Advertisement

ಪಾಕಿಸ್ಥಾನ, ಚೀನಕ್ಕೆ ಆಸಿಯಾನ್‌ ಅಂಕುಶ?

06:20 AM Nov 13, 2017 | Team Udayavani |

ಮನಿಲಾ: ದಕ್ಷಿಣ ಏಷ್ಯಾದಲ್ಲಿ ಪ್ರಬಲ ಶಕ್ತಿಯಾಗಿ ಬೆಳೆಯುತ್ತಿರುವ ಚೀನ ವಿರುದ್ಧ ಭಾರತ ಆಸಿಯಾನ್‌ ಶೃಂಗದಲ್ಲೂ ಪ್ರಬಲ ವ್ಯೂಹ ರಚನೆಗೆ ಮುಂದಾಗಿದೆ. ರಹಸ್ಯವಾಗಿ ಪರಮಾಣು ಕಾರ್ಯಕ್ರಮ ಅಭಿವೃದ್ಧಿ ಮಾಡುತ್ತಿರುವ ಉತ್ತರ ಕೊರಿಯಾ ಮತ್ತು ಪಾಕಿಸ್ಥಾನದ ನಡುವೆ ಸಂಪರ್ಕ ಇದೆ ಎನ್ನುವುದನ್ನು ಅಂತಾರಾಷ್ಟ್ರೀಯ ವೇದಿಕೆಗೆ ಮನವರಿಕೆ ಮಾಡಿಕೊಡಲೂ ಭಾರತ ಈ ಸಮ್ಮೇಳನವನ್ನು ಬಳಸಿಕೊಳ್ಳಲಿದೆ. 

Advertisement

ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಮನಿಲಾದಲ್ಲಿ ಅಮೆರಿಕ, ಜಪಾನ್‌ ಮತ್ತು ಆಸ್ಟ್ರೇಲಿಯಾದ ನಾಯಕರ ಜತೆಗೆ ಮಾತುಕತೆ ನಡೆಸಿದ್ದಾರೆ. ಭಾರತ-ಪೆಸಿಫಿಕ್‌ ವಲಯದಲ್ಲಿ ಮುಕ್ತ ವಲಯವನ್ನಾಗಿ ಮಾಡುವ ಬಗ್ಗೆ ಆರಂಭಿಕವಾಗಿ ಚರ್ಚೆ ನಡೆಸಿದ್ದಾರೆ. ಮೂರು ರಾಷ್ಟ್ರಗಳಿಗೆ ಸಮಾನ ಆತಂಕವಾಗಿರುವ ಭಯೋತ್ಪಾದನೆ, ಉಗ್ರರಿಗೆ ಹಣಕಾಸು ನೆರವು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಚರ್ಚಿಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ತಿಳಿಸಿದೆ.
ಸಮ್ಮೇಳನದಲ್ಲಿ ಭಾಗವಹಿಸಲೋಸುಗ ಪ್ರಧಾನಿ ಮೋದಿ ನವದಿಲ್ಲಿಯಿಂದ ಮನಿಲಾಗೆ ರವಿ ವಾ ರ ಆಗಮಿಸಿದ್ದಾರೆ. ತಕ್ಷಣವೇ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಚೀನ ಪ್ರಧಾನಿ ಲೀ ಕೆಕಿಯಾಂಗ್‌ ಜತೆ ಪ್ರಧಾನಿ ನರೇಂದ್ರ ಮೋದಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಜತೆಗೆ ಜಪಾನ್‌ ಪ್ರಧಾನಿ ಶಿಂಜೋ ಅಬೆ, ರಷ್ಯಾ ಪ್ರಧಾನಿ ಡಿಮಿಟ್ರಿ ಮೆಡ್ವೆಡೇವ್‌ ಹಾಗೂ ಮಲೇಷ್ಯಾ ಪ್ರಧಾನಿ ನಜೀಬ್‌ ರಜಾಕ್‌ ಜತೆಗೂ ಪಿಎಂ ಭೇಟಿಯಾದರು.
ಸಮವಸ್ತ್ರದಲ್ಲಿ ಕಾಣಿಸಿಕೊಂಡ ದಿಗ್ಗಜರು!: ವಿವಿಧ ದೇಶಗಳ ಗಣ್ಯರು ಆಸಿಯಾನ್‌ ಶೃಂಗದಲ್ಲಿ ಒಂದೇ ವಿಧದ ಉಡುಪಿನಲ್ಲಿ ಕಾಣಿಸಿಕೊಂಡಿದ್ದು ವಿಶೇಷ ವಾಗಿತ್ತು. ಫಿಲಿಪ್ಪೀನ್ಸ್‌ನ ರಾಷ್ಟ್ರೀಯ ಉಡುಪು ಇದಾಗಿದ್ದು, ಇದನ್ನು ಬರೋಂಗ ತಗಲಾಂಗ್‌ ಎಂದು ಕರೆಯಲಾಗುತ್ತದೆ. ಫಿಲಿಪ್ಪೀನ್ಸ್‌ನ ಜನಪ್ರಿಯ ವಿನ್ಯಾಸಕಾರ ಅಲ್ಬರ್ಟ್‌ ಅಂಡ್ರಾಡ ಈ ಶರ್ಟ್‌ ವಿನ್ಯಾಸಗೊಳಿಸಿದ್ದಾರೆ. ಔತಣಕೂಟದಲ್ಲಿ ಫಿಲಿಪ್ಪೀನ್ಸ್‌ನ ವಿಶೇಷ ತಿನಿಸು ಸ್ಟೀಕ್‌ ಸುಶಿ ಸೇರಿದಂತೆ ವಿವಿಧ ತಿನಿಸುಗಳಿದ್ದವು.
ಎರಡು ಸಮ್ಮೇಳನದಲ್ಲಿ ಮೋದಿ:  ಆಸಿಯಾನ್‌ ಇಂಡಿಯಾ ಮತ್ತು ಈಸ್ಟ್‌ ಏಷ್ಯಾ ಸಮ್ಮೇಳನದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಏಷ್ಯಾ ದೇಶಗಳಲ್ಲಿ ಭಾರತದ ವಹವಾಟು ಹೆಚ್ಚಳದ ಜತೆಗೆ ಉಗ್ರ ಚಟುವಟಿಕೆ ನಿಯಂತ್ರಣ ಸಂಬಂಧಿ ವಿಷಯವಾಗಿಯೂ ಭಾರತದ ನಿಲುವನ್ನು ಮೋದಿ ಮಂಡಿಸಲಿದ್ದಾರೆ. 
ಆಸಿಯಾನ್‌ ದೇಶಗಳ ಒಟ್ಟು ಜನಸಂಖ್ಯೆ 185 ಕೋಟಿ ಆಗಿದ್ದು, ಜಾಗತಿಕ ಜನಸಂಖ್ಯೆಯ ನಾಲ್ಕನೇ ಒಂದು ಭಾಗದಷ್ಟಿದೆ. ಒಟ್ಟು ಜಿಡಿಪಿ 260 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. 
ಆಸಿಯಾನ್‌ ದೇಶಗಳಿಂದ ಕಳೆದ 17 ವರ್ಷಗಳಲ್ಲಿ ಭಾರತದಲ್ಲಿ 4.5 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಇದು ಒಟ್ಟು ವಿದೇಶಿ ಹೂಡಿಕೆಯಲ್ಲಿ ಶೇ. 17ಕ್ಕಿಂತ ಹೆಚ್ಚಾಗಿದೆ.

ಇಂದು ಅಧಿಕೃತ ಭೇಟಿ
ಪ್ರಧಾನಿ ಮೋದಿ ಮತ್ತು ಟ್ರಂಪ್‌ ಅಧಿಕೃತ ಭೇಟಿ ಸೋಮವಾರಕ್ಕೆ ನಿಗದಿಯಾಗಿದೆ. ಹಲವು ವಿಷಯ ಗಳಿಗೆ ಸಂಬಂಧಿಸಿದಂತೆ ಉಭಯ ಮುಖಂಡರು ಮಾತುಕತೆ ನಡೆಸುವ ನಿರೀಕ್ಷೆಯಿದೆ. ಭಾರತಕ್ಕೆ ಭದ್ರತೆ ಹಾಗೂ ಉಗ್ರ ಚಟುವಟಿಕೆ ನಿಯಂತ್ರಣ ವಿಷಯ ಪ್ರಮುಖವಾಗಿದ್ದು, ಇಂಡೋ ಪೆಸಿಫಿಕ್‌ ವಲಯದಲ್ಲಿ ಭಾರತ ಮಹತ್ವದ ಪಾತ್ರ ವಹಿಸಬೇಕೆಂಬುದು ಅಮೆರಿಕದ ಒತ್ತಾಸೆಯಾಗಿದೆ. ಭೇಟಿಯಲ್ಲಿ ದಕ್ಷಿಣ ಚೀನ ಸಮುದ್ರ ವಿವಾದ, ಉತ್ತರ ಕೊರಿಯಾದ ಅಣ್ವಸ್ತ್ರ ದಾಳಿ ಭೀತಿ ವಿಚಾರವೂ ಚರ್ಚೆಗೆ ಬರುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next