Advertisement

ಚಿತ್ರಕಲೆಗಿದೆ ಮನಸ್ಸು ಅರಳಿಸುವ ಶಕ್ತಿ: ರಮೇಶ್‌

02:23 PM Jul 21, 2017 | Team Udayavani |

ದಾವಣಗೆರೆ: ಏಕಾಗ್ರತೆ, ತನ್ಮಯತೆಗೆ ಪ್ರಾಮುಖ್ಯತೆ ನೀಡುವ ಚಿತ್ರಕಲೆ ಎಂತಹವರ ಮನಸ್ಸನ್ನು ಉಲ್ಲಸಿತಗೊಳಿಸುವ ಶಕ್ತಿ ಹೊಂದಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ತಿಳಿಸಿದ್ದಾರೆ.

Advertisement

ಗುರುವಾರ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಚಿತ್ರಕಲಾ
ಪ್ರದರ್ಶನ, ನಿವೃತ್ತ ಶಿಕ್ಷಕರಿಗೆ ಜಿಲ್ಲಾ ಚಿತ್ರಕಲಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಮಾತನಾಡಿದ ಅವರು, ಚಿತ್ರಕಲೆಗೆ ಏಕಾಗ್ರತೆ, ತನ್ಮಯತೆ ಪ್ರಥಮಾದ್ಯತೆಗಳಾಗಿವೆ. ಇವೆರಡನ್ನೂ ಒಗ್ಗೂಡಿಸಿಕೊಂಡಾಗ ಒಲಿಯುವ ಚಿತ್ರಕಲೆಗೆ ಎಲ್ಲರ ಮನಸ್ಸು ಅರಳಿಸಲಿದೆ ಎಂದರು.

ಚಿತ್ರಕಲೆಯಲ್ಲಿ ಕಲೆಗಾರನ ಮನಸ್ಸು ಎಷ್ಟು ದೂರ ಬೇಕಾದರೂ ಹರಿಯಬಲ್ಲದು. ಆದರೆ ಏಕಾಗ್ರತೆಯಿಂದ ಮೂಡುವ ಚಿತ್ರವು
ಮನಸ್ಸನ್ನು ಅರಳಿಸಿ, ಮುದ ನೀಡುವುದಲ್ಲದೆ, ವ್ಯಕ್ತಿಯು ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಅವರು
ತಿಳಿಸಿದರು. ಕಲೆಗಾರರು ಬಿಡಿಸಿದ ಚಿತ್ರ ಇತರರ ಜೀವನಕ್ಕೆ ಪ್ರೇರಣೆಯಾಗಬೇಕು. ಇಂದು ನಾವು ನಮ್ಮಲ್ಲಿಯೇ ಸುಖ ಹೊಂದಿದ್ದರೂ
ಎಲ್ಲವನ್ನೂ ಮರೆತು ಬೇರೆಡೆ ಹೋಗುತ್ತಿದ್ದೇವೆ. ಇಂತಹ ಮಾರ್ಗ ಬದಲಾವಣೆಯಿಂದ ಸರಿ ದಾರಿಗೆ ಬರಲು ಕಲೆಗಳು ಸಹಕಾರಿ. ಅದರಲ್ಲೂ ಚಿತ್ರಕಲೆ ಸಾಕಷ್ಟು ಪ್ರಯೋಜನಕಾರಿ ಎಂದು ಅವರು ಹೇಳಿದರು.

ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಚಿತ್ರಕಲೆ ರಾಜ ಮಹಾರಾಜರ ಕಾಲದಿಂದಲೂ ಇದೆ. ಇದರಿಂದಲೇ
ಕಲಾವಿದರು ಸುಖ, ಸಂತೋಷ ಕಾಣುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಚಿತ್ರಕಲೆ ಎನ್ನುವುದು ಗಗನ ಕುಸುಮವಾಗುತ್ತಿದೆ ಎಂದರು.

ಬೆಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ, ಚಿತ್ರಕಲಾ ವಿಭಾಗ ಆಯುಕ್ತ ಮಹಾಂತೇಶ್‌ ಎಂ. ಕಂಠಿ
ಮಾತನಾಡಿ, ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್‌ನ 116 ವಿಜ್ಞಾನಿಗಳು, 25 ವಿದ್ಯಾರ್ಥಿಗಳು ಚಿತ್ರಕಲೆ ಅಧ್ಯಯನ ಮಾಡುತ್ತಿದ್ದಾರೆ. ವೈಜ್ಞಾನಿಕ ಪ್ರಯೋಗಗಳನ್ನು ಚಿತ್ರಕಲೆಯ ಮೂಲಕ ವಿವರಿಸುವ ಕುರಿತು ಸಮಗ್ರ ಅಧ್ಯಯನ ಮಾಡುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿಯೇ ಸಂಶೋಧನೆಗೆ ಈ ಕಲೆ ಸಹಕಾರಿ ಎಂಬ ಕಾರಣಕ್ಕೆ ಈ ಅಧ್ಯನ ನಡೆಲಸಾಗುತ್ತಿದೆ. ಅಲ್ಲಿಗೆ ನಮ್ಮ ಕಲೆ ಮತ್ತೆ ಪ್ರವರ್ಧಮಾನಕ್ಕೆ ಬರಲಿದೆ ಎಂದರು.

Advertisement

ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ. ಅವುಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌
ಬೆಕ್ಕೇರಿ, ಡಯಟ್‌ ಪ್ರಭಾರಿ ಪ್ರಾಚಾರ್ಯೆ ಎಸ್‌. ಗೀತಾ, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಆರ್‌. ಬಸವರಾಜಪ್ಪ, ಚಿತ್ರಕಲಾ
ಶಿಕ್ಷಕರಾದ ಪಿ. ನಾಗರಾಜ ಭಾನುವಳ್ಳಿ, ಎಂ.ಸಿ.ದಿವಾಕರ್‌ ಮತ್ತಿತರರು ಇದ್ದರು.  ನಿವೃತ್ತ ಚಿತ್ರಕಲಾ ಶಿಕ್ಷಕರಾದ ಎಚ್‌.ಎಸ್‌.
ಕರಿಬಸಪ್ಪ, ಬಿ. ಮಲ್ಲಪ್ಪ, ಎಂ. ರಮೇಶ್‌, ಆರ್‌. ರೇವಣಸಿದ್ದಪ್ಪರಿಗೆ ಜಿಲ್ಲಾ ಚಿತ್ರಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವಕಾಶ ನಮ್ಮ ನಗರಿಯಲ್ಲಿ 3ನೇ ವಿಶ್ವ ಕನ್ನಡ ಸಮ್ಮೇಳನ ನಡೆಯಲಿದೆ. ಈ ವೇಳೆ ನಮ್ಮದೇ ಪ್ರಾಚೀನ ಕಲೆಯಾದ ಚಿತ್ರಕಲೆಗೆ ಅವಕಾಶ ಕಲ್ಪಿಸಲಾಗುವುದು. ವಿವಿಧ ವಿಷಯಗಳ ಗಂಭೀರ ಚಿತ್ರಣ ಇರುವ ಕಲೆಗಳ ಅನಾವರಣಕ್ಕೆ ಚಿತ್ರಕಲಾ ಶಿಕ್ಷಕರು ಈ ವೇದಿಕೆ ಬಳಸಿಕೊಳ್ಳಬೇಕು.
ಡಿ.ಎಸ್‌. ರಮೇಶ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next