ಇಸ್ಲಾಮಾಬಾದ್ : ಪಾಕಿಸ್ಥಾನದ ಆರ್ಥಿಕತೆ ಸುಧಾರಿಸುತ್ತಿರುವುದನ್ನು ಪ್ರಶಂಸಿಸಿರುವ ಪಾಕ್ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಅವರು ಮುಂದಿನ ಹಣಕಾಸು ವರ್ಷದಲ್ಲಿ ಪಾಕ್ ಮಿಲಿಟರಿ ಖರ್ಚು ವೆಚ್ಚಗಳನ್ನು 1.1 ಟ್ರಿಲಿಯಕ್ಕೆ ಏರಿಸಿದ್ದಾರೆ.
ಈಗಿನ ಪಾಕ್ ಮಿಲಿಟರಿ ಖರ್ಚು 920 ದಶಲಕ್ಷ ಇದ್ದು ಮುಂದಿನ ಹಣಕಾಸು ವರ್ಷದಲ್ಲಿ ಅದು ಶೇ.20ರ ಏರಿಕೆಯನ್ನು ಕಾಣಲಿದೆ ಎಂದು ಹಣಕಾಸುಸಚಿವ ಮಿಫ್ತಾ ಹೇಳಿದ್ದಾರೆ.
ಪಾಕ್ ಮಹಾ ಚುನಾವಣೆಗಳು ಈ ವರ್ಷ ನಡೆಯಲಿದ್ದು ಅದಕ್ಕೆ ಪೂರ್ವಭಾವಿ ಎಂಬಂತೆ ಪಾಕ್ ಸಂಸತ್ತು ನಿನ್ನೆ ಶುಕ್ರವಾರದ ಕಲಾಪದಲ್ಲಿ ವಸ್ತುತಃ ರಣರಂಗವಾಯಿತು. ಚುನಾವಣೆ ತೀರ ಹತ್ತಿರ ಇರುವಾಗ ಆಳುವ ಪಿಎಂಎಲ್‌ನ್ ಪಕ್ಷ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿರುವುದನ್ನು ವಿರೋಧ ಪಕ್ಷಗಳು ಉಗ್ರವಾಗಿ ಪ್ರತಿಭಟಿಸಿದವು.
ಪಾಕ್ ಚುನಾವಣೆ ಈ ವರ್ಷ ಬಹುತೇಕ ಜುಲೈ ತಿಂಗಳಲ್ಲಿ ನಡೆಯಲಿದ್ದು ಆಳುವ ಪಕ್ಷ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿರವುದಕ್ಕೆ ವಿರೋಧ ಪಕ್ಷಗಳು ವಾಕ್ ಔಟ್ ನಡೆಸಿದವು. ಇನ್ನು ಕೆಲವರು ನೇರವಾಗಿ ಪೋಡಿಯಂ ಕಡೆಗೆ ಧಾವಿಸಿ ಹಣಕಾಸು ಸಚಿವ ಇಸ್ಮಾಯಿಲ್ ಅವರ ಭಾಷಣವನ್ನು ದೈಹಿಕವಾಗಿ ತಡೆಯಲು ಮುಂದಾದರು. ಆದರೆ ಆಳುವ ಪಿಎಂಎಲ್‌ಎನ್ ಪಕ್ಷದ ಸಂಸದರು ಮಾನವ ಸರಪಣಿ ರಚಿಸಿ ವಿಪಕ್ಷೀಯರು ಹಣಕಾಸು ಸಚಿವರತ್ತ ಹೋಗುವುದನ್ನು ತಡೆಯುವಲ್ಲಿ ಸಫಲರಾದರು.
ಪಾಕ್ ಆರ್ಥಿಕತೆ ಕಳೆದ ವರ್ಷ ಸುಧಾರಿಸಲು ಮುಖ್ಯ ಕಾರಣ ಉಗ್ರರ ಹಿಂಸೆ ಗಮನಾರ್ಹವಾಗಿ ಕಡಿಮೆಯಾಗಿರುವುದು ಮತ್ತು ಚೀನ ಅಪಾರ ಪ್ರಮಾಣದ ತನ್ನ ಬಂಡವಾಳವನ್ನು ಪಾಕ್ ಆಥಿಕಾಭಿವೃದ್ದಿಗೆ ಸುರಿದಿರುವುದೇ ಆಗಿದೆ.
ಪಾಕ್ ಜಿಡಿಪಿ ಕಳೆದ ಹದಿಮೂರು ವರ್ಷಗಳ ಗರಿಷ್ಠವಾಗಿ ಶೇ.5.8ಕ್ಕೆ ಏರಿದ್ದು ಮುಂದಿನ ಹಣಕಾಸು ವರ್ಷದಲ್ಲಿ ಇದು ಶೇ.6.2ಕ್ಕೆ ಜಿಗಿಯುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವ ಮಿಫ್ತಾ ಹೇಳಿದರು.