ಉಡುಪಿ: ಮನಸ್ಸಿನ ಭಾವನೆಗಳನ್ನು ರೇಖೆಗಳ ಮೂಲಕ ಬಿಂಬಿಸುವುದೇ ಚಿತ್ರಕಲೆ. ಇಂತಹ ಅದ್ಭುತ ಶಕ್ತಿಯುಳ್ಳ ಭಾರತೀಯ ಮೂಲ ಕಲೆಗಳು ನಾಶವಾಗದಂತೆ ಚಿತ್ರಕಲಾ ಶಾಲೆಗಳು ಪ್ರಯತ್ನಿಸ ಬೇಕು. ಇದರಿಂದ ಭಾರತೀಯ ಕಲೆ ಯನ್ನು ಉಳಿಸಿ ಬೆಳಸಿದಂತಾಗುತ್ತದೆ ಎಂದು ಹಿರಿಯ ಸರಕಾರಿ ಚಿತ್ರಕಲಾ ಶಿಕ್ಷಕ ದಿನಮಣಿ ಶಾಸ್ತ್ರೀ ಹೇಳಿದರು.
ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ ಜಂಗಮ ಮಠದ ವಿಭೂತಿ ಆರ್ಟ್ಸ್ ಗ್ಯಾಲರಿಯಲ್ಲಿ ಶುಕ್ರವಾರ ನಡೆದ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳ ಕಲಾ ಪ್ರದರ್ಶನ “ಎಕ್ಸ್‌ಪ್ರೆಶನ್ 2018’ವನ್ನು ಅವರು ಉದ್ಘಾಟಿಸಿ ಮಾತನಾಡಿ, ಭಾರತೀಯ ಚಿತ್ರ ಕಲೆಯು ಸಿಂಧೂ ಕಣಿವೆಯಿಂದ ಆರಂಭಗೊಂಡಿದ್ದು, ಇದು ವಿಶ್ವಕ್ಕೆ ಮಾದರಿಯಾಗಿದೆ. ಭಾರತೀಯರು ತಮ್ಮ ಕಲೆಯಲ್ಲಿ ಸಹಜತೆ, ಭಾವನಾತ್ಮಕತೆಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಭಾರತೀಯ ಕಲೆ ಇಂದಿಗೂ ಉತ್ತಮ ಸ್ಥಿತಿಯಲ್ಲಿದೆ.ಭಾರತೀಯ ಕಲೆ ವಿದೇಶಗರಿಗೂ ಅಪ್ಯಾಯಮಾನವಾಗಿದೆ ಎಂದರು.
ನಿವೃತ್ತ ಹಿರಿಯ ಕಲಾ ಶಿಕ್ಷಕ ಡಿ.ಎಲ್. ಆಚಾರ್ಯ ಮಾತನಾಡಿ, ಚಿತ್ರಕಲೆಯಲ್ಲಿ ಸಂಶೋಧನೆ ನಡೆಸುವ ಮೂಲಕ ಹೊಸತನ್ನು ರೂಪಿಸಬಹುದು. ಚಿತ್ರಕಲಾ ವಿದ್ಯಾರ್ಥಿಗಳು ಹೆಚ್ಚು ಚಿತ್ರಗಳನ್ನು ವೀಕ್ಷಿಸುವುದು, ಪ್ರದರ್ಶನಗಳಲ್ಲಿ ಭಾಗ ವಹಿಸುವುದರಿಂದ ಸಾಕಷ್ಟು ಮಾಹಿತಿ, ಮಾರ್ಗದರ್ಶನ ದೊರಕಲಿದೆ. ತನ್ಮೂಲಕ ಯಶಸ್ಸು ಸಾಧಿಸಬಹುದೆಂದರು.
ಕಲಾ ವಿದ್ಯಾಲಯದ ನಿರ್ದೇಶಕ ಡಾ| ಯು.ಸಿ. ನಿರಂಜನ್ ಅಧ್ಯಕ್ಷತೆ ವಹಿಸಿದ್ದರು. ಸಮೂಹ ಸಂಸ್ಥೆಗಳ ಸಂದರ್ಶನ ಪ್ರಾಧ್ಯಾಪಕ ಬಿ.ಎ. ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಕಲಾ ವಿದ್ಯಾಲಯದ ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮೇಘಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಪ್ರದೀಪ್ ಕುಮಾರ್ ವಂದಿಸಿದರು.11 ಮಂದಿ ವಿದ್ಯಾರ್ಥಿಗಳಿಂದ ಸಮಕಾಲೀನ, ಸಾಂಪ್ರದಾಯಿಕ, ಆಧುನಿಕ ಶೈಲಿಯ ಆಕರ್ಷಕ 40 ಚಿತ್ರಕಲಾ ಪ್ರದರ್ಶನವು ಸೆ. 28 – ಅ. 2ರ ತನಕ ಬೆಳಗ್ಗೆ 10 – ಸಂಜೆ 6ರ ವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.