ಹೊಸದಿಲ್ಲಿ: ಐರೋಪ್ಯ ರಾಷ್ಟ್ರಗಳಲ್ಲಿರುವ ಭಾರತ ಮೂಲದ ಸಿಕ್ಖ್ ಸಮುದಾಯಗಳಲ್ಲಿ ಭಾರತ ವಿರೋಧಿ ಅಲೆ ಎಬ್ಬಿಸಲು ಪಾಕಿಸ್ಥಾನ ಪ್ರಯತ್ನಿಸುತ್ತಿರುವ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಭಾರತೀಯ ಗುಪ್ತಚರ ಇಲಾಖೆ ಕಲೆ ಹಾಕಿದೆ. ಈಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಜರ್ಮನಿ, ಬ್ರಿಟನ್, ನೆದರ್ಲೆಂಡ್ ಹಾಗೂ ಇನ್ನಿತರ ಐರೋಪ್ಯ ರಾಷ್ಟ್ರಗಳಲ್ಲಿ ತಲೆಮಾರುಗಳ ಹಿಂದೆ ನೆಲೆಯೂರಿರುವ ಸಿಕ್ಖ್ ಸಮುದಾಯದಲ್ಲಿ ಖಲಿಸ್ಥಾನ್ ಕಿಚ್ಚು ಹೊತ್ತಿಸಲು ಪಾಕಿಸ್ಥಾನ ಶ್ರಮಿಸುತ್ತಿದೆ.
ಈ ಕೆಲಸಕ್ಕಾಗಿಯೇ, ಪಾಕಿಸ್ಥಾನದ ಗುಪ್ತಚರ ಇಲಾಖೆ (ಐಎಸ್‌ಐ) ಒಬ್ಬ ಅಧಿಕಾರಿಯನ್ನು ಲಂಡನ್‌ನಲ್ಲಿರುವ ತನ್ನ ರಾಯಭಾರಿ ಕಚೇರಿಗೆ ಕಳುಹಿಸಿದ್ದು, ಆತ ಖಲಿಸ್ಥಾನ್ ಬೆಂಬಲಿಗರನ್ನು ಗುರುತಿಸಿ ಅವರಿಗೆ ಹಣ ಇತ್ಯಾದಿ ಸಹಕಾರ ನೀಡಿ, ಮತ್ತೆ ಹೋರಾಟ ಮುಂದುವರಿಸುವಂತೆ ಪ್ರೇರೆಪಿಸುತ್ತಿದ್ದಾರೆಂದು ಹೇಳಲಾಗಿದೆ. ಒಂದಾನೊಂದು ಕಾಲದಲ್ಲಿ ಖಲಿಸ್ಥಾನ್‌ಪರವಾಗಿ ಹೋರಾಡಿದ್ದ ಎಸ್ಎಫ್ ಜೆ ಎಂಬ ಸಂಘಟನೆಯು ಲಂಡನ್‌ನಲ್ಲಿ ತನ್ನ ಕಚೇರಿ ಹೊಂದಿದ್ದು, ಆ ಕಚೇರಿಯನ್ನೂ ಪಾಕಿಸ್ಥಾನದ ಅಧಿಕಾರಿ ಸಂಪರ್ಕಿಸಿದ್ದಾರೆಂದು ಹೇಳಲಾಗಿದೆ.
ಪಾಕ್‌ಗೆ ಭರ್ಜರಿ ಶಾಕ್: ಭಾರತಕ್ಕೆ “ಭಯೋತ್ಪಾದಕ ಬೆಂಬಲಿಗ’ ಎಂಬ ಪಟ್ಟ ಕಟ್ಟಲು ಮುಂದಾಗಿದ್ದ ಕುತಂತ್ರಿ ಪಾಕಿಸ್ಥಾನಕ್ಕೆ ಭಾರೀ ಮುಖಭಂಗವಾಗಿದೆ. ವಿಶ್ವಸಂಸ್ಥೆಯ 1267 ನಿರ್ಬಂಧಗಳ ಸಮಿತಿಯ ಮುಂದೆ ಪಾಕ್, ಭಾರತದ ವಿರುದ್ಧ ಮಾಡಿರುವ ದೋಷಾರೋಪಗಳನ್ನು ರದ್ದುಗೊಳಿಸುವಂತೆ ಭದ್ರತಾ ಮಂಡಳಿಯ ಎಲ್ಲ ಸದಸ್ಯರಿಗೆ ಅಮೆರಿಕ ಅಧಿಕೃತವಾಗಿ ಸೂಚಿಸಿದೆ. ಜೈಷ್ ರೂವಾರಿ ಮಸೂದ್ ಅಜರ್ ಮೇಲೆ ವಿಶ್ವಸಂಸ್ಥೆ ನಿಷೇಧ ಹೇರಿದ ಬಳಿಕ ಪಾಕ್ ಮತ್ತೂಮ್ಮೆ ಇಂಥ ಮುಜುಗರಕ್ಕೆ ಒಳಗಾಗಿದೆ.
ಏನಿದು ಪಾಕ್ ಪ್ರಯತ್ನ?: ಅಮಾಯಕ ಕುಲಭೂಷಣ್ ಯಾದವ್‌ರನ್ನು ಅಪಹರಿಸಿ ಭಾರತದ ಉಗ್ರ ಎಂದು ಬಿಂಬಿಸಿದ್ದ ಪಾಕ್, ವೇಣು ಯಾದವ್ ಡೋಂಗರಾ ಅವರ ಮೇಲೂ ಇಂಥದ್ದೇ ಸಂಚು ರೂಪಿಸಿತ್ತು. ಆಫ್ಘಾನಿಸ್ತಾನದ ಪುನರ್‌ನಿರ್ಮಾಣ ಕಾರ್ಯದಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಭಾರತದ ವೇಣು ಅವರಿಗೆ ಉಗ್ರರ ನಂಟಿದೆ ಎಂದು ಆರೋಪಿಸಿತ್ತು. ವೇಣು ಅವರನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕು ಎಂದು ಚೀನದ ಬೆಂಬಲದೊಂದಿಗೆ ಪಾಕ್ ಪಟ್ಟು ಹಿಡಿದಿತ್ತು. 2019ರ ಸೆಪ್ಟೆಂಬರ್‌ನಲ್ಲಿ ಅಮೆರಿಕ ಈ ಪ್ರಸ್ತಾವವನ್ನು ತಡೆಹಿಡಿದು, ಈ ಬಗ್ಗೆ ಹೆಚ್ಚಿನ ಸಾಕ್ಷಿ ಕೇಳಿತ್ತು. ಹೊಸ ಸಾಕ್ಷ್ಯಗಳನ್ನು ಒದಗಿಸದ ಪಾಕ್ ಮತ್ತೆ ಮತ್ತೆ ಈ ಪ್ರಸ್ತಾವವನ್ನು ವಿಶ್ವಸಂಸ್ಥೆಯ ಮುಂದಿಟ್ಟಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ, ಪಾಕ್‌ನ ದೋಷಾರೋಪಗಳನ್ನು ರದ್ದುಗೊಳಿಸುವಂತೆ ಅಧಿಕೃತವಾಗಿ ಸೂಚಿಸಿದೆ.
ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದ್ದು, ಕಾರ್ಯಾಚರಣೆ ವೇಳೆ ಸಿಆರ್‌ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಇಲ್ಲಿನ ಬಂದ್‌ಜೂ ಪ್ರದೇಶದಲ್ಲಿ ಉಗ್ರರು ಅವಿತಿರುವ ಖಚಿತ ಸುಳಿವಿನ ಮೇರೆಗೆ ಬೆಳಗ್ಗೆಯೇ ಭದ್ರತಾ ಪಡೆ ಶೋಧ ಕಾರ್ಯ ಆರಂಭಿಸಿತ್ತು. ಈ ವೇಳೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದು, ಎರಡೂ ಕಡೆ ಕೆಲ ಕಾಲ ಗುಂಡಿನ ಚಕಮಕಿ ನಡೆಯಿತು. ಕೊನೆಗೆ ಇಬ್ಬರು ಉಗ್ರರನ್ನು ಸದೆಬಡಿಯಲಾಯಿತು. ಆದರೆ, ಗುಂಡಿನ ದಾಳಿಗೊಳಗಾಗಿದ್ದ ಮಹಾರಾಷ್ಟ್ರದ ಸೋಲಾಪುರದ ಯೋಧ ಸುನೀಲ್ ಕಾಳೆ ಅವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಸುನೀಗಿದ್ದಾರೆ ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ. ಸೋಲಾಪುರದ ಪಾಂಗಾಂವ್ ಗ್ರಾಮದವರಾದ ಸುನೀಲ್ ಅವರು 2000ನೇ ಇಸವಿಯಲ್ಲಿ ಸೇನೆಗೆ ಸೇರ್ಪಡೆಯಾಗಿದ್ದರು.