ಇಸ್ಲಾಮಾಬಾದ್: ‘ದೇಶದ ಸಾರ್ವಭೌಮತ್ವವನ್ನು ಕಾಪಾಡುವ ಉದ್ದೇಶ ಮತ್ತು ಸಾಮರ್ಥ್ಯದಲ್ಲಿ ತಾನು ದೃಢನಿಶ್ಚಯ ಹೊಂದಿದೆ’ ಎಂದು ಪಾಕಿಸ್ಥಾನ ಶನಿವಾರ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ತಿರುಗೇಟು ನೀಡಿದೆ.
ಭಯೋತ್ಪಾದಕ ದಾಳಿ ನಡೆಸಿ ನೆರೆಯ ಪಾಕಿಸ್ಥಾನಕ್ಕೆ ಓಡಿಹೋದರೆ ಭಾರತ ಪಾಕಿಸ್ಥಾನವನ್ನು ಪ್ರವೇಶಿಸಲಿದೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ ಮರುದಿನ ಪಾಕ್ ಪ್ರತಿಕ್ರಿಯೆ ನೀಡಿದೆ.
‘ನಮ್ಮ ದೇಶ ಯಾವಾಗಲೂ ಶಾಂತಿಗಾಗಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ ಆದರೆ ಶಾಂತಿಯ ಬಯಕೆಯನ್ನು ತಪ್ಪಾಗಿ ಗ್ರಹಿಸಬಾರದು’ ಎಂದು ಪಾಕಿಸ್ಥಾನದ ವಿದೇಶಾಂಗ ಕಚೇರಿಯ ಹೇಳಿಕೆ ನೀಡಿದೆ.
“ಪಾಕಿಸ್ಥಾನದ ದೃಢ ಸಂಕಲ್ಪ ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಇತಿಹಾಸವು ದೃಢೀಕರಿಸುತ್ತದೆ, ಭಾರತದ ಆಡಳಿತ ವ್ಯವಸ್ಥೆ ಚುನಾವಣ ಲಾಭಕ್ಕಾಗಿ ದ್ವೇಷಪೂರಿತ ವಾಕ್ಚಾತುರ್ಯವನ್ನು ಆಶ್ರಯಿಸುತ್ತಿದೆ’ ಎಂದು ಟೀಕಿಸಿದೆ.
”ಪಾಕಿಸ್ಥಾನ ನಮ್ಮ ನೆರೆಯ ದೇಶ. ಇತಿಹಾಸವನ್ನು ನೋಡಿ. ಇಲ್ಲಿಯವರೆಗೆ, ನಾವು ವಿಶ್ವದ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ ಅಥವಾ ಯಾವುದೇ ದೇಶದ ಒಂದಿಂಚು ಭೂಮಿಯನ್ನು ಆಕ್ರಮಿಸಲು ಪ್ರಯತ್ನಿಸಿಲ್ಲ. ಇದು ಭಾರತದ ಸ್ವಭಾವ. ಆದರೆ ಯಾರಾದರೂ ಭಾರತಕ್ಕೆ ಕೋಪದ ಕಣ್ಣುಗಳನ್ನು ತೋರಿಸಿದರೆ, ಮತ್ತೆ ಮತ್ತೆ ಭಾರತಕ್ಕೆ ಬಂದು ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದರೆ, ನಾವು ಅವರನ್ನು ಬಿಡುವುದಿಲ್ಲ” ಎಂದು ಖಾಸಗಿ ಮಾಧ್ಯಮ ‘ದಿ ಗಾರ್ಡಿಯನ್’ ಜತೆ ಮಾತನಾಡಿದ ಸಿಂಗ್ ಪ್ರತಿಪಾದಿಸಿದ್ದರು.