ಲಂಡನ್ : ”ಭಾರತದೊಂದಿಗೆ ಮಾತುಕತೆಯನ್ನು ಪುನರಾರಂಭಿಸುವ ಯತ್ನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಅವರು ಅನೇಕ ಪ್ರಯತ್ನಗಳನ್ನು ಮಾಡಿರುವ ಹೊರತಾಗಿಯೂ ಹೊಸದಿಲ್ಲಿ ಅವುಗಳನ್ನು ಸಾರಾಸಗಟು ತಿರಸ್ಕರಿಸಿ ಮಾತುಕತೆಯ ಬಾಗಿಲನ್ನು ಮುಚ್ಚಿಬಿಟ್ಟಿದೆ” ಎಂದು ಪ್ರಮುಖ ಬ್ರಿಟಿಷ್ ಚಿಂತನ ಚಾವಡಿಯೊಂದು ಹೇಳಿದೆ.
ಭಾರತ-ಪಾಕ್ ಸಂಬಂಧಗಳ ಅವಲೋಕನ ಕುರಿತಾದ ತನ್ನ ಲೇಖನದಲ್ಲಿ ಬ್ರಿಟಿಷ್ ಚಿಂತನ ಚಾವಡಿ “ಭಾರತದೊಂದಿಗಿನ ಶಾಂತಿಗೆ ಮಾತುಕತೆಯೊಂದೇ ಉಪಾಯವಾಗಿದೆ” ಎಂಬ ಖಚಿತ ನಿಲುವನ್ನು ಪಾಕ್ ಸೇನಾ ನಾಯಕತ್ವ ತಳೆದಿರುವುದನ್ನು ಉಲ್ಲೇಖೀಸಿದೆ.
ರಾಯಲ್ ಯುನೈಟೆಡ್ ಸರ್ವಿಸಸ್ ಇನ್‌ಸ್ಟಿಟ್ಯೂಟ್ (ಆರ್‌ಯುಎಸ್‌ಐ – ರೂಸಿ), ಪಾಕ್ ಸೇನಾ ಮುಖ್ಯಸ್ಥ ಬಾಜ್ವಾ ಅವರು ಭಾರತದೊಂದಿಗೆ ಶಾಂತಿ ಮಾತುಕತೆಯನ್ನು ಪುನರಾರಂಭಿಸಲು ನಡೆಸಿರುವ ಹಲವಾರು ಬಗೆಯ ಯತ್ನಗಳನ್ನು ತನ್ನ ವಿಶ್ಲೇಷಣೆಯಲ್ಲಿ ಉಲ್ಲೇಖೀಸಿದೆ.
ರೂಸಿಯ ಪಾಕ್ ಸಂದರ್ಶನ ಫೆಲೋ ಆಗಿರುವ ಕಮಲ್ ಆಲಂ ಅವರು ಸಿದ್ದಪಡಿಸಿರುವ ವಿಶ್ಲೇಷಣಾತ್ಮಕ ಅಧ್ಯಯನ ವರದಿಯಲ್ಲಿ ಬಾಜ್ವಾ ಹೊಸದಿಲ್ಲಿಯನ್ನು ತಲುಪಲು ನಡೆಸಿದ್ದ ಯತ್ನಗಳನ್ನು ವಿಶೇಷವಾಗಿ ಚರ್ಚಿಸಿದ್ದಾರೆ. ಆದರೆ ಆಲಂ ಅವರ ಅಭಿಪ್ರಾಯಗಳನ್ನು ತನ್ನ ನಿಲುವಲ್ಲ ಎಂಬುದನ್ನು ರೂಸಿ ಸ್ಪಷ್ಟಪಡಿಸಿದೆ.
ಆಲಂ ಅವರು ತನ್ನ ವಿಶ್ಲೇಷಣಾತ್ಮಕ ಅಧ್ಯಯನದಲ್ಲಿ ಹೀಗೆ ಬರೆಯುತ್ತಾರೆ : ಪಾಕ್ ಸೇನಾ ಮುಖ್ಯ ಜನರಲ್ ಕಮರ್ ಜಾವೇದ್ ಬಾಜ್ವಾ ನೇತೃತ್ವದ ಪಾಕಿಸ್ಥಾನದ ಹಿರಿಯ ಅಧಿಕಾರಿಗಳು ಭಾರತದೊಂದಿಗಿನ ಮಿಲಿಟರಿ ಸಹಕಾರದಲ್ಲೇ ಉಭಯ ದೇಶಗಳ ಶಾಂತಿ ಮತ್ತು ಸಮೃದ್ದಿ ಸಾಧನೆಯ ಮಾರ್ಗವಿದೆ ಎಂಬುದನ್ನು ಅರಿತುಕೊಂಡಿದ್ದಾರೆ. ಕಳೆದೊಂದು ದಶಕದಿಂದ ಕಾಶ್ಮೀರದ ಉದ್ವಿಗ್ನತೆ ಮುಂದುವರಿದಿರುವ ಪಾಕ್ ಸೇನಾ ಜನರ್‌ಗಳು ಭಾರತದೊಂದಿಗೆ ಮಾತುಕತೆಯನ್ನು ಬಯಸಿದ್ದಾರೆ. “ಈ ನಿಟ್ಟಿನಲ್ಲಿ ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ; ಆದರೆ ಚೆಂಡು ಭಾರತದ ಅಂಗಣದಲ್ಲಿದೆ’ ಎಂದವರು ಅಭಿಪ್ರಾಯಪಡುತ್ತಾರೆ.
ಪಾಕ್ ಸೇನೆ 2014ರಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಅಂಗವಾಗಿ ಕೈಗೊಂಡ ಝರ್‌ಬ್ ಎ ಅಜ್‌ಬ್ ಮತ್ತು 2017ರಲ್ಲಿ ಕೈಗೊಂಡ ರಾದ್ ಉಲ್ ಫಸಾದ್ ಉಪಕ್ರಮಗಳ ಫಲವಾಗಿ ಪಾಕಿಸ್ಥಾನದಲ್ಲೀಗ ಆಂತರಿಕ ಭದ್ರತೆಯು ಬಹುಮಟ್ಟಿಗೆ ಸುಧಾರಿಸಿದೆ ಎಂದು ಆಲಂ ವಿಶ್ಲೇಷಣೆ ಹೇಳುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಕ್ಕೆ ಮರಳುವ ವಾಯು ಮಾರ್ಗದಲ್ಲಿ ಶಿಷ್ಟಾಚಾರಗಳನ್ನೆಲ್ಲ ಮುರಿದು ಲಾಹೋರ್‌ನಲ್ಲಿ ದಿಢೀರನೇ ಇಳಿದು ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ಖಾಸಗಿಯಾಗಿ ಭೇಟಿಯಾದ ಒಂದೇ ವಾರದೊಳಗೆ ಪಾಕ್ ಉಗ್ರರು ಪಠಾಣ್‌ಕೋಟ್‌ನಲ್ಲಿನ ಭಾರತೀಯ ವಾಯು ಪಡೆ ನೆಲೆಯ ಮೇಲೆ ದಾಳಿ ನಡೆಸಿದ ತರುವಾಯ ಭಾರತ ಪಾಕ್ ಜತೆಗಿನ ಮಾತುಕತೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ; ಭಯೋತ್ಪಾದನೆ ಮತ್ತು ಶಾಂತಿ ಮಾತುಕತೆಗಳು ಜತೆಜತೆಗೇ ಸರ್ವಥಾ ಸಾಗದು ಎಂಬ ಕಠಿನ ಸಂದೇಶವನ್ನು ಪಾಕಿಸ್ಥಾನಕ್ಕೆ ರವಾನಿಸಿದೆ ಮತ್ತು ಇಂದಿಗೂ ತನ್ನ ಅಂದಿನ ನಿಲುವಿಗೆ ಭಾರತ ಬದ್ಧವಾಗಿ ಉಳಿದಿದೆ ಎಂದು ಆಲಂ ತನ್ನ ವಿಶ್ಲೇಷಣೆಯಲ್ಲಿ ಹೇಳಿದ್ದಾರೆ.