ಢಾಕಾ: ಬಾಂಗ್ಲಾದೇಶವನ್ನು ದ್ವಿತೀಯ ಪಂದ್ಯದಲ್ಲೂ ಮಣಿಸಿದ ಪ್ರವಾಸಿ ಪಾಕಿಸ್ತಾನ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ. ಶನಿವಾರದ ಮುಖಾಮುಖೀಯನ್ನು ಬಾಬರ್ ಆಜಂ ಪಡೆ 8 ವಿಕೆಟ್‌ಗಳಿಂದ ಗೆದ್ದಿತು.
ಇದು ಸಣ್ಣ ಮೊತ್ತದ ಸ್ಪರ್ಧೆಯಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶಕ್ಕೆ ಗಳಿಸಲು ಸಾಧ್ಯವಾದದ್ದು 7 ವಿಕೆಟಿಗೆ ಕೇವಲ 108 ರನ್. ಪಾಕಿಸ್ತಾನ 18.1 ಓವರ್‌ಗಳಲ್ಲಿ 2 ವಿಕೆಟಿಗೆ 109 ರನ್ ಮಾಡಿ ಗೆದ್ದು ಬಂದಿತು.
ಮೊದಲ ಪಂದ್ಯವನ್ನು ಪಾಕಿಸ್ತಾನ 4 ವಿಕೆಟ್‌ಗಳಿಂದ ಜಯಿಸಿತ್ತು. 3ನೇ ಮುಖಾಮುಖೀ ಸೋಮವಾರ ನಡೆಯಲಿದೆ.
ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಶದಾಬ್ ಖಾನ್, ಹ್ಯಾರಿಸ್ ರವೂಫ್ ಅವರ ಬಿಗಿಯಾದ ಬೌಲಿಂಗಿಗೆ ಬಾಂಗ್ಲಾ ಬಳಿ ಉತ್ತರವಿರಲಿಲ್ಲ. ನಜ್ಮುಲ್ ಹೊಸೇನ್ (40) ಹೊರತುಪಡಿಸಿದರೆ ಪಾಕ್ ದಾಳಿಯನ್ನು ತಡೆದು ನಿಲ್ಲಲು ಯಾರಿಂದಲೂ ಸಾಧ್ಯವಾಗಲಿಲ್ಲ.
ಚೇಸಿಂಗ್ ವೇಳೆ ನಾಯಕ ಬಾಬರ್ ಆಜಂ (1) ವಿಕೆಟ್ ಬೇಗನೇ ಬಿತ್ತು. ಮೊಹಮ್ಮದ್ ರಿಜ್ವಾನ್ (39)-ಫಕರ್ ಜಮಾನ್ (ಅಜೇಯ 57) ಉತ್ತಮ ಜತೆಯಾಟ ನಿಭಾಯಿಸಿದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-7 ವಿಕೆಟಿಗೆ 108 (ನಜ್ಮುಲ್ 40, ಆಫಿಫ್ 20, ಅಫ್ರಿದಿ 15ಕ್ಕೆ 2, ಶದಾಬ್ 22ಕ್ಕೆ 2). ಪಾಕಿಸ್ಥಾನ-18.1 ಓವರ್‌ಗಳಲ್ಲಿ 2 ವಿಕೆಟಿಗೆ 109 (ಫಕರ್ ಜಮಾನ್ ಔಟಾಗದೆ 57, ರಿಜ್ವಾನ್ 39, ಮುಸ್ತಫಿಜುರ್ 12ಕ್ಕೆ 1).
ಪಂದ್ಯಶ್ರೇಷ್ಠ: ಫಕರ್ ಜಮಾನ್.