ಇಸ್ಲಾಮಾಬಾದ್: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಆಟೊಮೊಬೈಲ್ ಕ್ಷೇತ್ರ ಎಷ್ಟು ಕುಸಿತ ಕಂಡಿದೆಯೆಂದರೆ, ನವೆಂಬರ್ ತಿಂಗಳಿಡೀ ಅಲ್ಲಿ ಕೇವಲ 4,875 ಕಾರುಗಳು ಮಾತ್ರ ಮಾರಾಟವಾಗಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಒಟ್ಟು 15,432 ಕಾರುಗಳು ಮಾರಾಟವಾಗಿದ್ದವು.
ಇನ್ನೊಂದೆಡೆ, ಭಾರತದಲ್ಲಿ ಅದೇ ತಿಂಗಳು ಕೇವಲ ಅರ್ಧ ದಿನದಲ್ಲಿ 5,000ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಲಾಗಿದೆ. ನವೆಂಬರ್‌ನಲ್ಲಿ ಭಾರತದಲ್ಲಿ ಒಟ್ಟು 3.60 ಲಕ್ಷ ಕಾರುಗಳ ಮಾರಾಟ ನಡೆದಿದೆ.
ಪಾಕ್‌ನಲ್ಲಿನ ಆರ್ಥಿಕ ದುಸ್ಥಿತಿ, ಕಾರುಗಳ ಬೆಲೆ ಏರಿಕೆ, ನಾಗರಿಕರ ಖರೀದಿ ಶಕ್ತಿ ಕುಂದಿರುವುದೇ ಕಾರುಗಳ ಮಾರಾಟ ತಗ್ಗಲು ಕಾರಣ ಎಂದು ವಿಶ್ಲೇಷಿಸಲಾಗಿದೆ. ಡಾಲರ್ ಎದುರು ಪಾಕ್ ರೂಪಾಯಿ ತೀವ್ರ ಕುಸಿತದ ಪರಿಣಾಮ ಕಾರುಗಳ ಬೆಲೆಯೂ ಏರಿಕೆಯಾಗಿದೆ. ಅಲ್ಲದೇ ಹೆಚ್ಚಿನ ತೆರಿಗೆ ಹಾಗೂ ಕಾರು ಸಾಲದ ಬಡ್ಡಿ ಹೆಚ್ಚಳದ ಕಾರಣ ಕಾರುಗಳಿಗೆ ಬೇಡಿಕೆ ತಗ್ಗಿದೆ.
2023ರ ಜುಲೈನಿಂದ ಅಕ್ಟೋಬರ್‌ನಲ್ಲಿ ಪಾಕ್‌ನಲ್ಲಿ ಒಟ್ಟು 20,871 ಕಾರುಗಳ ಮಾರಾಟವಾಗಿದೆ. ಇದೇ ವೇಳೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಮಾರಾಟ ಕೂಡ ತಗ್ಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 1.14 ಲಕ್ಷ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಮಾರಾಟವಾದರೆ, ಈ ವರ್ಷದ ಅಕ್ಟೋಬರ್‌ನಲ್ಲಿ 1.10 ಲಕ್ಷ ವಾಹನಗಳು ಮಾರಾಟವಾಗಿವೆ.