ಶಿಮ್ಲಾ: ಭಾರತೀಯ ಸೇನೆಯಲ್ಲಿನ ಒಗ್ಗಟ್ಟನ್ನು ಒಡೆಯಲು ಪಾಕಿಸ್ಥಾನ ಮತ್ತೂಂದು ಸಂಚು ರೂಪಿಸಿದೆಯೇ? ಇಂಥದ್ದೊಂದು ಪ್ರಶ್ನೆಯನ್ನು ಈಗ ಹಿಮಾಚಲ ಪ್ರದೇಶದ ಧರ್ಮಶಾಲಾ ಕಂಟೋನ್ಮೆಂಟ್‌ನಲ್ಲಿ ಶನಿವಾರ ನಡೆದಿರುವ ಪ್ರಸಂಗ ತೇಲಿಬಿಟ್ಟಿದೆ.
ಇತ್ತೀಚೆಗೆ, ಭಾರತೀಯ ಸೇನೆಯ ಗುಪ್ತಚರ ದಳದ ಮುಖ್ಯಸ್ಥರ ವಿರುದ್ಧ ಸೈನಿಕರನ್ನು ಎತ್ತಿಕಟ್ಟಲು ಪ್ರೇರೇಪಿಸುವಂಥ ಕರಪತ್ರವೊಂದು ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿ, ಆನಂತರ ಅದು ಪಾಕಿಸ್ಥಾನದ ಐಎಸ್‌ಐ ಕುತಂತ್ರವೆಂದು ಸಾಬೀತಾಗಿತ್ತು.
ಇದೀಗ, ಧರ್ಮಶಾಲಾ ಕಂಟೋನ್ಮೆಂಟ್‌ನ ಬ್ರಿಗೇಡಿಯರ್ ಹಾಗೂ ಅವರ ಪತ್ನಿ ಸೈನಿಕರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿ ದ್ದಾರೆಂದು ಆರೋಪವಿರುವ ಕರಪತ್ರಗಳು ಇಡೀ ಕಂಟೋನ್ಮೆಂಟ್‌ನಲ್ಲಿ ಮಾತ್ರವಲ್ಲ ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲೂ ಗಿರಕಿ ಹೊಡೆಯುತ್ತಿದ್ದು ಅಲ್ಲಿನ ಅಧಿಕಾರಿಗಳು ಪಾಕಿಸ್ಥಾನದ ಕಡೆಗೆ ಅನುಮಾನದಿಂದ ನೋಡುವಂತೆ ಮಾಡಿದೆ.
ಪ್ರಾಥಮಿಕ ತನಿಖೆಯಲ್ಲಿ, ಕಂಟೋ ನ್ಮೆಂಟ್ ಪ್ರಾಂತ್ಯಕ್ಕೆ ದಿನಪತ್ರಿಕೆ ಹಂಚುವ ಹುಡುಗರಿಗೆ ಯಾರೋ ತಲಾ 200 ರೂ. ನೀಡಿ ಕರಪತ್ರಗಳನ್ನು ದಿನಪತ್ರಿಕೆ ಜತೆ ಹಂಚುವಂತೆ ತಿಳಿಸಿರುವುದು ಅಧಿಕಾರಿಗಳ ಅನುಮಾನ ಹೆಚ್ಚಿಸಿದೆ.
ಏನಿದೆ ಕರಪತ್ರದಲ್ಲಿ?: ಬ್ರಿಗೇಡಿಯರ್ ಪತ್ನಿ ಜವಾನರ ಪತ್ನಿಯರನ್ನು ತನ್ನ ಮುಂದೆ ನೃತ್ಯ ಮಾಡುವಂತೆ ಸೂಚಿಸುತ್ತಾರೆ. ಯೋಧರಿಗೆ ಆರೋಗ್ಯ ಸೌಲಭ್ಯಗಳಿಲ್ಲ. ತುರ್ತು ಸಂದರ್ಭ ಗಳಲ್ಲೂ ಆಸ್ಪತ್ರೆಗೆ ಸಾಗಲು ವಾಹನ ಸೌಕರ್ಯ ನೀಡುವುದಿಲ್ಲ. ಯೋಧರ ವಸತಿಗಳು ಕಳಪೆ ಮಟ್ಟದಲ್ಲಿದ್ದರೂ ಬ್ರಿಗೇಡಿಯರ್ ತನ್ನ ನಿವಾಸದ ಆಧುನೀಕರಣಕ್ಕೆ 60 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೇನೆ, ಕರಪತ್ರದಲ್ಲಿ ಬ್ರಿಗೇಡಿಯರ್ ಹೆಸರು ಬಿಟ್ಟರೆ ಮಿಕ್ಕಿದ್ದೆಲ್ಲಾ ತಪ್ಪು ಮಾಹಿತಿ ಎಂದಿದೆ.