ಕಲಬುರಗಿ: ಚಿತ್ರಕಲೆ ಸ್ವಯಂ ಸಂವಹನ ಮಾಧ್ಯಮ. ಮನಸ್ಸಿನ ಭಾವನೆ, ಅನಿಸಿಕೆ, ಅಭಿಪ್ರಾಯಗಳನ್ನು ರೇಖೆಗಳ ಮೂಲಕ ಪ್ರತಿಬಿಂಬಿಸುವ ಶಕ್ತಿ ಚಿತ್ರಕಲೆಗಿದೆ ಎಂದು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎಜಿಎಂ ಎಚ್.ಕೆ. ಗಂಗಾಧರ ಹೇಳಿದರು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ಶ್ರೀ ನೀಲಗಂಗಮ್ಮ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ಚಿತ್ರಕಲಾವಿದ ಕೂಡಲಯ್ಯ ಹಿರೇಮಠ ಅವರ ಜಲವರ್ಣಗಳ ಕಲಾಕೃತಿ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರಕಲೆ ನೋಡುತ್ತಲೇ ನಮಗೆ ಅದರಲ್ಲಿನ ಅಭಿವ್ಯಕ್ತಿ, ವಾಸ್ತವತೆ ತಿಳಿಯುತ್ತದೆ. ರಾಮಾಯಾಣದ ಸುದೀರ್ಘ 14 ವರ್ಷಗಳ ವನವಾಸವನ್ನು ಕೇವಲ ನಾಲ್ಕು ಪುಟಗಳಲ್ಲಿ ತಿಳಿಸುವ ಶಕ್ತಿ ಚಿತ್ರಕಲೆಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಓದು-ಬರಹವೇ ಮುಖ್ಯವೆಂದು ಭಾವಿಸಬಾರದು. ಓದು-ಬರಹದಲ್ಲಿ ಯಶಸ್ವಿಯಾದರೆ ಜೀವನವೇ ಗೆದ್ದಂತಲ್ಲ. ವಿಫಲವಾರದೆ ಬದುಕೇ ಮುಗಿದಂತಲ್ಲ. ಓದಿನೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿ ನಿರ್ದೇಶಕ ಡಾ| ವಿ.ಜಿ. ಅಂದಾನಿ ಮಾತನಾಡಿ, ಕೂಡಲಯ್ಯ ಹಿರೇಮಠ ಅವರು ಜಲವರ್ಣ ಕಲಾಕೃತಿಗಳ ರಚನೆಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರ ಜಲವರ್ಣ ಕಲಾಕೃತಿಗಳ ಕುರಿತು ಯುವ ಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಈ ಕಲಾಕೃತಿ ಪ್ರದರ್ಶನ ಆಯೋಜಿಸಲಾಗಿದೆ. ಕಲಾಕೃತಿಗಳನ್ನು ವಿದ್ಯಾರ್ಥಿಗಳು ನೋಡಿ ಕಲಿಯಲು ಅನುಕೂಲವಾಗಲಿದೆ ಎಂದರು.
ಎಂಎಂಕೆ ಕಾಲೇಜ್ ಆಫ್ ವಿಜ್ಯುವಲ್ ಆರ್ಟ್ ಪ್ರಾಂಶುಪಾಲ ಶೇಷಿರಾವ್ ಬಿರಾದಾರ, ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿ ಪ್ರಾಂಶುಪಾಲ ರಾಜಶೇಖರ ಎಸ್, ಉಪನ್ಯಾಸಕರಾದ ಗೌತಮ ಅಂದಾನಿ, ಶಶಿಕಾಂತ ಮಾಶಾಳಕರ, ವೀರಭದ್ರಪ್ಪ, ಚಂದ್ರಹಾಸ ಜಾಲಿಹಾಳ ಹಾಗೂ ಚಿತ್ರಕಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.