ಹುಬ್ಬಳ್ಳಿ: ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ ಬೆನ್ನಲ್ಲೇ, ಇಲ್ಲಿನ ಬುಡರಸಿಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಡೆಗಳ ಮೇಲೆ “ಪಾಕಿಸ್ತಾನ ಜಿಂದಾಬಾದ್’ ಬರಹ ಬರೆದಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಶಾಲೆಯ ಗೋಡೆಗಳ ಮೇಲೆ ನಾಲ್ಕೆದು ಕಡೆ ಪಾಕಿಸ್ತಾನ ಜಿಂದಾಬಾದ್, ಟಿಪ್ಪು ಸುಲ್ತಾನ ಶಾಲೆ ಎಂದು ಚಾಕ್‌ಪೀಸ್‌ನಿಂದ ಬರೆದಿದ್ದಾರೆ. ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಶನಿವಾರ ಮಧ್ಯಾಹ್ನದ ನಂತರ ಶಾಲೆ ತೆರೆದಿರಲಿಲ್ಲ. ಸೋಮವಾರ ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಗೆ ಬಂದಾಗ ಗೋಡೆ ಹಾಗೂ ಬಾಗಿಲು ಮೇಲೆ ದುಷ್ಕರ್ಮಿಗಳು ಬರಹ ಬರೆದಿದ್ದರು. ಈ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಗ್ರಾಮಸ್ಥರು ಶಾಲೆ ಆವರಣದಲ್ಲಿ ಜಮಾಯಿಸಿದರು. ಈ ಕುರಿತು ಸಮಗ್ರ ತನಿಖೆ ನಡೆಸಿ, ದೇಶದ್ರೋಹಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
10 ದಿನದೊಳಗೆ 2ನೇ ಪ್ರಕರಣ: ತಾಲೂಕಿನ ಕೊಟಗುಣಸಿಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಕಾಶ್ಮೀರ ಮೂಲದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿ ಫೆ.15ರಂದು ಬಂಧಿತರಾಗಿದ್ದರು. ಈ ಘಟನೆ ನಡೆದು 10 ದಿನಗಳೊಳಗಾಗಿ ಮತ್ತೆ ಅಂತಹ ಪ್ರಕರಣ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಲೆಯ ಮುಖ್ಯಶಿಕ್ಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಬುಡರಸಿಂಗಿಯ ಸರ್ಕಾರಿ ಶಾಲೆ ಗೋಡೆ ಮತ್ತು ಬಾಗಿಲು ಮೇಲೆ ದುಷ್ಕರ್ಮಿಗಳು ಪಾಕಿಸ್ತಾನ ಜಿಂದಾಬಾದ್ ಎಂಬ ಬರಹ ಬರೆದಿದ್ದು, ಮುಖ್ಯಾಧ್ಯಾಪಕರು ಈ ಕುರಿತು ದೂರು ನೀಡಲಿದ್ದಾರೆ. ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ರಾಮನಗೌಡ ಹಟ್ಟಿ, ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ