Advertisement

ವಿಟ್ಲ  ಎಲಿಮೆಂಟರಿ ಶಾಲೆಯ ಚಿತ್ರಣ ಬದಲಿಸಿದ ಪೈ –ರೈ

11:38 AM Feb 14, 2018 | |

ವಿಟ್ಲ : ಶತಮಾನೋತ್ತರ ಬೆಳ್ಳಿಹಬ್ಬ ದಾಟಿದ ವಿಟ್ಲ ದ.ಕ. ಜಿ.ಪಂ. ಮಾದರಿ ಹಿ.ಪ್ರಾ. ಶಾಲೆಗೆ ಸೌಲಭ್ಯಗಳ ಮಹಾಪೂರವೇ ಹರಿದು ಬಂದಿದ್ದು, ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚು.

Advertisement

ವಿಟ್ಲದ ಎಲಿಮೆಂಟರಿ ಶಾಲೆಯೆಂದು ಪ್ರಸಿದ್ಧವಾಗಿರುವ ಈ ಶಾಲೆ 1879ರಲ್ಲಿ ಪ್ರಾರಂಭಗೊಂಡಿದೆ. ಶತಮಾನೋತ್ಸವ ಹಾಗೂ ಶತಮಾನೋತ್ತರ ಬೆಳ್ಳಿಹಬ್ಬವನ್ನು ಆಚರಿಸಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ಜಿಲ್ಲೆಯ ಶಾಲೆಗಳ ಪೈಕಿ ಗರಿಷ್ಠ ಎಂಬ ಹೆಗ್ಗಳಿಕೆ ಬೇರೆ. ಇಲ್ಲಿನ ವ್ಯವಸ್ಥೆಗಳು ಖಾಸಗಿ ಶಾಲೆಗಳನ್ನು ಮೀರಿಸುವಂತಿವೆ. ಇದಕ್ಕೆ ಕಾರಣ ಇಬ್ಬರು ಹಳೆ ವಿದ್ಯಾರ್ಥಿಗಳು!


ಭಾರತಿ ಜನಾರ್ದನ್‌ ಸೇವಾ ಟ್ರಸ್ಟ್‌ ನಿರ್ಮಿಸಿಕೊಟ್ಟ ರಂಗಮಂದಿರ.

ಪೈಯವರ ಶ್ರಮ
1934-1969ರ ನಡುವೆ ಈ ಶಾಲೆಯಲ್ಲಿ 1,300 ವಿದ್ಯಾರ್ಥಿಗಳಿದ್ದರು. ಶತಮಾನೋತ್ಸವ ವೇಳೆಗೆ 960, ಶತಮಾನೋತ್ತರ ಬೆಳ್ಳಿಹಬ್ಬದ ವೇಳೆಗೆ 653 ವಿದ್ಯಾರ್ಥಿಗಳಿದ್ದರು. ಆ ಮೇಲೆ ಸಂಖ್ಯೆ 400ಕ್ಕೆ ಕುಸಿಯುತ್ತಿದ್ದಂತೆಯೇ ವಿಟ್ಲದ ಉದ್ಯಮಿ, ಕವಿ ದಿ| ಜನಾರ್ದನ ಪೈ ಅವರ ಪುತ್ರ ಸುಬ್ರಾಯ ಪೈ ಅವರು ಭಾರತಿ ಜನಾರ್ದನ್‌ ಸೇವಾ ಟ್ರಸ್ಟ್‌ ಮೂಲಕ ಈ ಶಾಲೆಯನ್ನು ದತ್ತು ಸ್ವೀಕರಿಸಿದರು. ಅವರ ಪರಿಶ್ರಮದ ಫ‌ಲವಾಗಿ ಸುತ್ತ 5 ಖಾಸಗಿ ಕನ್ನಡ – ಆಂಗ್ಲ ಮಾಧ್ಯಮ ಶಾಲೆಗಳಿದ್ದರೂ ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಲೇ ಸಾಗಿತು.

ರಂಗಮಂದಿರ, ಶತಮಾನೋತ್ಸವ ಕಟ್ಟಡದ ಕೋಣೆಗೆ ಟೈಲ್ಸ್‌ ಅಳವಡಿಕೆ, ಕಟ್ಟಡ ದುರಸ್ತಿ, ವಿಜ್ಞಾನ ಪ್ರಯೋಗಾಲಯಕ್ಕೆ ಉಪಕರಣ ಪೂರೈಕೆ, ಕ್ರೀಡಾ ಉಪಕರಣ, ಪುಸ್ತಕ ಕೊಡುಗೆ ನೀಡಿದರು. ಅಡುಗೆ ಕೋಣೆ ವಿಸ್ತರಣೆ, ಆವರಣ ಗೋಡೆ, ಸ್ಮಾರ್ಟ್‌ ಕ್ಲಾಸ್‌ ಒದಗಿಸಲಾಯಿತು. ಬಾಲವಾಡಿ ಕೇಂದ್ರ ಪ್ರಾರಂಭಿಸಿದ್ದು, 64 ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಾಯಿತು. ಕೊಳವೆ ಬಾವಿ ದುರಸ್ತಿಗೊಳಿಸಿ, ನೀರಿನ ಸಮಸ್ಯೆ ಪರಿಹರಿಸಲಾಯಿತು.

6 ಮಂದಿ ಗೌರವ ಶಿಕ್ಷಕರನ್ನು ನೇಮಿಸಲಾಯಿತು. 6ರಿಂದ 8ನೇ ತರಗತಿ ವರೆಗೆ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಯಿತು. ಪೈ ಅವರು ಕನಿಷ್ಠ ದರದಲ್ಲಿ ವಿಟ್ಲ ಆಸುಪಾಸಿನ ಹಳ್ಳಿಯಿಂದ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಮಾಡಿದರು. ಈ ಎಲ್ಲ ಕೊಡುಗೆಗಳಿಂದ ವಿದ್ಯಾರ್ಥಿಗಳ ಸಂಖ್ಯೆ 570ಕ್ಕೇರಿದೆ.

Advertisement

ವಿದ್ಯಾಸೌಧ ಲೋಕಾರ್ಪಣೆಗೆ ಸಿದ್ಧ
ವಿಟ್ಲದ ಖ್ಯಾತ ವೈದ್ಯ ದಿ| ಡಾ| ಮಂಜುನಾಥ ರೈ ಅವರ ಪುತ್ರ ಅಜಿತ್‌ ಕುಮಾರ್‌ ರೈ ಅವರೂ ಶಾಲೆಯ ಬಗ್ಗೆ ಆಸಕ್ತಿ ವಹಿಸಿ, 3 ಮಹಡಿಗಳ, 10 ಸುಸಜ್ಜಿತ ಕೊಠಡಿಗಳ ನೂತನ ಕಟ್ಟಡ ಹಾಗೂ ಸಭಾ ಮಂದಿರವನ್ನು 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟರು. ನೆಲಕ್ಕೆ ಗ್ರಾನೈಟ್‌ ಹಾಸಲಾಗಿದೆ. ತಮ್ಮ ಹೆತ್ತವರ ನೆನಪಿಗಾಗಿ ನಿರ್ಮಿಸಿದ ಶ್ರೀಮತಿ ಮತ್ತು ಡಾ| ಕೆ. ಮಂಜುನಾಥ ರೈ ವಿದ್ಯಾಸೌಧ’ ಲೋಕಾರ್ಪಣೆಗೆ ಸಿದ್ಧವಾಗಿದೆ.

ಅವರು ಈ ಹಿಂದೆ 2.50 ಲಕ್ಷ ರೂ. ವೆಚ್ಚದಲ್ಲಿ ಬಾಲಕಿಯರ ಶೌಚಾಲಯ ನಿರ್ಮಿಸಿಕೊಟ್ಟಿದ್ದರು. ಅಷ್ಟಲ್ಲದೆ, ಪ್ರತಿ ವರ್ಷವೂ ಬಂಟ್ವಾಳ ತಾಲೂಕಿನ ಸಾವಿರಾರು ಅರ್ಹ ಬಡ ವಿದ್ಯಾರ್ಥಿಗಳಿಗೆ ಸುಪ್ರಜಿತ್‌ ಫೌಂಡೇಶನ್‌ ಮೂಲಕ
ಲಕ್ಷಾಂತರ ರೂ. ವಿದ್ಯಾರ್ಥಿವೇತನ ನೀಡಿ ಕಲಿತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಶಾಲೆಯ ದತ್ತು ಸ್ವೀಕಾರ
ವಿಟ್ಲದಲ್ಲಿ ‘ವೆಂಕಟೇಶ್ವರ ಪ್ರೊಸೆಸರ್’ ಹೆಸರಿನ ಗೋಡಂಬಿ ಉದ್ಯಮ ನಡೆಸುತ್ತಿರುವ ಪಿ. ಸುಬ್ರಾಯ ಪೈ ಅವರು
ಶಾಲೆಯನ್ನು ದತ್ತು ಸ್ವೀಕರಿಸಿದ್ದಾರೆ. ಏಷ್ಯಾದಲ್ಲೇ ಕೇಬಲ್‌ ತಯಾರಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ಸುಪ್ರಜಿತ್‌ ಎಂಜಿನಿ
ಯರಿಂಗ್‌ ಕಂಪೆನಿಯ ಎಂಡಿ ಅಜಿತ್‌ ಕುಮಾರ್‌ ರೈ 1.25 ಕೋ. ರೂ. ವೆಚ್ಚದಲ್ಲಿ ಶಾಲೆಗೆ ನೂತನ ಕಟ್ಟಡ ಒದಗಿಸಿದ್ದಾರೆ.

ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿದರೂ ತಾವು ಕಲಿತ ಶಾಲೆಯ ಕಡೆಗೆ ಮುಖ ಮಾಡುವುದಿಲ್ಲ ಎಂಬ ಆರೋಪವಿದೆ. ಆದರೆ, ವಿಟ್ಲ ಶಾಲೆಯಲ್ಲಿ ಕಲಿತ ಈ ಇಬ್ಬರು ಶಾಲೆಗೆ ಕೋಟ್ಯಂತರ ರೂ.ಗಳ ಉದಾರ ಕೊಡುಗೆ ನೀಡಿ, ಶಾಲೆಯ ಅಭ್ಯುದಯಕ್ಕೆ ಕಾರಣರಾಗಿದ್ದಾರೆ. ಮುಚ್ಚುವ ಭೀತಿಯಲ್ಲಿದ್ದ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next