ಇಸ್ಲಾಮಾಬಾದ್ : ”ದೇಶದ ಚುನಾವಣಾ ಆಯೋಗ ಪೂರ್ವಗ್ರಹ ಪೀಡಿತವಾಗಿದ್ದು ಪಕ್ಷಪಾತಿಯಾಗಿದೆ” ಎಂದು ಆರೋಪಿಸುವ ಮೂಲಕ ನಿಂದನೆ ಅಪರಾಧ ಎಸಗಿರುವ, ರಾಜಕಾಣಿಯಾಗಿ ಪರಿವರ್ತಿತರಾಗಿರುವ ಮಾಜಿ ಕ್ರಿಕೆಟಿಗ, ಇಮ್ರಾನ್ ಖಾನ್ ಅವರನ್ನು ಬಂಧಿಸುವಂತೆ ಪಾಕಿಸ್ಥಾನದ ಚುನಾವಣಾ ಆಯೋಗ ಕೋರಿದೆ.
ಐದು ಸದಸ್ಯರ ಪೀಠದ ನೇತೃತ್ವ ವಹಿಸಿರುವ ದೇಶದ ಮುಖ್ಯ ಚುನಾವಣಾ ಆಯುಕ್ತರು 64ರ ಹರೆಯದ ಇಮ್ರಾನ್ ಖಾನ್ ಬಂಧಕ್ಕೆ ಜಾಮೀನು ರಹಿತ ವಾರಂಟ್ ಜಾರಿ ಮಾಡಿ ಇದೇ ಅಕ್ಟೋಬರ್ 26ರಂದು ನಡೆಸಲಾಗುವ ವಿಚಾರಣೆಯ ವೇಳೆ ಆತನನ್ನು ತನ್ನ ಮುಂದೆ ಹಾಜರುಪಡಿಸುವಂತೆ ಆದೇಶಿಸಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಪಾಕಿಸ್ಥಾನದಲ್ಲಿ ಚುನಾವಣಾ ಆಯೋಗ ಕೂಡ ಅರೆಸ್ಟ್ ವಾರಂಟ್ ಜಾರಿ ಮಾಡಬಹುದಾಗಿದೆ.
ಈ ನಡುವೆ ಇಮ್ರಾನ್ ಖಾನ್ ಅವರ ತೆಹರೀಕ್ ಎ ಇನ್ಸಾಫ್ ಪಕ್ಷ “ಚುನಾವಣಾ ಆಯೋಗದ ನಿರ್ಧಾರವನ್ನು ನಾವು ಹೈಕೋರ್ಟಿನಲ್ಲಿ ಪ್ರಶ್ನಿಸುತ್ತೇವೆ’ ಎಂದು ಹೇಳಿದೆ.
ಕಳೆದ ಸೆ.14ರಂದು ಪಾಕಿಸ್ಥಾನದ ಚುನಾವಣಾ ಆಯೋಗ ಇಮ್ರಾನ್ ಖಾನ್ ವಿರುದ್ಧ ಜಾಮೀನು ಪಡೆಯಬಹುದಾದ ವಾರಂಟನ್ನು ಜಾರಿ ಮಾಡಿ ನಿಂದನೆ ಪ್ರಕರಣದಲ್ಲಿ ಹಾಜರಾಗುವಂತೆ ಸೂಚಿಸಿತ್ತು.
ಆದರೆ ಇಮ್ರಾನ್ ಖಾನ್ ಅವರ ಪಕ್ಷ ಸೆ.20ರಂದು ಇಸ್ಲಾಮಾಬಾದ್ ಹೈಕೋರ್ಟ್ ಮೆಟ್ಟಲೇರಿ ಜಾಮಿನು ಅರೆಸ್ಟ್ ವಾರಂಟನ್ನು ಅಮಾನತು ಮಾಡಿಕೊಂಡಿತ್ತು.