ಪುಲ್ವಾಮಾದಲ್ಲಿ ಉಗ್ರರ ದಾಳಿಯಾದ ದಿನದಿಂದಲೂ ಪಾಕಿಸ್ಥಾನ, ಭಾರತದ ಕಡೆಗೆ ಒಂದು ನಿಗಾ ಇರಿಸಿಯೇ ಇತ್ತು. ಯಾವ ಕ್ಷಣದಲ್ಲಾದರೂ ಭಾರತ, ತನ್ನ ಹಿಡಿತವಿರುವ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಮೇಲೆ ದಾಳಿ ನಡೆಸಲಿದೆ ಎಂಬ ಅರಿವು ಹಾಗೂ ನಿರೀಕ್ಷೆ ಪಾಕಿಸ್ಥಾನ ಕ್ಕಿತ್ತು. ಹಾಗಿದ್ದ ಮೇಲೆ ದಾಳಿ ಸಂಭವಿಸುವವರೆಗೂ ಪಾಕಿಸ್ಥಾನ ಕ್ಕೆ ಏಕೆ ಅದು ಗೊತ್ತಾಗಲಿಲ್ಲ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಸಾಮಾನ್ಯವಾಗಿ ಯಾವುದೇ ದೇಶದ ವಾಯು, ಭೂಮಿ ಹಾಗೂ ಜಲ ಮಾರ್ಗಗಳ ಗಡಿಗಳ ಮೇಲೆ ಆಯಾ ದೇಶಗಳು ಕಟ್ಟುನಿಟ್ಟಿನ ನಿಗಾ ಇಟ್ಟಿರುತ್ತವೆ. ಜತೆಗೆ, ನೆರೆ ರಾಷ್ಟ್ರಗಳ ಸೇನೆಗಳ ಚಲನ ವಲನಗಳ ಮೇಲೂ ಎಚ್ಚರಿಕೆ ವಹಿಸಿರುತ್ತವೆ. ಪಾಕಿಸ್ಥಾನ ಕೂಡ ಅದನ್ನೇ ಮಾಡಿತ್ತು. ಆದರೆ, ಆ ಸರಿಹೊತ್ತಿನಲ್ಲಿ ಪಾಕಿಸ್ಥಾನ ವನ್ನು ಕೊಂಚ ತಪ್ಪು ಹೆಜ್ಜೆ ಇಡುವಂತೆ ಮಾಡಿದ್ದು ಭಾರತೀಯ ವಾಯುಪಡೆಯ ಹೆಗ್ಗಳಿಕೆ.
ಭಾರತದ ಮಧ್ಯಭಾಗದಲ್ಲಿ ಹಾಗೂ ಪಶ್ಚಿಮ ಭಾಗದಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಹಲವಾರು ನೆಲೆಗಳಿವೆ. ದಾಳಿಗಾಗಿ ಹೊರಟ ವಿಮಾನಗಳು ಒಂದೇ ನೆಲೆಯಿಂದ ಹೊರಟಿರಲಿಲ್ಲ. ಮಧ್ಯ, ಪಶ್ಚಿಮ ಭಾಗದ ನೆಲೆಗಳಿಂದ ಒಂದೇ ಬಾರಿಗೆ ಆಕಾಶಕ್ಕೆ ನೆಗೆದಿದ್ದವು. ಪಾಕಿಸ್ಥಾನ ಕ್ಕೆ ಇದರ ಸುಳಿವು ಸಿಕ್ಕಿತ್ತಾದರೂ ಆ ಕ್ಷಣಕ್ಕೆ ಅವು ಎಲ್ಲಿಗೆ ಹೊರಟಿವೆ ಎಂಬುದು ಗೊತ್ತಾಗಲಿಲ್ಲ. ಇಂಥ ಗೊಂದಲದಲ್ಲಿ ಅದು ಇರುವಂತೆಯೇ, ಯಾವುದೋ ದಿಕ್ಕಿನಲ್ಲಿ ಸಾಗುತ್ತಿದ್ದ ಈ ಯುದ್ಧ ವಿಮಾನಗಳಲ್ಲಿ ಕೆಲವು ಏಕಾಏಕಿ ಬಾಲ್‌ಕೋಟ್ ಕಡೆಗೆ ತಿರುಗಿಬಿಟ್ಟವು. ಇದು ಪಾಕಿಸ್ಥಾನ ದ ಅರಿವಿಗೆ ಬರುವಷ್ಟರಲ್ಲಿ “ಉಗ್ರ ಸಂಹಾರ’ ನಡೆದೇಬಿಟ್ಟಿತು.
ಡ್ರೋನ್‌ಗಳ ನೆರವು
ಯುದ್ಧ ವಿಮಾನಗಳ ತಂತ್ರಗಾರಿಕೆ ಮೇಲಷ್ಟೇ ಭಾರತೀಯ ವಾಯು ಸೇನೆ ಅವಲಂಬಿಸಿರಲಿಲ್ಲ. ಇವುಗಳ ಜತೆಗೆ, ಸ್ವದೇಶಿ ನಿರ್ಮಿತ “ನೇತ್ರ ಎಇಡಬ್ಲೂ ಆ್ಯಂಡ್ ಸಿ’ ಮತ್ತು “ಹೆರಾನ್’ ಎಂಬ ಇಸ್ರೇಲ್‌ನಿಂದ ಪಡೆಯಲಾದ ಎರಡು ಡ್ರೋನ್‌ಗಳನ್ನು ಆಕಾಶಕ್ಕೆ ಚಿಮ್ಮಿಸಲಾಗಿತ್ತು. ಅವು, ನೆಲದಿಂದ ಸುಮಾರು 10.5 ಕಿ.ಮೀ. ದೂರದಲ್ಲಿ ನಿಂತು ಪಾಕಿಸ್ಥಾನ ದ ವಾಯು ಪಡೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದವು. ಪಾಕ್ ವಾಯು ವಿಮಾನಗಳೇನಾದರೂ ಆಕಾಶಕ್ಕೆ ಬಂದಿದ್ದರೆ ತಕ್ಷಣವೇ ಅದರ ಮಾಹಿತಿ ಭಾರತೀಯ ವಾಯು ಸೇನೆಗೆ ಸಿಗುವಂತೆ ಈ ಕಾರ್ಯತಂತ್ರ ರೂಪಿಸಲಾಗಿತ್ತು.