ದಕ್ಷಿಣ ಭಾರತದ ವಯಸ್ಕ ಚಿತ್ರಗಳ ನಟಿ ಶಕೀಲಾ ಅವರ ಜೀವನ ಕಥೆಯನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್, “ಶಕೀಲಾ’ ಹೆಸರಿನಲ್ಲಿ ತೆರೆಗೆ ತಂದಿದ್ದಾರೆ.
ಕಳೆದ ಡಿ. 25 ರಂದು ಬಿಡುಗಡೆಯಾದ “ಶಕೀಲಾ’ ಚಿತ್ರ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಏಕಕಾಲಕ್ಕೆ ತೆರೆಕಂಡಿತ್ತು. ಆದರೆ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಂಡ “ಶಕೀಲಾ’ ಚಿತ್ರಕ್ಕೆ ಇದೀಗ ಪೈರಸಿ ಕಾಟ ಶುರುವಾಗಿದೆ. ಇದು “ಶಕೀಲಾ’ ಚಿತ್ರತಂಡದ ತಲೆನೋವಿಗೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, “ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಅವರ ಕಥೆಯನ್ನು ಇಟ್ಟುಕೊಂಡು ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದೇವೆ. “ಶಕೀಲಾ’ ರಿಲೀಸ್ ಆಗಿರುವ ಎಲ್ಲ ಕೇಂದ್ರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಇದೇ ವೇಳೆ ಸಿನಿಮಾ ಪೈರಸಿ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಇದು ನಮಗೆ ನಿಜಕ್ಕೂ ಆಘಾತ ತಂದಿದೆ. ಒಂದೊಳ್ಳೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರೂ, ಈ ರೀತಿ ಪೈರಸಿ ಆಗಿರುವುದು ನಮಗೆ ಬೇಸರ ತಂದಿದೆ’ ಎಂದರು.
ಇದನ್ನೂ ಓದಿ : ದೇಶದ್ರೋಹಿಗಳ ತಂತ್ರ ಮತ್ತು ರಾಘಣ್ಣ ಪ್ರತಿತಂತ್ರ
“ಒಬ್ಬ ನಿರ್ದೇಶಕನಾಗಿ ನನ್ನ ಸಿನಿಮಾಗಳನ್ನು ಹೆಚ್ಚು ಜನ ನೋಡಿದರೆ ಅದು ವೈಯಕ್ತಿಕವಾಗಿ ನನಗೆ ಖುಷಿ ಕೊಡುವ ವಿಚಾರ. ಆದ್ರೆ ಹೀಗೆ ಮಾಡುವುದರಿಂದ, ಗಳಿಕೆಯಲ್ಲಿ ನಿರ್ಮಾಪಕರಿಗೆನಷ್ಟವಾಗುತ್ತದೆ. ಬಿಡುಗಡೆಯಾದ ಕೆಲ ದಿನಗಳಬಳಿಕ ಹಲವು ಖಾಸಗಿ ವೆಬ್ ಸೈಟ್‌ಗಳಲ್ಲಿ “ಶಕೀಲಾ’ ಸೋರಿಕೆಯಾಗಿ ಹರಿದಾಡುತ್ತಿದೆ. ಕೆಲ ವೆಬ್ ಸೈಟ್‌ಗಳಿಂದ ಸಿನಿಮಾವನ್ನು ತೆಗೆದುಹಾಕುವಕ್ರಮಗಳನ್ನೂ ಕೈಗೊಂಡಿದ್ದೇವೆ. ಆದರೆ ಈ ಪೈರಸಿ ಕಾಪಿ ಎಲ್ಲಿಂದ ಅಪ್‌ಲೋಡ್ ಆಗುತ್ತಿವೆ ಎನ್ನುವುದನ್ನು ಪತ್ತೆ ಹಚ್ಚುವುದೇ ಸವಾಲಿನ ಕೆಲಸ’ ಎಂದಿದ್ದಾರೆ ಇಂದ್ರಜಿತ್ ಲಂಕೇಶ್.
ಒಟ್ಟಾರೆ, ತೆರೆಮೇಲೆ ತನ್ನ ಟೈಟಲ್, ಪೋಸ್ಟರ್ ಮತ್ತು ಸಬ್ಜೆಕ್ಟ್ ಮೂಲಕ ಒಂದಷ್ಟು ಕಮಾಲ್ ಮಾಡಲು ಹೊರಟಿದ್ದ “ಶಕೀಲಾ’ಗೆ ಪೈರಸಿ ಶಾಕ್ ಸ್ವಲ್ಪ ಜೋರಾಗಿಯೇ ತಟ್ಟಿದಂತಿದೆ. ಮುಂದಿನ ದಿನಗಳಲ್ಲಿ “ಶಕೀಲಾ’ ಇದನ್ನೆಲ್ಲ ಹೇಗೆ ಎದುರಿಸಿ ಮುನ್ನಡೆಯಲಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.