Advertisement
“ಮಿಸ್ಟರ್ ಮಹೇಂದ್ರ, ಜಯಂತ, ರಜನೀಂದ್ರ ನಿಮ್ಮ ಗೆಳೆಯರಾದ್ದರಿಂದ ಅವರ ಸಂಕಟ ನಿಮ್ಮದೇ ಆಗಿ ಕಾಣ್ತದೆ. ನೀವು ಅವರ ಬಗ್ಗೆ ಮಾತಾಡ್ತೀರಿ. ಆದ್ರೆ ಕಾಯಿಲೆ ಇರೋ ಮನೆಗಳಿಗೆ ಒಮ್ಮೆ ಈ ಬಲ್ಲಾಳರ ಜೊತೆ ಹೋಗಿ ಬನ್ನಿ. ಯಾವ ಯಾವ ಸ್ಥಿತಿ ಇದೆ ಅಂತ ಕಣ್ಣಾರೆ ಕಂಡು ಬನ್ನಿ’ ಅಂದಿದ್ದರು. ಬಲ್ಲಾಳರೊಂದಿಗಿನ ಸುತ್ತಾಟ, ಮಾತುಕತೆ, ರೋಹನ್ ಡಾಕ್ಟರೊಂದಿಗಿನ ಚರ್ಚೆ ಮಹೇಂದ್ರನ ಬದುಕಿನ ದಿಕ್ಕನ್ನೇ ಬದಲಿಸುವ ತಿರುವಿಗೆ ತಂದು ನಿಲ್ಲಿಸಿತ್ತು. ಅಂತರ್ಜಾಲ ಸಂಪರ್ಕ ಅಡೆತಡೆಯಿಲ್ಲದೆ ಸಿಗಬೇಕಾದರೆ ಮಾತ್ರ ಆತ ದೇವನಗರಿಯ ಮೇಲು ರಸ್ತೆಯಂಚಿನಲ್ಲಿರುವ ಕಟ್ಲೆರಿ ಅಂಗಡಿಯ ಮುಂಗಟ್ಟೆಗೆ ಬರಬೇಕಾಗಿತ್ತು. ಆಗ ಮಾತ್ರ ಅವನಿಗೆ ಊರಿಗೆ ಚಲನೆ ಇದೆ ಅನಿಸುತ್ತಿದ್ದುದು. ಸುಭಾಳಿಗೆ ತನ್ನ ಕೆಲಸ ಮುಗಿದ ಬಗ್ಗೆ, ಇನ್ನೂ ಕೆಲವು ದಿನ ದೇವನಗರಿಯಲ್ಲೇ ಉಳಿಯುತ್ತಿರುವ ಬಗ್ಗೆ, ವಿಚಿತ್ರ ಕಾಯಿಲೆಗಳಿಗೆ ಬಲಿಯಾದವರ ಮನೆಗಳಲ್ಲಿ ತಾನು ಕಂಡ ದುರವಸ್ಥೆಯನ್ನು, ಮುಖ್ಯವಾಗಿ ಜಯಂತ, ಹರಿಣಾಕ್ಷಿ ಹಾಗೂ ಅವರ ಮಕ್ಕಳು ಪಡುತ್ತಿರುವ ಪಾಡು, ಮುಕ್ತಾತಾಯಿ ಎಂಬ ಸಂಗೀತಗಾರ್ತಿ ಹರಿಣಾಕ್ಷಿಯ ಮೇಲಿನ ಪ್ರೀತಿಯಿಂದ ಅಲ್ಲಿ ಬಂದು ಉಳಿದುಕೊಂಡ ವಿಚಾರ, ಏನಾದರೊಂದು ರೀತಿಯಲ್ಲಿ ಆ ಕುಟುಂಬಕ್ಕೆ ಸಹಾಯ ಮಾಡಬೇಕೆಂಬ ತನ್ನ ಹಂಬಲ ಎಲ್ಲ ವಿವರವಾಗಿ ಬರೆದಿದ್ದ. ಮೊದಲ ಬಾರಿ ಜಯಂತನ ಮುಂದೆ ಕುಳಿತಾಗ ತಲ್ಲಣಿಸಿದ ಮಹೇಂದ್ರನ ಮನಸ್ಸು ಮಾತ್ರ ಇನ್ನೂ ಅದೇ ಸ್ಥಿತಿಯಲ್ಲೇ ಇತ್ತು. ಕೆಲಸ ಮುಗಿದ ಮೇಲೆ ಮಹೇಂದ್ರ ಹೆಚ್ಚಿನ ಹೊತ್ತೂ ಜಯಂತನೊಂದಿಗೇ ಕಳೆಯಲಾರಂಭಿಸಿದ್ದ. ರೋಹನ್ ಡಾಕ್ಟರ್ ಮಹೇಂದ್ರನಿಗೆ, ತಾನು ಹಾಗೂ ಬಲ್ಲಾಳರು ಯೋಜಿಸುತ್ತಿರುವ ಸಾಂತ್ವನಾಲಯದ ಬಗ್ಗೆ ಹೇಳಿದಾಗ ಮಹೇಂದ್ರ ಅದರ ಬಗ್ಗೆ ಬಹಳಷ್ಟು ಚರ್ಚಿಸಿ ತಾನೂ ಆ ಯೋಜನೆಗೆ ಕೈ ಜೋಡಿಸುತ್ತೇನೆಂದಿದ್ದ. ಮಹೇಂದ್ರನಲ್ಲಿ ಆಗುತ್ತಿದ್ದ ಬದಲಾವಣೆ ಗಮನಿಸಿದ ಬಲ್ಲಾಳರು ರೋಹನ್ ಡಾಕ್ಟರೊಡನೆ ಮಾತಾಡಬೇಕೆಂದೇ ಮಹೇಂದ್ರನನ್ನು ಕರೆಯದೇ ಒಬ್ಬರೇ ಬಂದಿದ್ದರು. ಸಣ್ಣಪುಟ್ಟ ವಿಚಾರಗಳ ನಂತರ ನೇರವಾಗಿ, “ನೀವು ಮಹಿಯೊಂದಿಗೆ ಇಲ್ಲಿಯ ಸಮಸ್ಯೆಯ ಬಗ್ಗೆ ಅಷ್ಟೊಂದು ಚರ್ಚೆ ಮಾಡ್ಬೇಡಿ, ಅವನು ಪುಣೆಗೆ ಹೋಗುವ ಸಂಗತಿಯಲ್ಲೇ ಇಲ್ಲ. ಇನ್ನೂ ಬದುಕಿ ಬಾಳಬೇಕಾದ ಹುಡುಗ’ ಅಂದರು. ಆದರೆ, ರೋಹನ್ ಡಾಕ್ಟರ್ ಅವರ ಮಾತನ್ನು ತಳ್ಳಿ ಹಾಕುತ್ತ,
“ನೀವು ಎಂತ ಬೇಕಾದ್ದರು ತಿಳ್ಕೊಳ್ಳಿ ಬಲ್ಲಾಳೆ. ನಿಮ್ಮ ಜಯಂತನಂಥವರಿಗೆ, ಅವರ ಕುಟುಂಬಕ್ಕೆ ಈಗ ಬೇಕಾಗಿರುವುದು ಒಂದು ವ್ಯವಸ್ಥಿತ ಆರೈಕೆ. ಅದರಲ್ಲೂ ರೋಗಪೀಡಿತ ಹೆಂಗಸರ ಆರೈಕೆ ಎಷ್ಟು ಕಷ್ಟ ಅಂತ ನಿಮ್ಮ ಗಮನಕ್ಕೆ ಬಂದಿದಾ?’ ಕೇಳಿದರು.
Related Articles
Advertisement
“ಬಲ್ಲಾಳೆ, ಮೊನ್ನೆ ತೆಂಕಮನೆ ಪರಮೇಶ್ವರ ಭಟ್ಟರಲ್ಲಿಗೆ ಹೋಗಿದ್ದೆ. ಅವರ ಮಗಳು ಶಂಕರಿಗೆ ಎಲ್ಲವೂ ಮಲಗಿದಲ್ಲಿಯೇ. ಭಟ್ಟರಂತೂ ಆರೋಗ್ಯ ಹದಗೆಟ್ಟ ಮೇಲೆ ಕೂತರೆ ಕೂತಲ್ಲಿಯೇ. ಅವರ ಹೆಂಡತಿಗೆ ಮಗಳ ಚಾಕ್ರಿ ಮಾಡಿ ಪೂರೈಸುವುದಿಲ್ಲ. ಅವರಿಗೂ ವಯಸ್ಸಾಯ್ತು. ಅವಳು ಯಾವಾಗಾದರೊಮ್ಮೆ ಮುಟ್ಟಾಗ್ತಾಳೆ. ಆಗ ಅವರ ಅವಸ್ಥೆ ಯಾವ ವೈರಿಗೂ ಬೇಡ ಬಲ್ಲಾಳೆ. ನಮಗೆ ಹೊರಗಿನ ಕಷ್ಟಗಳು ಕಾಣ್ತವೆ. ಆದ್ರೆ ಒಳಗಿನ ಕಷ್ಟಗಳು ಬೇರೆಯೇ ಇರ್ತದೆ. ಇದಕ್ಕೆಲ್ಲ ಒಂದು ವ್ಯವಸ್ಥಿತ ಶುಶ್ರೂಷೆ ಬೇಕು. ಅದೆಲ್ಲ ಮನೆಗಳಲ್ಲಿ ಒಬ್ಬೊಬ್ಬರಿಂದ ಆಗುವಂಥದ್ದಲ್ಲ. ನಮ್ಮ ಹೋರಾಟ ಕಚೇರಿಗಳಿಗೆ ಅಲೆದಾಡುವಷ್ಟಕ್ಕೆ, ಅರ್ಜಿ ಹಾಕಿಸುವುದಷ್ಟಕ್ಕೆ ಇದ್ರೆ ಪ್ರಯೋಜನ ಇಲ್ಲ. ನಾವು ಕೆಲಸ ಸುರು ಮಾಡ್ಬೇಕು. ಜೊತೆಗೆ ಅದಕ್ಕೆಲ್ಲ ಸರ್ಕಾರದಿಂದ ಸಹಾಯ ಬೇಕೆಂಬ ಒತ್ತಡ ತರ್ಬೇಕು. ನಾನು ಎಲ್ಲ ವಿಚಾರವನ್ನೂ ಮಹೇಂದ್ರನ ಹತ್ತಿರ ಚರ್ಚೆ ಮಾಡ್ಬೇಕಾಗಿದೆ’ ಎಂದು ನಿಷ್ಠುರವಾಗಿ ಹೇಳಿದರು ವೈದ್ಯರು.
ಅಷ್ಟರಲ್ಲಿ ಮಹೇಂದ್ರನೇ ಅಲ್ಲಿಗೆ ಬಂದ. ಅವನಿಗೆ ಬಹಳಷ್ಟು ವಿಚಾರ ಚರ್ಚಿಸುವುದಿತ್ತು. ಬಲ್ಲಾಳರು ಮಾತಿನ ನಡುವೆ ತಾನು ಪಂಚಾಯತ್ ಓಟಿಗೆ ನಿಂತು ಗೆದ್ದ ಕಥೆಯನ್ನೂ, ಮುಂದೆ ಎಮ್.ಎಲ್.ಎ.ಸೀಟಿಗೆ ಪಕ್ಷ ಒತ್ತಾಯಿಸಿದರೂ ರಾಜಕೀಯ ಆಗದೆಂದು ಬಿಟ್ಟಿದ್ದನ್ನೂ ಹೇಳಿದ್ದರು. ಅವರು ಹೇಳುತ್ತಿರುವಾಗ ಅದೊಂದು ಗಂಭಿರ ವಿಷಯ ಅನಿಸಿರಲಿಲ್ಲ. ಆದರೆ, ನಂತರ ಅವನಿಗೆ ಬಲ್ಲಾಳರು ರಾಜಕೀಯದಿಂದ ಹಿಂದೆ ಸರಿದು ತಪ್ಪು ಮಾಡಿದರು ಅನಿಸಿತ್ತು. ಎಂಡೋ ಸಂತ್ರಸ್ತರ ಪರಿಹಾರವೆನ್ನುವುದಕ್ಕಿಂತ ಯಾವುದೇ ಕಾರಣಕ್ಕೇ ಆಗಲಿ ಅಂಗವಿಕಲತೆ, ಬುದ್ಧಿ ವಿಕಲತೆ ಇದ್ದಾಗ ಅವರ ಆರೈಕೆಗೆ, ಚಿಕಿತ್ಸೆಗೆ ವ್ಯವಸ್ಥಿತವಾದ ಸಾಮೂಹಿಕ ವ್ಯವಸ್ಥೆ ಬೇಕಾಗುತ್ತದೆ. ಸರ್ಕಾರದಿಂದ ಇದಕ್ಕೊಂದು ಪಾಲಿಸಿಯಾಗಬೇಕು. ಅದನ್ನು ಮಾಡಿಸಲು ರಾಜಕೀಯ ಬಲ ಬೇಕು. ಬಲ್ಲಾಳರು ರಾಜಕೀಯದಲ್ಲಿ ಮುಂದುವರಿದಿದ್ದರೆ ಅವರ ಹಿಂದೆ ಜನಬಲ ಇಟ್ಟುಕೊಂಡು ಸರ್ಕಾರದ ಅಂಗಳದಲ್ಲಿ ನಿಂತು ಡಿಮ್ಯಾಂಡ್ ಮಾಡಬಹುದಿತ್ತು. ಸಾಧ್ಯವಾದರೆ ಮತ್ತೆ ಬಲ್ಲಾಳರನ್ನು ರಾಜಕೀಯಕ್ಕಿಳಿಸಬೇಕು ಎಂಬ ಯೋಚನೆಯೂ ಅವನಿಗೆ ಬಂದಿತ್ತು. ರೋಹನ್ ಡಾಕ್ಟರ್ ಜೊತೆ ಮಾತಾಡಿ ಮುಂದಿನ ವಾರ ಯೂತ್ ಕ್ಲಬ್ಬಲ್ಲಿ ಮೀಟಿಂಗ್ ಇಡಿಸಿ ಈ ವಿಷಯ ಎತ್ತಿ ಹಾಕಲು ಹೇಳಬೇಕು ಅಂದುಕೊಂಡು ಬಂದವನು ಬಲ್ಲಾಳರನ್ನೂ ಅಲ್ಲಿ ನೋಡಿ “ಒಳ್ಳೆಯದೇ ಆಯಿತು. ಇಲ್ಲಿಂದ ನೇರ ಇಬ್ಬರೂ ಜಯಂತನನ್ನು ಭೇಟಿಯಾಗಲು ಹೋದರಾಯ್ತು’ ಅಂದುಕೊಂಡ. ಜಯಂತನೊಂದಿಗೂ ಇದಕ್ಕೆ ಸಂಬಂಧಪಟ್ಟ ವಿಷಯಗಳನ್ನೇ ಚರ್ಚಿಸುವುದಿತ್ತು. ಹೆಚ್ಚಿನ ದಿನಗಳಲ್ಲಿ ದಿನದ ಎರಡು ಹೊತ್ತೂ ಜಯಂತನ ಭೇಟಿಗೆ ಹೋಗುತ್ತಿದ್ದ. ಬಲ್ಲಾಳರು ಬಿಡುವಾದಾಗ ಬರುತ್ತಿದ್ದರು. ಆಗೆಲ್ಲ ಸಾಂತ್ವನಾಲಯಕ್ಕೆ ಬೇಕಾಗುವ ಭೂಮಿಗೇನು ಮಾಡುವುದೆಂದೋ, ಅದರ ನಿಯಮಾವಳಿಗಳನ್ನ ಹೇಗೆ ರೂಪಿಸಬೇಕೆಂಬ ಚರ್ಚೆ ನಡೆಯುತ್ತಿತ್ತು. ಅಂತಹ ಸಮಯದಲ್ಲಿ ಜಯಂತ ನೆರೆಕರೆಯ ಬಾಧಿತ ಸಮುದಾಯದ ಸಂಕಟಗಳಿಗೆ ಕಿವಿಯಾಗುತ್ತ ತನ್ನ ವೈಯಕ್ತಿಕ ನೆಲೆಯ ನೋವನ್ನು ಅರೆಕ್ಷಣ ಮರೆಯುತ್ತಿದ್ದ.
ಕಾದಂಬರಿಗಾರ್ತಿಗೆ ಕೆಲವು ಪ್ರಶ್ನೆಗಳುಈ ಕಾದಂಬರಿ ಬರೆಯಲು ಎಷ್ಟು ಸಮಯ ಬೇಕಾಯಿತು?
-ಹೆಚ್ಚುಕಡಿಮೆ ಆರು ವರ್ಷ. ಮಧ್ಯೆ ಬರೆಯುವುದನ್ನು ಕೆಲ ಕಾಲ ನಿಲ್ಲಿಸಿದ್ದೆ.
ಇದು ಮೊದಲ ಕಾದಂಬರಿಯಲ್ಲವೆ? ಏನನ್ನಿಸಿತು?
-ಇದೊಂದು ದೀರ್ಘ ಪಯಣ. ಬಹಳ ತಾದಾತ್ಮéದಿಂದ ತೊಡಗಿಸಿಕೊಳ್ಳಬೇಕಾಗುತ್ತದೆ.
ಕಾದಂಬರಿ ಇಷ್ಟವೋ, ಕಥೆಯೋ?
-ಬರಹಗಾರ್ತಿಯಾಗಿ ಹೇಗೆ ಹೇಳುವುದು? ಎರಡೂ ಇಷ್ಟವೇ.
ಕಾದಂಬರಿಯನ್ನೇ ಯಾಕೆ ಬರೆಯಬೇಕೆನ್ನಿಸಿತು?
-ಕಥೆ ಬರೆಯಲು ಶುರು ಮಾಡಿ, ಅದು ಕಾದಂಬರಿಯಾಗಿ ಬೆಳೆಯುತ್ತ ಹೋಯಿತು. ಕೆಲವು ಕಾದಂಬರಿಗಳು ಕಾದಂಬರಿ ವ್ಯಾಪ್ತಿಯನ್ನೇ ಬೇಡುತ್ತವೆ. ಇದೂ ಹಾಗೆ.
ಫೇಸ್‌ಬುಕ್ -ವಾಟ್ಸಾಪ್ ಕಾಲದಲ್ಲಿಯೂ ಕಾದಂಬರಿಗೆ ಓದುಗರಿದ್ದಾರಾ?
ಇದ್ದಾರೆ. ಬರೆಯುವಾಗ ನನಗೂ ಓದುಗರ ಯೋಚನೆಯಾಗಲಿಲ್ಲ. ಆದರೆ, ಈಗ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಅನುಪಮಾ ಪ್ರಸಾದ್