ಕರಾಚಿ: ವಿಪಕ್ಷಗಳು ಪಾಕಿಸ್ತಾನದ ಸಂಸತ್ ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಹೇಳಿರುವ ನಡುವೆಯೇ ಆಡಳಿತಾರೂಢ ಪಕ್ಷದ ಸುಮಾರು 20ಕ್ಕೂ ಅಧಿಕ ಸಂಸದರು ಬಹಿರಂಗವಾಗಿ ಬಂಡಾಯದ ಬೆದರಿಕೆಯೊಡ್ಡಿರುವುದು ಪ್ರಧಾನಿ ಇಮ್ರಾನ್ ಖಾನ್ ಗೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನಿಮ್ಮ ಫೋಟೋವನ್ನು ವಾಟ್ಸಾಪ್ ಸ್ಟಿಕ್ಕರ್‌ಗಳಾಗಿ ಪರಿವರ್ತಿಸಬೇಕೆ? ಇಲ್ಲಿದೆ ಸುಲಭ ಉಪಾಯ
ಅಧಿಕಾರದ ಗದ್ದುಗೆಯಲ್ಲಿ ಮುಂದುವರಿಯಬೇಕೆಂದು ಹೆಣಗಾಡುತ್ತಿರುವ ಇಮ್ರಾನ್ ಖಾನ್ ಗೆ ತನ್ನದೇ ಪಕ್ಷದ ಸಂಸದರು ಬಂಡಾಯ ಎದ್ದಿರುವುದು ಮತ್ತೊಂದು ಹೊಡೆತ ನೀಡಿದಂತಾಗಿದೆ.
ಪಾಕಿಸ್ತಾನ್ ಮುಸ್ಲಿಮ್ ಲೀಗ್ ನವಾಜ್ (ಪಿಎಂಎಲ್ ಎನ್) ಹಾಗೂ ಪಾಕಿಸ್ತಾನ್ ಪೀಪಲ್ಸ್ ಪಕ್ಷದ ಸುಮಾರು 100 ಮಂದಿ ಸಂಸದರು ಮಾರ್ಚ್ 28ರಂದು ಪಾಕಿಸ್ತಾನದ ಸಂಸತ್ ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಘೋಷಿಸಿವೆ.
ದೇಶದ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರಕ್ಕೆ ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಸರ್ಕಾರವೇ ಕಾರಣ ಎಂದು ಆರೋಪಿಸಿರುವ ವಿಪಕ್ಷಗಳು, ಈ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ತಿಳಿಸಿವೆ.
ಮಾರ್ಚ್ 21ರಿಂದ ಪಾಕಿಸ್ತಾನದ ಸಂಸತ್ ಕಲಾಪ ಆರಂಭಗೊಳ್ಳುವ ನಿರೀಕ್ಷೆ ಇದ್ದು, ಮಾರ್ಚ್ 28ರಂದು ಅವಿಶ್ವಾಸ ನಿರ್ಣಯದ ಕುರಿತು ಮತದಾನ ನಡೆಯುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಮಾರ್ಚ್ 28ರಂದು ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ಗೆ ಸೋಲಾದರೆ ಗದ್ದುಗೆಯಿಂದ ಕೆಳಗಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವರದಿ ತಿಳಿಸಿದೆ.