ಸಿಯಾಲ್‌ಕೋಟ್: ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಲು ಭಾರತ, ಪಾಕ್ ಮೇಲೆ ಯುದ್ಧ ಸಾರುವುದು ಬಹುತೇಕ ನಿಶ್ಚಿತವೆಂಬ ಭಯದಲ್ಲಿ ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ದೇಶದ ಗಡಿ ರಕ್ಷಣೆಗಾಗಿ ಪ್ರಾಣಾರ್ಪಣೆಯೇ ಪರಮೋಚ್ಚ ತ್ಯಾಗ ಎಂಬ ಬೋಧನೆಯನ್ನು ತಮ್ಮ ಸೈನಿಕರಿಗೆ ಮಾಡಿದ್ದಾರೆ.
“ದೇಶದ ಗಡಿ ರಕ್ಷಣೆಯೇ ಪರಮೋಚ್ಚ ಕರ್ತವ್ಯವಾಗಿದ್ದು ಅದಕ್ಕಾಗಿ ಮಾಡುವ ಪ್ರಾಣ ತ್ಯಾಗವು ಪರಮೋಚ್ಚ ತ್ಯಾಗ ಎನಿಸಲಿದೆ; ಪಾಕ್ ಸೇನೆ ತನ್ನ ದೇಶದ ಗಡಿ ರಕ್ಷಣೆಗೆ ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ” ಎಂದು ಬಾಜ್ವಾ ಹೇಳಿದ್ದಾರೆ.
ಸಿಯಾಲ್‌ಕೋಟ್ ಗಡಿಗೆ ತುರ್ತು ಭೇಟಿ ನೀಡಿ ಅಲ್ಲಿರುವ ಪಾಕ್ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಜನರಲ್ ಬಾಜ್ವಾ, ದೇಶದ ಯೋಧರಲ್ಲಿರುವ ಅತ್ಯುನ್ನತ ಕರ್ತವ್ಯಪರತೆಯನ್ನು ಪ್ರಶಂಸಿಸಿದರು. ಹಾಗೆಯೇ ದೇಶವನ್ನು ಯಾವುದೇ ಆಕ್ರಮಣದ ಅಪಾಯದಿಂದ ರಕ್ಷಿಸುವಲ್ಲಿನ ಸೈನಿಕರ ಸನ್ನದ್ಧತೆಯನ್ನು ಮೆಚ್ಚಿಕೊಂಡರು.
”ಪಾಕಿಸ್ಥಾನದ ರಕ್ಷಣೆಯು ಅತ್ಯಂತ ಬಲಿಷ್ಠ ಕೈಗಳಲ್ಲಿ ಸುರಕ್ಷಿತವಾಗಿದೆ; ಆದುದರಿಂದ ಯಾರಿಂದಲೂ ದೇಶದ ಸೇನೆಯನ್ನು ಸೋಲಿಸಲಾಗದು” ಎಂದು ಜನರಲ್ ಬಾಜ್ವಾ ಹೇಳಿದರು.
ಬಾಜ್ವಾ ಅವರ ಈ ಹೇಳಿಕೆಯು ಪಾಕಿಸ್ಥಾನ ಭಾರತದ ಯುದ್ಧಕ್ಕೆ ಬೆದರಿರುವುದು ಸ್ಪಷ್ಟವಿದ್ದು ಯೋಧರಲ್ಲಿನ ಭಯವನ್ನು ನಿವಾರಿಸುವ ಸಲುವಾಗಿ ಅವರು ದೇಶ ಗಡಿ ರಕ್ಷಣೆಗೆ ಪ್ರಾಣಾರ್ಪಣೆ ಮಾಡುವುರಲ್ಲೇ ಪರಮೋಚ್ಚ ತ್ಯಾಗವಿದೆ ಎಂಬ ಮಾತನ್ನು ಹೇಳಿರುವುದು ಸ್ಪಷ್ಟವಿದೆ ಎಂದು ತಿಳಿಯಲಾಗಿದೆ.