆ ಗಡಿಯೊಳಗೆ ನುಸುಳಲು ಯತ್ನಿಸಿದ್ದು, ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಕಿವಿಗೊಡಲಿಲ್ಲ. ಕೊನೆಗೆ ಗಡಿ ಭದ್ರತಾ ಪಡೆಯ ಯೋಧರು ಗುಂಡಿನ ದಾಳಿ ನಡೆಸಿದರು ಎಂದು ಸೇನಾ ಮೂಲಗಳು ತಿಳಿಸಿವೆ.

ಮತ್ತೆ ಗುಂಡಿನ ದಾಳಿ: ಪಾಕಿಸ್ಥಾನ ಶನಿವಾರವೂ ಗಡಿಯಲ್ಲಿ ಶೆಲ್‌ ದಾಳಿ ನಡೆಸಿದೆ. ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಸಮೀಪದ ಗ್ರಾಮಗಳು ಮತ್ತು ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಇದಕ್ಕೆ ನಮ್ಮ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ. ಇದೇ ವೇಳೆ, ಸತತ ಕದನ ವಿರಾಮ ಉಲ್ಲಂಘನೆ ಹಿನ್ನೆಲೆಯಲ್ಲಿ ಎರಡೂ ದೇಶಗಳ ಸೇನೆಗಳ ನಡುವೆ ಚಕನ್‌ ಡಾ ಬಾಗ್‌ನಲ್ಲಿ ಗಣರಾಜ್ಯ ದಿನದ ಪ್ರಯುಕ್ತ ಸಿಹಿ ವಿನಿಮಯವೂ ನಡೆದಿಲ್ಲ ಎಂದು ಸೇನೆ ತಿಳಿಸಿದೆ.

ಇಬ್ಬರು ಉಗ್ರರ ಹತ್ಯೆ: ಶ್ರೀನಗರದ ಹೊರವಲಯದಲ್ಲಿರುವ ಖುನ್‌ಮೋಹ್‌ ಪ್ರದೇಶದಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಸದೆಬಡಿಯಲಾಗಿದೆ. ಉಗ್ರರು ಅವಿತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಭದ್ರತಾ ಪಡೆ ಶೋಧ ಕಾರ್ಯ ಆರಂಭಿಸಿತ್ತು. ಅಷ್ಟರಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಎರಡೂ ಕಡೆ ಗುಂಡಿನ ಚಕಮಕಿ ನಡೆದು ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆ ಹತ್ಯೆಗೈದಿದೆ.

Advertisement

Udayavani is now on Telegram. Click here to join our channel and stay updated with the latest news.

Next