ಲಾಹೋರ್(ಇಸ್ಲಾಮಾಬಾದ್): ಲಾಹೋರ್ ನ ಭೂಗತ ಪಾತಕಿ, ಗೂಡ್ಸ್ ಟ್ರಾನ್ಸ್ ಪೋರ್ಟ್ ನೆಟ್ ವರ್ಕ್ ನ ಮಾಲೀಕ ಅಮೀರ್ ಬಾಲಾಜ್ ಟಿಪು ಎಂಬಾತನನ್ನು ಮದುವೆ ಸಮಾರಂಭದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಚುಂಗ್ ಪ್ರದೇಶದಲ್ಲಿ ನಡೆದಿರುವುದಾಗಿ ಖಾಸಗಿ ಟಿವಿ ಚಾನೆಲ್ ವೊಂದು ವರದಿ ಮಾಡಿದೆ.
ಇದನ್ನೂ ಓದಿ:Papua New Guinea: ಬುಡಕಟ್ಟು ಜನಾಂಗದ ನಡುವಿನ ಘರ್ಷಣೆಯಲ್ಲಿ 53 ಮಂದಿ ಹತ್ಯೆ…
2010ರಲ್ಲಿ ಅಲ್ಲಾಮ ಇಕ್ಬಾಲ್ ವಿಮಾನ ನಿಲ್ದಾಣದಲ್ಲಿ ನಡೆದ ಮಾರಣಾಂತಿಕ ದಾಳಿಯಲ್ಲಿ ಸಾವಿಗೀಡಾಗಿದ್ದ ಆರೀಫ್ ಅಮೀರ್ ಅಲಿಯಾಸ್ ಟಿಪು ಟ್ರಂಕನ್ ವಾಲಾನ ಪುತ್ರ ಅಮೀರ್ ಬಾಲಾಜ್ ಟಿಪು ಕೂಡಾ ಗುಂಡಿನ ದಾಳಿಯಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.
ಬಾಲಾಜ್ ಅಜ್ಜ ಕೂಡಾ ಹಳೆಯ ವೈಷಮ್ಯದಲ್ಲಿ ಸಿಲುಕಿಕೊಂಡಿದ್ದು, ಅವರ ಇಡೀ ಕುಟುಂಬವೇ ಹಿಂಸಾಚಾರದಲ್ಲಿ ಶಾಮೀಲಾಗಿತ್ತು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಮದುವೆ ಸಮಾರಂಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಬಾಲಾಜ್ ಹಾಗೂ ಇಬ್ಬರು ಗಾಯಗೊಂಡಿದ್ದರು. ಕೂಡಲೇ ಬಾಲಾಜ್ ನ ಸಹಚರರು ಪ್ರತಿದಾಳಿ ನಡೆಸಿದ ಪರಿಣಾಮ ದಾಳಿಕೋರರು ಹತ್ಯೆಗೀಡಾಗಿರುವುದಾಗಿ ವರದಿ ತಿಳಿಸಿದೆ.
ಬಾಲಾಜ್ ನನ್ನು ಜಿನ್ನಾ ಆಸ್ಪತ್ರೆಗೆ ದಾಖಲಿಸಿದ್ದರು ಕೂಡಾ, ಅಷ್ಟರಲ್ಲೇ ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದ್ದರು. ಘಟನೆ ಬಗ್ಗೆ ವಿಷಯ ತಿಳಿದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಇಡೀ ಪ್ರದೇಶವನ್ನು ಬಂದ್ ಮಾಡಿದ್ದು, ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.