Advertisement

ಇಮ್ರಾನ್‌ ವಿರುದ್ಧ ಸೇನಾಕಾಯ್ದೆಯಡಿ ಕೇಸು? ಆಸ್ತಿ ಹಾಳುಗೆಡವಿದ್ದಕ್ಕೆ ಸೇನೆ ಪ್ರತೀಕಾರ

09:37 PM May 16, 2023 | Team Udayavani |

ಲಾಹೋರ್‌/ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಸೇನೆಯ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವಂತೆಯೇ, ಇತ್ತೀಚೆಗೆ ನಡೆದ ಹಿಂಸಾ ಕೃತ್ಯಗಳಲ್ಲಿ ಆಸ್ತಿ, ಕಟ್ಟಡಗಳನ್ನು ಹಾಳು ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಮ್ರಾನ್‌ ಖಾನ್‌ ಮತ್ತು ಅವರ ಬೆಂಬಲಿಗರ ವಿರುದ್ಧ ಪಾಕಿಸ್ತಾನ ಸೇನಾ ಕಾಯ್ದೆ, ಅಧಿಕೃತ ರಹಸ್ಯಗಳ ಕಾಯ್ದೆಗಳನ್ನು ದಾಖಲಿಸಿ ಬಂಧಿಸುವ ಉದ್ದೇಶ ಹೊಂದಿದೆ. ಈ ಕಾಯ್ದೆಯ ಅನ್ವಯ ಶಿಕ್ಷೆ ಸಾಬೀತಾದರೆ, ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆ ವಿಧಿಸಬಹುದು.

Advertisement

ಮೇ 9ರಂದು ಖಾನ್‌ ಬಂಧನವಾದ ಬಳಿಕ ರೊಚ್ಚಿಗೆದ್ದ ಅವರ ಬೆಂಬಲಿಗರು ರಾವಲ್ಪಿಂಡಿಯಲ್ಲಿ ಇರುವ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ್ದರು. ಇದೇ ಮೊದಲ ಬಾರಿಗೆ ಅಂಥ ಬೆಳವಣಿಗೆ ನಡೆದಿದೆ. ಸೇನಾ ಮುಖ್ಯಸ್ಥ ಜ. ಅಸೀಮ್‌ ಮುನೀರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಸ್ತುಗಳನ್ನು ಹಾಳುಗೆಡವಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ನಿರ್ಧರಿಸಲಾಗಿದೆ. ವಿಶೇಷವೆಂದರೆ ಸೇನಾ ಕಾಯ್ದೆಯನ್ನು ಇದುವರೆಗೆ ಅಶಿಸ್ತು ತೋರಿದ ಸೇನಾಧಿಕಾರಿಗಳ ವಿರುದ್ಧ ಮಾತ್ರ ಬಳಸಲಾಗುತ್ತಿತ್ತು.

ಪಿಟಿಐ ತಿರುಗೇಟು:
ಸೇನೆಯ ನಿರ್ಧಾರಕ್ಕೆ ಇಮ್ರಾನ್‌ ಖಾನ್‌ ಅವರ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್ ಪಕ್ಷ “ನಮಗೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಗೌರವ ಇದೆ. ಸಂವಿಧಾನ ನಮಗೆಲ್ಲರಿಗೂ ದಾರಿ ದೀಪ’ ಎಂದು ಟ್ವೀಟ್‌ನಲ್ಲಿ ತಿರುಗೇಟು ನೀಡಿದೆ. ಹೀಗಾಗಿ, ಪಾಕಿಸ್ತಾನದಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರುವ ಸಾಧ್ಯತೆಗಳು ಇವೆ.

ಕಾಯ್ದಿರಿಸಿದ ತೀರ್ಪು:
ಇನ್ನೊಂದೆಡೆ, ಪಂಜಾಬ್‌ ಪ್ರಾಂತದಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳಲ್ಲಿ ತನಗೆ ಜಾಮೀನು ನೀಡಬೇಕೆಂದು; ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಸಲ್ಲಿಸಿರುವ ಅರ್ಜಿಯ ತೀರ್ಪನ್ನು, ಲಾಹೋರ್‌ ಹೈಕೋರ್ಟ್‌ ಕಾಯ್ದಿರಿಸಿದೆ. ನಾನು ರಾಜಕೀಯ ಬಲಿಪಶುವಾಗಿದ್ದೇನೆ. ಪೊಲೀಸರು ತನ್ನ ಮೇಲೆ ನೂರಾರು ಪ್ರಕರಣಗಳನ್ನು ಸಲ್ಲಿಸಿರುವುದರಿಂದ ಬಂಧನದ ಭೀತಿಯಿದೆ ಎಂದು ಕೋರ್ಟ್‌ಗೆ ಅರಿಕೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಇಸ್ಲಾಮಾಬಾದ್‌ ನ್ಯಾಯಾಲಯ ಇಮ್ರಾನ್‌ ಖಾನ್‌ ವಿರುದ್ಧದ ಎರಡು ಪ್ರಕರಣಗಳಲ್ಲಿ ಜೂ.8ರವರೆಗೆ ಜಾಮೀನು ನೀಡಿದೆ.

ಇದೇ ವೇಳೆ, ಇಮ್ರಾನ್‌ ಖಾನ್‌ರನ್ನು ಹೊಗಳಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಪಾಕಿಸ್ತಾನ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಉಮರ್‌ ಅಟಾ ಬಂದಿಯಲ್‌, ಇದೊಂದು ಸಜ್ಜನಿಕೆಯ ಸಂಕೇತ ಎಂದಿದ್ದಾರೆ.

Advertisement

ಪರಾರಿಯಾದ ಮಾಜಿ ಸಚಿವ ಚೌಧರಿ
ಇಸ್ಲಾಮಾಬಾದ್‌ ಹೈಕೋರ್ಟ್‌ ಆವರಣದಲ್ಲಿ ಪೊಲೀಸರನ್ನು ನೋಡುತ್ತಿದ್ದಂತೆಯೇ ಮಾಜಿ ಸಚಿವ ಫ‌ವಾದ್‌ ಚೌಧರಿ ಕಾರ್‌ನಿಂದ ಇಳಿದು ಓಡಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಮಂಗಳವಾರ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಕೋರ್ಟ್‌ ಹಾಲ್‌ನಿಂದ ಹೊರಗೆ ಬಂದು ಪೊಲೀಸರನ್ನು ನೋಡುತ್ತಲೇ ಅವರು ಪರಾರಿಯಾಗಿದ್ದಾರೆ. ಈ ಘಟನೆಯ ಫೋಟೋ, ವಿಡಿಯೋಗಳು ವೈರಲ್‌ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next