ಇಸ್ಲಾಮಾಬಾದ್ : ಪಾಕಿಸ್ಥಾನ ನಿಷೇಧಿಸಿರುವ ಉಗ್ರ ಸಮೂಹಗಳ ಪಟ್ಟಿಯಲ್ಲಿ ಜೈಶ್ ಎ ಮೊಹಮ್ಮದ್ ಮತ್ತು ಲಷ್ಕರ್ ಎ ತಯ್ಯಬ ಇವೆಯಾದರೂ, LeT ಸಂಘಟನೆಯ ರಾಜಕೀಯ ಮುಖವಾಗಿರುವ ಜಮಾದ್ ಉದ್ ದಾವಾ (ಜೆಯುಡಿ) ನಿಷೇಧದ ಪಟ್ಟಿಯಲ್ಲಿ ಇಲ್ಲದಿರುವುದು ಇದೀಗ ಬಹಿರಂಗವಾಗಿದೆ.
ಇದರೊಂದಿಗೆ ಪಾಕಿಸ್ಥಾನ ಈಗಲೂ ಉಗ್ರ ನಿಗ್ರಹ ವಿಚಾರದಲ್ಲಿ ಭಾರತ ಮತ್ತು ಅಂತಾರಾಷ್ಟ್ರೀಯ ಸಮುದಾಯವನ್ನು ವಂಚಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ವರದಿಗಳು ತಿಳಿಸಿವೆ.
ಹಾಗಿದ್ದರೂ ಪಾಕಿಸ್ಥಾನ ಸರಕಾರ, “ಜಮಾತ್ ಉದ್ ದಾವಾ ಮೇಲೆ ನಾವು ನಿಗಾ ಇರಿಸಿದ್ದೇವೆ; ಇದನ್ನು ನಾವಿನ್ನೂ ನಿಷೇಧಿಸಿಲ್ಲ’ ಎಂದು ಹೇಳಿದೆ.
ಜಮಾತ್ ಉದ್ ದಾವಾ ಜತೆಗೂಡಿ ಕೆಲಸ ಮಾಡುತ್ತಿರುವ ಫಲಾಹ್ ಎ ಇನ್‌ಸಾನಿಯತ್ (ಎಫ್ಐಎಫ್) ಎಂಬ ಸಂಘಟನೆ, ತಾನು ದಾನ-ದತ್ತಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಾಗಿ ಹೇಳಿಕೊಳ್ಳುತ್ತಿದೆ. ಈ ಸಂಘಟನೆ ಕೂಡ ತನ್ನ ಉಗ್ರ ನಿಗ್ರಹ ನಿಗಾವಣೆಯಲ್ಲಿ ಇದೆ ಎಂದಷ್ಟೇ ಪಾಕ್ ಸರಕಾರ ಹೇಳಿದೆ.
ಜೆಯುಡಿ ಮತ್ತು ಎಫ್ ಐ ಎಫ್ ಸಂಘಟನೆಗಳನ್ನು ತಾನು ನಿಷೇಧಿಸಿರುವುದಾಗಿ ಪಾಕ್ ಸರಕಾರ ಕಳೆದ ಫೆ.21ರಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿತ್ತು. ಆದರೂ ಆ ಬಗ್ಗೆ ಅಧಿಸೂಚನೆಯನ್ನು ಇನ್ನೂ ಪಾಕ್ ಸರಕಾರ ಹೊರಡಿಸಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ.