ಇಸ್ಲಾಮಾಬಾದ್: ಹಣಕಾಸು ನೆರವು ಒದಗಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ವಿಧಿಸಿರುವ ಎಲ್ಲ ನಾಲ್ಕು ಷರತ್ತುಗಳನ್ನು ಪೂರೈಸಲು ಪಾಕಿಸ್ಥಾನ ಸಿದ್ಧವಿದೆ. ಕೂಡಲೇ ಐಎಂಎಫ್ ಹಣಕಾಸು ನೆರವು ಒದಗಿಸಬೇಕು ಎಂದು ಪಾಕಿಸ್ಥಾನ ಮನವಿ ಮಾಡಿದೆ.
ಆರ್ಥಿಕ ದುಃಸ್ಥಿತಿ ಅನುಭವಿಸುತ್ತಿರುವ ಪಾಕಿಸ್ಥಾನಕ್ಕೆ ಕಳೆದ ವರ್ಷ ಷರತ್ತುಗಳು ಪೂರೈಸದ ಹಿನ್ನೆಲೆಯಲ್ಲಿ ಐಎಂಎಫ್ ವತಿಯಿಂದ 6 ಬಿಲಿಯನ್ ಡಾಲರ್ ನೆರವು ಸ್ಥಗಿತಗೊಂಡಿತ್ತು.
2019ರಲ್ಲಿ ಈ ನೆರವು ನೀಡಲು ಐಎಂಎಫ್ ಒಪ್ಪಿತ್ತು. ಆದರೆ ಕೆಲವು ಷರತ್ತುಗಳನ್ನು ವಿಧಿಸಿತ್ತು. ಹಣಕಾಸು ನೆರವು ಯೋಜನೆಯಡಿ ಕಳೆದ ಆಗಸ್ಟ್‌ನಲ್ಲಿ ಪಾಕಿಸ್ಥಾನಕ್ಕೆ 1.1 ಶತಕೋಟಿ ಡಾಲರ್ ನೆರವನ್ನು ಐಎಂಎಫ್ ಒದಗಿಸಿತ್ತು.
“ಜಿನಿವಾ ಸಮಾವೇಶದ ನೇಪಥ್ಯದಲ್ಲಿ ನಡೆದ ಮಾತುಕತೆ ಹಿನ್ನೆಲೆಯಲ್ಲಿ ಐಎಂಎಫ್ ವಿಧಿಸಿದ್ದ ನಾಲ್ಕು ಷರತ್ತುಗಳನ್ನು ಪೂರೈಸಲಿದ್ದೇವೆ,’ ಎಂದು ಪಾಕ್ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.