Advertisement

ಪ್ರತೀಕಾರಕ್ಕೆ ಮುಂದಾದ ಪಾಕ್‌

02:00 AM Aug 28, 2019 | mahesh |

ನವದೆಹಲಿ/ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗಕ್ಕೊಳಗಾದರೂ, ‘ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ’ ಎಂಬಂತೆ ವರ್ತಿಸುತ್ತಿದೆ. ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಜಾಗತಿಕ ಸಮುದಾಯ ಸ್ಪಷ್ಟಪಡಿಸಿದ್ದರೂ, ಸುಮ್ಮನಿರದ ಪಾಕಿಸ್ತಾನ ಮತ್ತೆ ಮತ್ತೆ ಬೇರೆ ಬೇರೆ ದೇಶಗಳ ಕದ ತಟ್ಟುತ್ತಿದೆ. ಅಷ್ಟೇ ಅಲ್ಲ, ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ.

Advertisement

ಅದಕ್ಕೆ ಪೂರಕವೆಂಬಂತೆ, ಭಾರತದ ವಿಮಾನಗಳಿಗೆ ಪಾಕ್‌ ವಾಯುಪ್ರದೇಶವನ್ನು ಸಂಪೂರ್ಣವಾಗಿ ನಿಷೇಧಿಸಲು ಪ್ರಧಾನಿ ಇಮ್ರಾನ್‌ ಖಾನ್‌ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಪಾಕ್‌ ಸಚಿವ ಫ‌ವಾದ್‌ ಹುಸೇನ್‌ ಮಂಗಳವಾರ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಭಾರತವು ಅಫ್ಘಾನಿಸ್ತಾನದೊಂದಿಗೆ ವ್ಯಾಪಾರ -ವಹಿವಾಟು ನಡೆಸಲು ತನ್ನ ನೆಲವನ್ನು ಬಳಸುತ್ತಿದ್ದು, ಇನ್ನು ಮುಂದೆ ಅದಕ್ಕೂ ನಿರ್ಬಂಧ ವಿಧಿಸಲು ಚಿಂತನೆ ನಡೆಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಸೌದಿ, ಚೀನಾ ಜತೆ ಚರ್ಚೆ: ಮಂಗಳವಾರ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಸೌದಿ ಅರೇಬಿಯಾದ ಭಾವೀ ದೊರೆ ಮೊಹಮ್ಮದ್‌ ಬಿಲ್ ಸಲ್ಮಾನ್‌ರಿಗೆ ಮತ್ತೂಮ್ಮೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಕಣಿವೆ ರಾಜ್ಯದ ಪರಿಸ್ಥಿತಿ ಕುರಿತು ಸಲ್ಮಾನ್‌ರೊಂದಿಗೆ ಖಾನ್‌ ಚರ್ಚಿಸಿದ್ದಾರೆ. ಇದೇ ವೇಳೆ, ಪಾಕ್‌ ಸೇನಾ ಮುಖ್ಯಸ್ಥ ಜ. ಖಮರ್‌ ಜಾವೇದ್‌ ಬಾಜ್ವಾ ಅವರು ಚೀನಾದ ಸೇನಾ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆಸಿದ್ದಾರೆ.

23ನೇ ದಿನ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ವಾಪಸ್‌ ಪಡೆದು ಮಂಗಳವಾರಕ್ಕೆ 23 ದಿನ ಪೂರ್ಣಗೊಂಡಿದೆ. ಕಣಿವೆ ರಾಜ್ಯದ ಸ್ಥಿತಿ ಶಾಂತಿಯುತವಾಗಿದ್ದರೂ, ನಿರ್ಬಂಧಗಳಿಂದಾಗಿ ಜನಜೀವನ ಇನ್ನೂ ಅಸ್ತವ್ಯಸ್ತವಾಗಿಯೇ ಇದೆ. ಮಾರುಕಟ್ಟೆಗಳು, ಶಾಲೆಗಳು ಇನ್ನೂ ತೆರೆದಿಲ್ಲ.

ಚರ್ಚೆ: ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಮಂಗಳವಾರ ಸಭೆ ಸೇರಿ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಪ್ರಕ್ರಿಯೆ ಕುರಿತು ಚರ್ಚೆ ನಡೆಸಿದ್ದಾರೆ. ಕೇಂದ್ರದ ಪ್ರಮುಖ ಸಚಿವಾಲಯಗಳ ಕಾರ್ಯ ದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ನಡುವೆ, ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯ 6 ಸದಸ್ಯರ ತಂಡ ಕಣಿವೆ ರಾಜ್ಯಕ್ಕೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳಿಗೆ ಸ್ಥಳ ಗುರುತಿಸುವ ಕಾರ್ಯ ಕೈಗೊಂಡಿದೆ.

Advertisement

ಈಗ ಮುಜಫ‌್ಪರಾಬಾದ್‌ ಉಳಿಸಿಕೊಳ್ಳೋ ಚಿಂತೆ!
‘ಹಿಂದೆಲ್ಲ ಪಾಕಿಸ್ತಾನವು ಶ್ರೀನಗರವನ್ನು ಭಾರತದಿಂದ ಕಸಿದುಕೊಳ್ಳುವುದು ಹೇಗೆ ಎಂದೇ ಯೋಚಿಸುತ್ತಿತ್ತು. ಆದರೀಗ, ಆಜಾದ್‌ ಕಾಶ್ಮೀರದ ಮುಜಫ‌್ಫರಾಬಾದ್‌ ಉಳಿಸಿಕೊಳ್ಳುವುದು ಹೇಗೆಂದು ಯೋಚಿಸುತ್ತಿದೆ’. ಹೀಗೆಂದು ಹೇಳಿರುವುದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್ ಭುಟ್ಟೋ ಜರ್ದಾರಿ. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರದ ವೈಫ‌ಲ್ಯಗಳ ಕುರಿತು ಈ ರೀತಿ ಭುಟ್ಟೋ ಕಿಡಿಕಾರಿದ್ದಾರೆ. ‘ಪಾಕ್‌ನಲ್ಲಿ ನಿಮ್ಮಷ್ಟು ವಿಫ‌ಲವಾದ ಸರ್ಕಾರ ಯಾವತ್ತೂ ಇರಲಿಲ್ಲ. ಅಷ್ಟರಲ್ಲಿ ಮೋದಿ ಕಾಶ್ಮೀರವನ್ನು ಕಿತ್ತುಕೊಂಡರು. ಈಗ ಪಾಕಿಸ್ತಾನವು ಹಿಂದಿನ ನೀತಿ ಬದಲಿಸುವಸ್ಥಿತಿಗೆ ಬಂದಿದೆ’ ಎಂದಿದ್ದಾರೆ.

ಇಬ್ಬರ ಅಪಹರಿಸಿ ಹತ್ಯೆ
ದಕ್ಷಿಣ ಕಾಶ್ಮೀರದ ತ್ರಾಲ್ನಲ್ಲಿ ಗುಜ್ಜರ್‌ ಸಮುದಾಯದ ಇಬ್ಬರನ್ನು ಅಪಹರಿಸಿ, ಹತ್ಯೆಗೈಯ್ಯಲಾಗಿದೆ. ಶಂಕಿತ ಜೈಶ್‌-ಎ- ಮೊಹಮ್ಮದ್‌ನ ಉಗ್ರರು ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. 370ನೇ ವಿಧಿ ರದ್ದಾದ ಬಳಿಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ಅಬ್ದುಲ್ ಖಾದಿರ್‌ ಕೊಹ್ಲಿ ಮತ್ತು ಅವರ ಸಂಬಂಧಿ ಮನ್ಸೂರ್‌ ಅಹ್ಮದ್‌ ಕೊಹ್ಲಿ ಎಂಬವರನ್ನು ಆ.18ರಂದು ರಾತ್ರಿ ಅಪಹರಿಸಲಾಗಿತ್ತು. ಮಂಗಳವಾರ ಇವರಿಬ್ಬರ ಮೃತದೇಹ ಗಳು ಪತ್ತೆಯಾಗಿದ್ದು, ದೇಹ ಪೂರ್ತಿ ಗುಂಡುಗಳು ಹೊಕ್ಕಿವೆ.

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿರುವುದು ರಾಜಕೀಯ ವಿಚಾರ ಅಲ್ಲವೇ ಅಲ್ಲ. ಅದೊಂದು ರಾಷ್ಟ್ರೀಯ ವಿಚಾರ. ದೇಶದ ಒಳಿತಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಎಂ.ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

Advertisement

Udayavani is now on Telegram. Click here to join our channel and stay updated with the latest news.

Next