Advertisement

‘ಮಾತುಕತೆಗೆ ಬನ್ನಿ’ : ಕಂಗಾಲಾಗಿ ಅಂಗಲಾಚಿದ ಪಾಕ್

11:29 AM Feb 27, 2019 | Karthik A |

ನ್ಯೂಕ್ಲಿಯರ್ ಶಕ್ತಿಯನ್ನು ಹೊಂದಿರುವ ಏಷ್ಯಾದ ಎರಡು ರಾಷ್ಟ್ರಗಳ ನಡುವೆ ಯುದ್ಧ ಸ್ಥಿತಿ ನಿರ್ಮಾಣವಾಗಿರುವಂತೆ ಹೆದರಿ ಕಂಗಾಲಾಗಿರುವ ಪಾಕಿಸ್ಥಾನವು ಇದೀಗ ಭಾರತದ ಮುಂದೆ ಶಾಂತಿ ಮಾತುಕತೆಯ ಬೇಡಿಕೆಯನ್ನು ಇಟ್ಟಿದೆ. ನಮಗೆ ಯಾವುದೇ ಕಾರಣಕ್ಕೆ ಯುದ್ಧ ಬೇಕಾಗಿಲ್ಲ, ನಾವು ಶಾಂತಿಯನ್ನು ಬಯಸುತ್ತಿದ್ದೇವೆ ಎಂದು ಪಾಕಿಸ್ಥಾನ  ಹೇಳಿದೆ.

Advertisement

ಒಂದು ಕಡೆಯಿಂದ ಪಾಕಿಸ್ಥಾನದ ಮಿಲಿಟರಿ ವಕ್ತಾರ ಜನರಲ್ ಆಸೀಫ್ ಗಫೂರ್ ಅವರು ಭಾರತಕ್ಕೆ ಶಾಂತಿಯ ಪಾಠ ಹೇಳಿದ್ದಾರೆ. ‘ನಿಮಗೆ ಶಾಂತಿ ಬೇಕೆಂದಿದ್ದರೆ ನಮ್ಮೊಂದಿಗೆ ಮಾತುಕತೆಗೆ ಬನ್ನಿ. ಯುದ್ಧದ ಮೂಲಕ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ನಮ್ಮ ಈ ಆಹ್ವಾನವನ್ನು ಭಾರತ ಶಾಂತ ಮನಸ್ಥಿತಿಯಿಂದ ಯೋಚಿಸಲಿ’ ಎಂಬ ಮಾತುಗಳನ್ನು ಅವರು ಆಡಿದ್ದಾರೆ.

ಇನ್ನೊಂದೆಡೆ ಬುಧವಾರ ಬೆಳಿಗ್ಗೆ ಭಾರತದ ವಾಯುಪಡೆ ಪಾಕಿಸ್ಥಾನದ ಫೈಟರ್ ಜೆಟ್ ಎಫ್-16 ಅನ್ನು ಹಿಮ್ಮಟ್ಟಿಸಿದ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದತ್ತ ಸ್ನೇಹ ಹಸ್ತವನ್ನು ಚಾಚಿದ್ದಾರೆ. ಆದರೂ ಪಾಕ್ ನೆಲದಲ್ಲಿ ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿದೆ ಎಂಬ ವಿಚಾರವನ್ನು ಒಪ್ಪಿಕೊಳ್ಳಲು ಇಮ್ರಾನ್ ಖಾನ್ ಇನ್ನೂ ಸಿದ್ಧರಿಲ್ಲ ಎಂಬುದೇ ವಿಶೇಷ.

ತನ್ನ ದೇಶವನ್ನು ಉದ್ದೇಶಿಸಿ ಇಂದು ಮಾತನಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು, ‘ನೀವು ಗಡಿ ನಿಯಂತ್ರಣ ರೇಖೆಯನ್ನು ದಾಟಬಹುದೆಂದಾದರೆ ನಾವೂ ಸಹ ಎಲ್.ಒ.ಸಿ.ಯನ್ನು ದಾಟಬಹುದು ಎಂಬುದನ್ನು ತೋರಿಸಲೆಂದೇ ಇವತ್ತಿನ ಕಾರ್ಯಾಚರಣೆಯನ್ನು ಪಾಕಿಸ್ಥಾನ ಕೈಗೊಂಡಿತು. ಎರಡೂ ದೇಶಗಳ ನಡುವೆ ಇದೇ ಸನ್ನಿವೆಶ ಮುಂದುವರಿಯೆಂತೆಂದಾದರೆ ಆಮೇಲಿನ ಪರಿಸ್ಥಿತಿ ನನ್ನ ನಿಯಂತ್ರಣದಲ್ಲೂ ಇರುವುದಿಲ್ಲ ಅಥವಾ ನರೇಂದ್ರ ಮೋದಿಯವರ ಕೈಯಲ್ಲೂ ಇರುವುದಿಲ್ಲ. ಹಾಗಾಗಿ ನಮ್ಮ ನಡುವಿನ ಸಮಸ್ಯೆಯನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳೋಣ’ ಎಂದು ಇಮ್ರಾನ್ ಖಾನ್ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next