ಹೊಸದಿಲ್ಲಿ : ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಮತ್ತು ನೆರೆಯ ದೇಶಗಳ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಉಗ್ರ ಸಂಘಟನೆಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು ಎಂಬ ಬಗ್ಗೆ ಪಾಕಿಸ್ಥಾನದ ಮೇಲೆ ಅತೀವವಾದ ಅಂತಾರಾಷ್ಟ್ರೀಯ ಒತ್ತಡ ಇದೆ. ಆದರೂ ಪಾಕ್ ಉಗ್ರ ಸಂಘಟನೆಗಳು ಭಾರತದ ವಿರುದ್ಧ ಸಮುಂದರೀ ಜಿಹಾದ್ (ಜಲಾಂತರ್ಗತ ಭಯೋತ್ಪಾದಕ ದಾಳಿ) ನಡೆಸುವುದಕ್ಕೆ ತನ್ನ ಉಗ್ರರನ್ನು ತರಬೇತುಗೊಳಿಸುತ್ತಿವೆ ಎಂಬ ಆಘಾತಕಾರಿ ವಿಷಯ ಈಗ ಬಯಲಾಗಿದೆ.
ಕೇಂದ್ರ ಸಹಾಯಕ ಗೃಹ ಸಚಿವ ಹಂಸರಾಜ್ ಆಹಿರ್ ಅವರು ಲೋಕಸಭೆಗಿಂದು ಈ ವಿಷಯ ತಿಳಿಸಿ, ಈ ಕಾರಣಕ್ಕೆ ದೇಶದ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸುವುದು ಅಗತ್ಯವಿದೆ ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಲಿಖೀತ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವ ಆಹಿರ್ ಅವರು, ಪಾಕ್ ಉಗ್ರರು 26/11ರ ಮುಂಬಯಿ ದಾಳಿ ರೀತಿಯ ಭಯೋತ್ಪಾದ ಕೃತ್ಯಗಳನ್ನು ಭಾರತೀಯ ಬಂದರುಗಳ ಮೇಲೆ, ಸರಕು ಸಾಗಣೆ ಹಡಗುಗಳ ಮೇಲೆಅಥವಾ ನಡು ಸಾಗರದಲ್ಲಿನ ತೈಲ ಟ್ಯಾಂಕರ್‌ಗಳ ಮೇಲೆ ನಡೆಸಬಹುದೆನ್ನುವ ಬಗ್ಗೆ ಯಾವುದೇ ನಿಖರ ಗುಪ್ತಚರ ಮಾಹಿತಿ ಈ ತನಕ ಸಿಕ್ಕಿಲ್ಲ; ಆದರೂ ಇಂತಹ ಒಂದು ಸಂಭಾವ್ಯತೆಯನ್ನು ದೃಷ್ಟಿಯಲ್ಲಿರಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಈಗ ಉಪಲಬ್ಧವಿರುವ ಮಾಹಿತಿಗಳ ಪ್ರಕಾರ ಪಾಕ್ ಉಗ್ರ ಸಂಘಟನೆಗಳು ತಮ್ಮ ಉಗ್ರರನ್ನು ಭಾರತದೊಳಗೆ ಭಯೋತ್ಪಾದಕ ಕೃತ್ಯಗಳಿಗಾಗಿ ಸಮುದ್ರದ ಮೂಲಕ ನುಸುಳಿಸುವ ಯೋಜನೆ ಹೊಂದಿದ್ದು ಅದಕ್ಕಾಗಿ ಸಮುಂದರೀ ಜಿಹಾದ್ ಪಡೆಗಳಿಗೆ ತರಬೇತಿ ನೀಡುತ್ತಿವೆ ಎಂದು ತಿಳಿದು ಬಂದಿದೆ ಎಂದು ಸಚಿವ ಆಹಿರ್ ಹೇಳಿದರು.