Advertisement

ಬಳೆಯ ಸದ್ದಿನ ನಡುವೆ ಮಿಡಿವ ನೋವು

06:53 PM Jan 23, 2020 | Team Udayavani |

ಕಾಜಿ ಎನ್ನುವ ಈ ಕಿರುಚಿತ್ರ ಮಹಿಳೆಯರ ಸಮಸ್ಯೆಗಳನ್ನು ಕೇಂದ್ರೀಕರಿಸಿರುವ ಚಿತ್ರ. ಕಾಜಿ ಕೇವಲ ವಿಧವೆಯ ಕಥೆಯನ್ನು ಹೇಳುತ್ತದೆ ಅಂದರೆ ಶುದ್ಧ ತಪ್ಪು. ಬದುಕಿನ ಅನೇಕ ಸೂಕ್ಷ್ಮ ಸಂಗತಿಗಳನ್ನು ಕಾವ್ಯದ ದೃಷ್ಟಿಕೋನದಲ್ಲಿ ನಿರ್ದೇಶಕಿ ಐಶಾನಿ ಶೆಟ್ಟಿ ಅವರು ಕಟ್ಟಿಕೊಟ್ಟಿದ್ದಾರೆ. ನೀನಾಸಂ ಸತೀಶ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Advertisement

ಕಾಜಿ ಎಂದರೆ ಬಳೆಗಳು. ಗಂಡನಿಲ್ಲದ ಮಹಿಳೆ ಬಳೆಗಳನ್ನು ಧರಿಸಬಾರದು ಎಂಬ ವಿಚಾರವನ್ನು ಇಟ್ಟುಕೊಂಡು ಈ ಕತೆಯನ್ನು ಹೆಣೆಯಲಾಗಿದೆ. ಆದರೆ, ಹೆಣ್ಣಾದವಳಿಗೆ ಬಳೆಗಳನ್ನು ಧರಿಸುವ ಆಸೆ ಇರುವುದಿಲ್ಲವೆ. ಆಕೆಯ ಕಣ್ಣಿನಲ್ಲಿ ಕಾಣುವ ಆಸೆ, ಅಸಮಾಧಾನ, ದುಡಿಮೆ ಕೊಡುವ ಬೇಸರ ಜೊತೆಗೆ ದುಡಿಮೆಗೆ ಎದುರಾಗುವ ಅನೇಕ ಸವಾಲುಗಳನ್ನು ಚಿತ್ರ ಸೆರೆಹಿಡಿದಿದೆ. ವಿಧವೆ ಲಕ್ಷ್ಮಿ ಮತ್ತು ಮಗ ಮಂಜನ ಪಾತ್ರಗಳು ಸಾಮಾಜಿಕ ಪಿಡುಗಗಳನ್ನು ತೋರಿಸುವಲ್ಲಿ ಯಶಸ್ವಿಯಾಗಿವೆ.

ಸಾಮಾಜಿಕ ತಾರತಮ್ಯ, ಗಂಡನಿಲ್ಲದ ಮಹಿಳೆಯು ಜೀವನ ಸಾಗಿಸುವಾಗ ಎದುರಿಸಬೇಕಾದ ಸವಾಲುಗಳು ಈ ಚಿತ್ರದುದ್ದಕ್ಕೂ ಪ್ರೇಕ್ಷಕರ ಮನಸ್ಸನ್ನು ತಟ್ಟುತ್ತದೆ. ಜೊತೆಗೆ ಜಾತಿಪದ್ಧತಿಯ ಕರಾಳ ಮುಖವನ್ನು ಕೂಡ ಚಿತ್ರ ಅನಾವರಣಗೊಳಿಸುತ್ತದೆ. ಮೇಕಪ್‌, ಅಥವಾ ಅದ್ದೂರಿ ಸೆಟ್‌ಗಳ ಹಂಗಿಲ್ಲದೆ, ಕಥೆಗೇ ಹೆಚ್ಚು ಒತ್ತು ಕೊಟ್ಟು ಸಾಗುವ ಈ ಚಿತ್ರ ಕೇವಲ 17 ನಿಮಿಷಗಳ ಅವಧಿಯದ್ದು. ಆದರೆ, ಅದು ಪ್ರೇಕ್ಷಕರ ಮನಸ್ಸನ್ನು ತಟ್ಟುವಲ್ಲಿ ಯಶಸ್ವಿಯಾಗುತ್ತದೆ ಎನ್ನುವುದೇ ಚಿತ್ರದ ಹಿರಿಮೆ.

ವಿಧವೆಯ ಪಾತ್ರದಲ್ಲಿ ಹಿತಾ ಚಂದ್ರಶೇಖರ್‌ ನಟಿಸಿದ್ದಾರೆ. ಮಗನ ಪಾತ್ರದಲ್ಲಿ ಮಧುರಚೆನ್ನಿಗ ಸುಬ್ಬಣ್ಣ ಉತ್ತಮವಾಗಿ ಅಭಿನಯಿಸಿದ್ದಾನೆ. ಮನೆಯೊಡತಿಯ ಮಗಳ ಪಾತ್ರದಲ್ಲಿ ಇಂಚರಾ ನಟಿಸಿದ್ದಾರೆ.
ಪುಟ್ಟ ಚಿತ್ರವು ತನ್ನ ಸರಳತೆಯಿಂದಲೇ ಅನೇಕ ವಿಚಾರಗಳನ್ನು ಹೇಳುವುದರಿಂದ ಈ ಚಿತ್ರ ನನಗೆ ಇಷ್ಟವೆನಿಸಿತು. ಅಂದ ಹಾಗೆ ಬೆಂಗಳೂರಿನಲ್ಲಿ ನಡೆದ ಕಿರುಚಿತ್ರ ಉತ್ಸವದಲ್ಲಿ “ಉತ್ತಮ ಚಿತ್ರ’ ಎಂಬ ಪ್ರಶಸ್ತಿಯನ್ನೂ ಕಾಜಿ ಗಿಟ್ಟಿಸಿಕೊಂಡಿದೆ.

ವಿಶ್ವಾಸ್‌ ಅಡ್ಯಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next