Advertisement

ಪಡುಮಲೆ: ರಸ್ತೆ ಸಮಸ್ಯೆಗೆ ಕೊನೆಗೂ ಮುಕ್ತಿ

10:22 PM Jan 02, 2020 | mahesh |

ಬಡಗನ್ನೂರು: ಪಡುಮಲೆ ಕೋಟಿ- ಚೆನ್ನಯರ ಜನ್ಮಸ್ಥಳ ಅಭಿವೃದ್ಧಿ ವಿಚಾರ ಕುಂಠಿತಗೊಂಡರೂ ಇಲ್ಲಿಗೆ ಬರುವ ಪ್ರಧಾನ ರಸ್ತೆಯಾದ ಮುಡಿಪಿನಡ್ಕ- ಸುಳ್ಯಪದವು ಜಿ.ಪಂ. ರಸ್ತೆ ಸಮಸ್ಯೆಗೆ ಮುಕ್ತಿ ದೊರಕಿದೆ.

Advertisement

ಪಡುಮಲೆ ಕೋಟಿ – ಚೆನ್ನಯರ ಜನ್ಮ ಭೂಮಿ. ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿರುವ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ರಸ್ತೆ ಪರಿಸ್ಥಿತಿ ನೋಡಿ ಕೋಟಿ ಚೆನ್ನಯರ ಜನ್ಮಭೂಮಿಯಲ್ಲೂ ರಸ್ತೆಗೆ ಈ ಸ್ಥಿತಿಯೇ ಎಂದು ಮರುಗುವಂತಾಗಿತ್ತು. ಸುಮಾರು 30 ವರ್ಷಗಳಿಂದ ಈ ರಸ್ತೆ ಡಾಮರು ಕಾಣದೆ ಇದರಲ್ಲಿ ಸಂಚರಿಸಲು ಜನಸಾಮಾನ್ಯರು ಹಾಗೂ ವಾಹನ ಚಾಲಕರು ಸಮಸ್ಯೆ ಎದುರಿಸುತ್ತಿದ್ದರು.

ಹಾಲಿ, ಮಾಜಿ ಶಾಸಕರ ಪ್ರಯತ್ನ
ಈ ಹಿಂದೆ ಶಾಸಕರಾಗಿದ್ದ ಶಕುಂತಲಾ ಟಿ. ಶೆಟ್ಟಿ ಮುಡಿಪಿನಡ್ಕ- ಪೇರಾಲು ಸಮಾರು 2.2 ಕಿ.ಮೀ. ಒನ್‌ ಟೈಮ್‌ ಯೋಜನೆಯಲ್ಲಿ ಹಾಗೂ ಮೈಂದನಡ್ಕ- ಕನ್ನಡ್ಕ ಸುಮಾರು 2.75 ಕಿ.ಮೀ. ರಸ್ತೆಯನ್ನು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅಭಿವೃದ್ಧಿ ಪಡಿಸಿದ್ದಾರೆ. ಶಾಸಕರ ಕ್ಷೇತ್ರಾಭಿವೃದ್ದಿ ಯೋಜನೆ 50 ಸಾವಿರ ರೂ.ಗಳಿಂದ ಇದೇ ರಸ್ತೆಯನ್ನು ಕನ್ನಡ್ಕದಿಂದ ನಗರದ ವರೆಗೆ ಅಭಿವೃದ್ಧಿ ಪಡಿಸಲಾಗಿತ್ತು.

ಈ ನಡುವೆ ಪೇರಾಲು -ಮೈಂದನಡ್ಕ ಸುಮಾರು 1.5 ಕಿ.ಮೀ. ರಸ್ತೆ ತೀರಾ ಹದಗೆಟ್ಟು ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿತ್ತು. ಇದನ್ನು ಮನಗಂಡು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ತಮ್ಮ ಕ್ಷೇತ್ರಾಭಿವೃದ್ಧಿ ಯೋಜನೆಯಲ್ಲಿ ಪೇರಾಲು -ಮೈಂದನಡ್ಕ ನಡುವಿನ 1.5 ಕಿ.ಮೀ. ರಸ್ತೆಗೆ 80 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿ, ತಮ್ಮ ಆಡಳಿತ ಅವಧಿಯ ಒಂದೂವರೆ ವರ್ಷದೊಳಗೇ ಇದನ್ನು ಪೂರ್ಣಗೊಳಿಸಿದ್ದಾರೆ. ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಗೆ ಈ ವರೆಗೆ ಅವರು 2 ಕೋಟಿ ರೂ.ಗಳಿಗೂ ಮಿಕ್ಕಿ ಅನುದಾನ ಬಿಡುಗಡೆ ಮಾಡಿದ್ದಾರೆ.

ಸಂಸದರ ಭರವಸೆ ಈಡೇರಿಲ್ಲ
ಚುನಾವಣೆ ಪೂರ್ವದಲ್ಲಿ ಮುಡಿಪಿನಡ್ಕ – ಸುಳ್ಯಪದವು ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಬಿಡುಗಡೆ ಮಾಡುವ ಭರವಸೆ ನೀಡಿದ್ದರೂ ಈ ವರೆಗೆ ಇದಕ್ಕೆ ಸಂಬಂಧಿಸಿದ ಯಾವ ಕಾಮಗಾರಿಯೂ ಆರಂಭವಾಗಿಲ್ಲ. ಸಂಸದರ 10 ವರ್ಷಗಳ ಅಧಿಕಾರಾವಧಿಯಲ್ಲಿ ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಗೆ ಸಿಕ್ಕಿದ್ದು 6 ಲಕ್ಷ ರೂ. ಅನುದಾನ ಮಾತ್ರ.

Advertisement

ರಸ್ತೆ ಅಭಿವೃದ್ಧಿಗೆ ಹೋರಾಟ
ಎರಡು ವರ್ಷಗಳ ಹಿಂದೆ ಇದೇ ರಸ್ತೆ ಅಭಿವೃದ್ಧಿ ಪಡಿಸುವಂತೆ ಬಡಗನ್ನೂರು ಹಿತರಕ್ಷಣ ಸಮಿತಿ ವತಿಯಿಂದ ಒಂದು ದಿನ ರಸ್ತೆ ತಡೆಮಾಡಿ ಶಾಂತಿಯುತ ಪ್ರತಿ ಭಟನೆ, ಆ ಬಳಿಕ ಒಂದು ವಾರ ಕಾಲ ಆಹೋರಾತ್ರಿ ಸತ್ಯಾಗ್ರಹ, ಕೌಡಿಚ್ಚಾರು ಬಳಿ ಮಾಣಿ – ಮೈಸೂರು ಹೆದ್ದಾರಿಯಲ್ಲಿ 5 ನಿಮಿಷಗಳ ಕಾಲ ರಸ್ತೆ ತಡೆ, ಶಾಸಕರ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ಉಸ್ತುವಾರಿ ಸಚಿವ, ಲೋಕಸಭಾ ಸದಸ್ಯರ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ಎಲ್ಲದರ ಫ‌ಲವಾಗಿ ಮುಡಿಪಿನಡ್ಕ- ಸುಳ್ಯಪದವು ನಡುವಿನ 7 ಕಿ.ಮೀ. ರಸ್ತೆಯ ಪೈಕಿ 5 ಕಿ.ಮೀ. ಅಭಿವೃದ್ಧಿಗೊಂಡಿತು.

ಆನಂತರದ ಅವಧಿಯಲ್ಲಿ ಪೇರಾಲು ಮೈಂದನಡ್ಕ ನಡುವಿನ ಸುಮಾರು 1.5 ಕಿ.ಮೀ. ರಸ್ತೆ ಹಾಲಿ ಶಾಸಕ ಸಂಜೀವ ಮಠಂದೂರು ಕ್ಷೇತ್ರಾಭಿವೃದ್ಧಿ ಯೋಜನೆಯಡಿ 80 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಗೊಂಡು ಮುಡಿಪಿನಡ್ಕ- ಸುಳ್ಯಪದವು ಸುಮಾರು 7 ಕಿ.ಮೀ. ಸಂಪರ್ಕ ರಸ್ತೆಗೆ ಮುಕ್ತಿ ಲಭಿಸಿದೆ.

ಸುದಿನ ಫ‌ಲಶ್ರುತಿ
ಉದಯವಾಣಿ ಸುದಿನದಲ್ಲಿ ಎರಡು ವರ್ಷಗಳಿಂದ ರಸ್ತೆ ದುಸ್ಥಿತಿ ಹಾಗೂ ಗ್ರಾಮಸ್ಥರ ಹೋರಾಟದ ಕುರಿತಾಗಿ ಸತತವಾಗಿ ವರದಿಗಳನ್ನು, ವಿಶೇಷ ವರದಿಗಳನ್ನು ಪ್ರಕಟಿಸಿ ಸರಕಾರದ ಮಟ್ಟದಲ್ಲಿ ಒತ್ತಡ ಹೇರುವ ಪ್ರಯತ್ನ ನಡೆದಿದ್ದು, ಅದರ ಫ‌ಲವಾಗಿ ಈಗ ಕಾಮಗಾರಿ ಪೂರ್ಣಗೊಂಡಿದೆ. ಸುದಿನ ಪ್ರಯತ್ನವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next