Advertisement

ಕಡೆಗೂ ಪಾಕ್‌ ನೆರವಿಗೆ ಐಎಂಎಫ್… ಪಾಕ್‌ 3 ಬಿಲಿಯನ್‌ ಡಾಲರ್‌ ನೀಡಲು ಸಮ್ಮತಿ

09:42 PM Jun 30, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನದ ಆರ್ಥಿಕತೆ ಹಳ್ಳಹಿಡಿದು, ಹಣದುಬ್ಬರ ವಿಪರೀತವಾಗಿ ಜನರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ಈ ಹೊತ್ತಿನಲ್ಲಿ, ಒಂದು ಸಂತೋಷದ ಸುದ್ದಿ ಸಿಕ್ಕಿದೆ. ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ) 3 ಬಿಲಿಯನ್‌ ಡಾಲರ್‌ ಸಾಲ ನೀಡಲು ಒಪ್ಪಿಕೊಂಡಿದೆ. ಶ್ರೀಲಂಕಾದಂತೆ ದಿವಾಳಿಯಂಚಿಗೆ ತಲುಪಿದ್ದ ಪಾಕಿಸ್ತಾನ, ತನ್ನನ್ನು ಉಳಿಸಿಕೊಳ್ಳಲು ಐಎಂಎಫ್ ಮೊರೆ ಹೋಗಿತ್ತು. ಆದರೆ ಐಎಂಎಫ್ ವಿಧಿಸಿದ್ದ ಷರತ್ತುಗಳಿಗೆ ಪಾಕ್‌ ಸರ್ಕಾರ ಒಪ್ಪಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಹತ್ತಿರಹತ್ತಿರ ಒಂದು ವರ್ಷದಿಂದ ಈ ತಕರಾರು ನಡೆದುಕೊಂಡು ಬಂದಿತ್ತು. ಇದೀಗ ಒಂದು ನಿಲುಗಡೆಗೆ ಬಂದಿದೆ.

Advertisement

ಬಾಹ್ಯ ಆರ್ಥಿಕ ಒತ್ತಡಗಳಿಂದ ಕುಸಿದಿರುವ ಪಾಕ್‌ಗೆ ತಕ್ಷಣ ನೆರವು ನೀಡಲಿದ್ದೇವೆ. ಐಎಂಎಫ್, ಪಾಕ್‌ ಸರ್ಕಾರದೊಂದಿಗೆ ಅಧಿಕಾರಿಗಳ ಮಟ್ಟದಲ್ಲಿ 9 ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ಜುಲೈ ಮಧ್ಯಭಾಗದಲ್ಲಿ ಅಂಗೀಕೃತಗೊಳ್ಳಬಹುದು ಎಂದು ಐಎಂಎಫ್ ಅಧಿಕಾರಿ ನಥನ್‌ ಪೋರ್ಟರ್‌ ಹೇಳಿದ್ದಾರೆ. ಇತ್ತೀಚೆಗಷ್ಟೇ ಪಾಕ್‌ಗೆ 1 ಬಿಲಿಯನ್‌ ಡಾಲರ್‌ ಸಾಲ ನೀಡಲು ಚೀನಾ ತೀರ್ಮಾನಿಸಿತ್ತು. ಹೀಗೆ ನೋಡಿದರೆ ಪಾಕ್‌ ಸದ್ಯದ ಮಟ್ಟಿಗೆ ದಿವಾಳಿಯಾಗುವುದರಿಂದ ತಪ್ಪಿಸಿಕೊಳ್ಳಲು ಅವಕಾಶವಿದೆ. ವಿಶೇಷವೆಂದರೆ ಪಾಕ್‌ 2.5 ಬಿಲಿಯನ್‌ ಡಾಲರ್‌ ನೆರವನ್ನು ನಿರೀಕ್ಷಿಸುತ್ತಿತ್ತು. ಆದರೆ ಈಗ 3 ಬಿಲಿಯನ್‌ ಡಾಲರ್‌ ಪಡೆದುಕೊಳ್ಳುವ ಸಂತೋಷದಲ್ಲಿದೆ.

ಹಲವು ವರ್ಷಗಳಿಂದ ಪಾಕ್‌ನ ಆರ್ಥಿಕತೆ ಕುಸಿಯುತ್ತಲೇ ಇದೆ. ಇದರಿಂದ ಜನ ವಿಪರೀತ ಸಂಕಷ್ಟಕ್ಕೆ ಸಿಲುಕಿದ್ದರು. ಹಣದುಬ್ಬರವನ್ನು ಪಾಕ್‌ ಸರ್ಕಾರಕ್ಕೆ ತಡೆಯಲಾಗದ ಪರಿಣಾಮ ದಿನವಹಿ ಬದುಕಿಗೂ ಜನ ಪರದಾಡಲು ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next