ರಾವಲ್ಪಿಂಡಿ: ಸುದೀರ್ಘ 24 ವರ್ಷಗಳ ಬಳಿಕ ಆಸ್ಟ್ರೇಲಿಯ ಕ್ರಿಕೆಟ್ ತಂಡ ಟೆಸ್ಟ್ ಸರಣಿಯನ್ನಾಡಲು ಪಾಕಿಸ್ಥಾನಕ್ಕೆ ಆಗಮಿಸಿದೆ. ಶುಕ್ರವಾರ ರಾವಲ್ಪಿಂಡಿಯಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ.
ಬಾಬರ್ ಆಜಂ ಮತ್ತು ಪ್ಯಾಟ್ ಕಮಿನ್ಸ್ ಪಡೆಗಳು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿ ಆಗಲಿವೆ. ವಿಜೇತ ತಂಡ ಬೆನೊ-ಖಾದಿರ್ ಟ್ರೋಫಿಯನ್ನು ಎತ್ತಿಹಿಡಿಯಲಿದೆ. ಈ ಎರಡು ದೇಶಗಳ ವಿಶ್ವವಿಖ್ಯಾತ ಲೆಗ್ ಸ್ಪಿನ್ನರ್‌ಗಳಾದ ರಿಚೀ ಬೆನೊ ಮತ್ತು ಅಬ್ದುಲ್ ಖಾದಿರ್ ಹೆಸರನ್ನು ಈ ಟ್ರೋಫಿಗೆ ಇಡಲಾಗಿದೆ.
ಆಸ್ಟ್ರೇಲಿಯ ಕೊನೆಯ ಸಲ ಪಾಕಿಸ್ಥಾನಕ್ಕೆ ಪ್ರವಾಸ ಕೈಗೊಂಡು ಟೆಸ್ಟ್ ಸರಣಿ ಆಡಿದ್ದು 1998ರಷ್ಟು ಹಿಂದೆ. ಅಂದು ಮಾರ್ಕ್ ಟೇಲರ್ ನಾಯಕತ್ವದ ಕಾಂಗರೂ ಪಡೆ ವಿಜಯೋತ್ಸವ ಆಚರಿಸಿತ್ತು.
ಸಾಮಾನ್ಯವಾಗಿ ಏಷ್ಯಾದ ಸ್ಪಿನ್ ಟ್ರ್ಯಾಕ್‌ಗಳಲ್ಲಿ ಆಸ್ಟ್ರೇಲಿಯ ಚಡಪಡಿಸುತ್ತದೆ. ಆದರೆ ರಾವಲ್ಪಿಂಡಿ ಪಿಚ್ ಇದಕ್ಕೆ ವ್ಯತಿರಿಕ್ತವೆಂಬಂತೆ ಸೀಮ್ ಬೌಲಿಂಗಿಗೆ ನೆರವಾಗಲಿದೆ ಎನ್ನಲಾಗಿದೆ. ಎರಡೂ ತಂಡಗಳಲ್ಲಿ ಘಾತಕ ವೇಗಿಗಳಿರುವುದರಿಂದ ಪಂದ್ಯ ಅತ್ಯಂತ ರೋಚಕವಾಗಿ ನಡೆಯುವುದು ನಿಶ್ಚಿತ.
ಪಾಕ್ ತಂಡದಲ್ಲಿ ಕೆಲವು ಹೊಸ ಮುಖಗಳಿವೆ. ಲೆಗ್ ಸ್ಪಿನ್ನರ್ ಯಾಸಿರ್ ಶಾ ಮತ್ತು ವೇಗಿ ಮೊಹಮ್ಮದ್ ಅಬ್ಟಾಸ್ ಬದಲು ಬಂದಿರುವ ನೌಮಾನ್ ಅಲಿ, ಸಾಜಿದ್ ಖಾನ್ ಇದಕ್ಕೆ ಉತ್ತಮ ಉದಾಹರಣೆ.
ಆ್ಯಶಸ್ ಗೆಲುವಿನ ಹುರುಪು :
ಆಸ್ಟ್ರೇಲಿಯ ಕಳೆದ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡಿಗೆ 4-0 ಸೋಲುಣಿಸಿದ ಹುರುಪಿನಲ್ಲಿದೆ. 2018ರಲ್ಲಿ ಕೊನೆಯ ಸಲ ಇತ್ತಂಡಗಳು ಯುಎಇಯಲ್ಲಿ ಎದುರಾದಾಗ ಪಾಕಿಸ್ಥಾನ 1-0 ಅಂತರದ ಗೆಲುವು ಸಾಧಿಸಿತ್ತು. ಆಸ್ಟ್ರೇಲಿಯ 2016ರ ಬಳಿಕ ವಿದೇಶದಲ್ಲಿ ಟೆಸ್ಟ್ ಸರಣಿ ಜಯಿಸಿಲ್ಲ.