Advertisement

ಜೈಲಲ್ಲೇ ಇಲ್ಲ ಉಗ್ರ ಹಫೀಜ್‌ !

11:55 PM Nov 26, 2020 | mahesh |

ಹೊಸದಿಲ್ಲಿ: ಮುಂಬಯಿ ನಗರದಲ್ಲಿ 26/11ರ ದಾಳಿಯ ಮಾಸ್ಟರ್‌ಮೈಂಡ್‌, ಎಲ್‌ಇಟಿ ಉಗ್ರ ಸಂಘಟನೆಯ ಸ್ಥಾಪಕ ಹಫೀಜ್‌ ಸಯೀದ್‌ ಲಾಹೋರ್‌ನ ಮನೆಯಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದು, ಅಲ್ಲಿಂದಲೇ ಉಗ್ರ ಸಂಘಟನೆಯನ್ನು ನಿರ್ವಹಿಸುತ್ತಿದ್ದಾನೆ!

Advertisement

ಇದು ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿರುವ ಮಾಹಿತಿ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಕ್ಕೆ ಒಳಗಾಗಿರುವ ಉಗ್ರನನ್ನು ಜೈಲಿನಲ್ಲಿ ಇರಿಸದೆ ಪಾಕ್‌ ಆತನಿಗೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಿ ಕೊಟ್ಟಿದೆ, ತನ್ಮೂಲಕ ಎಲ್ಲರ ಕಣ್ಣಿಗೆ ಮಣ್ಣೆರಚಿದೆ.

2019ರ ಜುಲೈಯಲ್ಲಿ ಸಯೀದ್‌ನನ್ನು ಬಂಧಿಸ ಲಾಗಿತ್ತು. ಆದಾದ ಕೆಲವೇ ತಿಂಗಳುಗಳಲ್ಲಿ ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಆತನಿಗೆ 10 ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಕೋರ್ಟ್‌ ತೀರ್ಪು ನೀಡಿತ್ತು. ಕಳೆದ ವಾರವಷ್ಟೇ ಸಯೀದ್‌ಗೆ ಮತ್ತೆರಡು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಘೋಷಿಸಲಾಗಿದೆ. ಆದರೆ ಇದೆಲ್ಲ ಜಗತ್ತಿನ ಬಾಯಿ ಮುಚ್ಚಿಸುವ ತಂತ್ರ ಎನ್ನುವುದು ಗುಪ್ತಚರ ಮಾಹಿತಿಯಿಂದ ಬಹಿರಂಗವಾಗಿದೆ.

ಇತರ ಉಗ್ರರ ಭೇಟಿಯೂ ಅವಕಾಶ !
ಮನೆಯಲ್ಲೇ ಇರುವ ಸಯೀದ್‌ಗೆ ಭದ್ರತೆಯನ್ನೂ ಒದಗಿಸಲಾಗಿದೆ. ಅತಿಥಿಗಳ ಆಗಮನಕ್ಕೂ ಅವಕಾಶ ಕಲ್ಪಿಸಲಾಗಿದೆ. ಕಳೆದ ತಿಂಗಳಷ್ಟೇ “ಘೋಷಿತ ಉಗ್ರ’ರ ಪಟ್ಟಿಗೆ ಸೇರ್ಪಡೆಗೊಂಡಿರುವ 26/11ರ ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್‌ನ ಜೆಹಾದ್‌ ಘಟಕದ ಮುಖ್ಯಸ್ಥ ಝಕೀವುರ್‌ ರೆಹಮಾನ್‌ ಲಖ್ರಿ ಕೂಡ ಉಗ್ರ ಸಯೀದ್‌ನ ಮನೆಗೆ ಬಂದು ಹಲವು ತಾಸುಗಳ ಕಾಲ ಮಾತುಕತೆ ನಡೆಸಿ ವಾಪಸಾಗಿದ್ದ. ಜೆಹಾದ್‌ಗೆ ದೇಣಿಗೆ ಸಂಗ್ರಹ ಸಹಿತ ವಿವಿಧ ವಿಚಾರಗಳ ಕುರಿತು ಈ ವೇಳೆ ಚರ್ಚಿಸಲಾಗಿತ್ತು ಎಂದೂ ಮೂಲಗಳು ತಿಳಿಸಿವೆ.

ಮುಂಬಯಿ ದಾಳಿ ನಡೆದು 12 ವರ್ಷಗಳು ಕಳೆದರೂ ದಾಳಿಕೋರರಿಗೆ ಇನ್ನೂ ಶಿಕ್ಷೆಯಾಗದಿರುವುದರ ಹಿಂದಿನ ಪಾಕಿಸ್ಥಾನದ ನಿಜ ಬಣ್ಣ ಇದರಿಂದ ಬಯಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next