Advertisement
ಸಂತೆಯ ಕಲ್ಪನೆ ಬಹಳ ಪ್ರಾಚೀನವಾದದ್ದು. ಬಹಳ ಹಿಂದಿನಿಂದಲೂ ಪ್ರತೀ ವಾರಕ್ಕೊಮ್ಮೆ ಹಳ್ಳಿಗಳಲ್ಲಿ ಸಂತೆ ನಡೆಯುವುದುಂಟು. ರೈತರು ಬೆಳೆದ ತರಕಾರಿಗಳನ್ನೋ, ಬೇರೆ ಕಡೆಯಿಂದ ತಂದ, ನಿತ್ಯ ಬಳಕೆಯ ವಸ್ತುಗಳನ್ನೋ ಪೂರೈಸುವ ನಿಟ್ಟಿನಲ್ಲಿ ಈ ಸಂತೆಗಳ ಪಾತ್ರ ದೊಡ್ಡದು.
ಕರ್ನಾಟಕ ಚಿತ್ರಕಲಾ ಪರಿಷತ್ “ಎಲ್ಲರಿಗಾಗಿ ಕಲೆ’ ಎಂಬ ಶೀರ್ಷಿಕೆಯಡಿ ಚಿತ್ರಸಂತೆಯನ್ನು ಆಯೋಜಿಸುತ್ತಿರುವುದು ವಿಶೇಷ. ಕಲೆ ಎಂಬುದು ಎಲ್ಲರ ಮನೆ-ಮನ ತಲುಪಬೇಕು. ಕಲೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಕಲಾ ಪ್ರಚಾರ, ಕಲಾ ಪ್ರಾಕಾರಗಳನ್ನು ಪರಿಚಯಿಸುವ ಕೆಲಸವಾಗಬೇಕು ಎಂಬ ಆಶಯದ ಹಿನ್ನೆಲೆಯಲ್ಲಿ ಚಿತ್ರಸಂತೆ ನಡೆಯುತ್ತಿದೆ.
Related Articles
ಎಷ್ಟೋ ಕಲಾವಿದರು ಎಲೆ ಮರೆಯ ಕಾಯಿಗಳಂತೆ ಇದ್ದಾರೆ. ಅಂಥವರ ಕಲೆ ಬೆಳಕಿಗೆ ಬರಬೇಕು, ಅವರ ಪ್ರತಿಭೆಯನ್ನು ಎಲ್ಲರೂ ಗುರುತಿಸುವಂತಾಗಬೇಕು ಎಂಬುದು ಇದರ ಉದ್ದೇಶ. ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟು, ಕಲಾಸಕ್ತರಿಗೆ ಅದನ್ನು ತಲುಪಿಸುವ ಕೆಲಸ ಚಿತ್ರಸಂತೆಯದ್ದು.
Advertisement
ಒಂದೇ ದಿನದ ಬೃಹತ್ ಕಲಾಮೇಳ ಕೇವಲ ಒಂದು ದಿನ ಮಾತ್ರ ಈ ಚಿತ್ರಸಂತೆ ನಡೆಯುತ್ತದೆ. ಚಿತ್ರಕಲಾ ಪರಿಷತ್‌ನ ಮುಂದೆ ಒಂದು ಕಿಲೋಮೀಟರ್‌ವರೆಗೆ ಕಲಾಜಾತ್ರೆ ನೆರೆದಿರುತ್ತದೆ. ಚಿತ್ರಸಂತೆಯಲ್ಲಿ 100 ರೂಪಾಯಿಯಿಂದ ಹಿಡಿದು ಲಕ್ಷಾಂತರ ರೂ. ಮೌಲ್ಯದವರೆಗಿನ, ನೂರಾರು ಬೆಲೆಬಾಳುವ ಕಲಾಕೃತಿಗಳು ಮಾರಾಟಕ್ಕಿರುತ್ತವೆ. ಇಲ್ಲಿ ಯಾವ ಕಲಾಕೃತಿಯ ಮಾರಾಟಕ್ಕೂ ಕಮಿಷನ್ ಪಡೆಯುವುದಿಲ್ಲ, ಮಧ್ಯವರ್ತಿಗಳ ಕಾಟ ಇರುವುದಿಲ್ಲ. ಒಂದೇ ಸೂರಿನಲ್ಲಿ ಜಗತ್ತಿನ ಕಲಾವಿದರ ಪರಿಚಯ
ಇಲ್ಲಿ ಹಿರಿಯ ಮತ್ತು ಕಿರಿಯ ಕಲಾವಿದರು ಎನ್ನುವ ಭೇದ ಭಾವ ಇರುವುದಿಲ್ಲ. ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಲಾವಿದರ ನಡುವೆ ವಿಚಾರ ವಿನಿಮಯ, ಚರ್ಚೆ, ಸಂವಾದಗಳಿಗೆ ಈ ಚಿತ್ರಸಂತೆ ಅವಕಾಶ ಮಾಡಿಕೊಡುತ್ತದೆ. ಇಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ದೇಶಾದ್ಯಂತದ ಕಲಾವಿದರ ಕಲಾಪ್ರದರ್ಶನವಿರುತ್ತದೆ. ವಿಭಿನ್ನ ಕಲಾಕೃತಿಗಳ ಮಾರಾಟ-ಪ್ರದರ್ಶನ
ಈ ಚಿತ್ರಸಂತೆಯಲ್ಲಿ ಸಾಂಪ್ರದಾಯಿಕ, ಮೈಸೂರು, ತಂಜಾವೂರು, ರಾಜಸ್ತಾನಿ, ಮಧುಬನಿ ಶೈಲಿಯ ಚಿತ್ರಗಳ ಜೊತೆಗೇ ತೈಲ ಮತ್ತು ಜಲವರ್ಣ, ಆಕ್ರಲಿಕ್, ಗಾಜಿನ ಮೇಲೆ ಬಿಡಿಸಿರುವ ಚಿತ್ರಗಳು, ಕೊಲಾಜ್, ಲಿಥೋಗ್ರಾಫ್, ಎಂಬೋಸಿಂಗ್ ಮಾಧ್ಯಮದ ಕಲಾಕೃತಿಗಳು ಮಾರಾಟಕ್ಕಿರುತ್ತವೆ. ಮುಂದೆಯೇ ಕುಳ್ಳಿರಿಸಿಕೊಂಡು ಆಸಕ್ತರ ಭಾವಚಿತ್ರಗಳನ್ನು ಬಿಡಿಸುವ ಕಲಾವಿದರೂ ಇದ್ದಾರೆ. ಜೊತೆಗೆ ವ್ಯಂಗ್ಯಚಿತ್ರಗಳನ್ನೂ ಬಿಡಿಸಿ ಕೊಡಲಾಗುತ್ತದೆ. ಕಲಾವಿದರಿಗೆ ಊಟ-ವಸತಿ ವ್ಯವಸ್ಥೆ
ಚಿತ್ರಸಂತೆಯ ದಿನ ಕಲಾಕೃತಿಗಳ ಮಾರಾಟಕ್ಕೆಂದು ಬರುವ ಕಲಾವಿದರಿಗೆ ಚಿತ್ರಕಲಾ ಪರಿಷತ್ ವತಿಯಿಂದ (ಯಾವುದೇ ಶುಲ್ಕ ಪಡೆಯದೇ) ಊಟ- ವಸತಿಯ ವ್ಯವಸ್ಥೆ ಮಾಡುತ್ತಿದೆ. ಇದಕ್ಕೆ ಕೂಪನ್ ವ್ಯವಸ್ಥೆ ಮಾಡಲಾಗಿದೆ. ಸ್ವಂತ ಕಲಾಕೃತಿಗಳ ಮಾರಾಟಕ್ಕೆ ಮಾತ್ರ ಅವಕಾಶ
ಕಲಾವಿದರು ರಚಿಸುವ, ಪ್ರದರ್ಶಿಸುವ ಕಲಾಕೃತಿಗಳು ಸ್ವಂತದ್ದಾಗಿರುತ್ತವೆ. ಛಾಯಾಚಿತ್ರಗಳ ನಕಲು ಚಿತ್ರಗಳನ್ನು ಪ್ರದರ್ಶನಕ್ಕಿಡಲು, ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ದಿವ್ಯಾಂಗ ಮತ್ತು ಹಿರಿಯ ಕಲಾವಿದರಿಗೆ ಆದ್ಯತೆ
ದಿವ್ಯಾಂಗ ಮತ್ತು ಹಿರಿಯ ಕಲಾವಿದರಿಗೆ ಪರಿಷತ್ತಿನ ಆವರಣದಲ್ಲಿಯೇ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇವರಿಗೆ ಸಹಾಯ ಮಾಡಲು, ಮಾಹಿತಿ ನೀಡಲು ಸ್ವಯಂಸೇವಕ ಸಮೂಹ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಮಾಡಲಾಗಿದೆ. ಚಿತ್ರಸಂತೆಯ ದಿನ ಲಕ್ಷಕ್ಕಿಂತಲೂ ಹೆಚ್ಚು ಕಲಾವಿದರು ಮತ್ತು ಕಲಾಸಕ್ತರು ಭೇಟಿ ನೀಡುತ್ತಾರೆ. ನಿಮಗೂ ಚಿತ್ರಕಲೆಯಲ್ಲಿ ಆಸಕ್ತಿಯಿದ್ದರೆ, ಆ ದಿನ ಬಿಡುವು ಮಾಡಿಕೊಂಡು ಚಿತ್ರಸಂತೆಗೆ ಭೇಟಿ ಕೊಡಿ. ಎಲ್ಲಿ?: ಕರ್ನಾಟಕ ಚಿತ್ರಕಲಾ ಪರಿಷತ್
ಯಾವಾಗ?: ಜನವರಿ 7, ಭಾನುವಾರ – ಚಿತ್ರ- ಲೇಖನ: ವೆಂಕಟದಾಸ್ ಎಸ್.ಎನ್.