ನವದೆಹಲಿ: ತಮ್ಮ ದೇಶದಲ್ಲಿ ನಡೆಯುವ ದುಷ್ಕೃತ್ಯಗಳನ್ನು ಮರೆಮಾಚಿ, ಭಾರತದ ವಿರುದ್ಧ ಆರೋಪಗಳನ್ನು ಎತ್ತಿ ತೋರುವುದು ಪಾಕಿಸ್ತಾನದ ಚಾಳಿಯಾಗಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ತಿರುಗೇಟು ನೀಡಿದೆ.
ಶುಕ್ರವಾರ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಜಮ್ಮು ಮತ್ತು ಕಾಶ್ಮೀರದ ವಿಷಯ ಪ್ರಸ್ತಾಪಿಸಿದ್ದರು.
“ಭಾರತ ಕಾನೂನುಬಾಹಿರವಾಗಿ 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ರಾಜ್ಯದ ಸ್ಥಾನಮಾನ ವನ್ನು ಹಿಂಪಡೆಯಿತು. ಭಾರತದೊಂದಿಗೆ ಪಾಕ್ ಶಾಂತಿ ಬಯಸುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ತೆಗೆದುಕೊಳ್ಳುವ ಮೂಲಕ ಮಾತ್ರ ಕಾಶ್ಮೀರದ ಸಮಸ್ಯೆಯನ್ನು ನ್ಯಾಯಸಮ್ಮತವಾಗಿ ಪರಿಹರಿಸಬಹುದು. ಜತೆಗೆ ದೀರ್ಘಕಾಲಿಕ ಶಾಂತಿಯನ್ನು ಸ್ಥಾಪಿಸಬಹುದು,’ ಎಂದು ಷರೀಫ್ ಪ್ರತಿಪಾದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಮಿಜಿಟೊ ವಿನಿಟೊ, “ಭಾರತದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಪಾಕ್ ಪ್ರಧಾನಿ ಈ ವೇದಿಕೆಯನ್ನು ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಅವರ ದೇಶದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳನ್ನು ಮರೆಮಾಚಲು, ಭಾರತದ ವಿರುದ್ಧ ಬೆರಳು ಮಾಡುತ್ತಿದ್ದಾರೆ,’ ಎಂದು ದೂರಿದರು.
“ಭಾರತದೊಂದಿಗೆ ಶಾಂತಿ ಬಯಸುವುದಾಗಿ ಹೇಳುವ ರಾಷ್ಟ್ರ, ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದಿಲ್ಲ. ಮುಂಬೈ ದಾಳಿಯ ರೂವಾರಿಗಳಿಗೆ ಆಶ್ರಯ ನೀಡುವುದಿಲ್ಲ,’ ಎಂದು ಪಾಕ್ ವಿರುದ್ಧ ಮಿಜಿಟೊ ವಿನಿಟೊ ಕಿಡಿಕಾರಿದರು.