ಕಾಪು: ವಿಶ್ವಬ್ರಾಹ್ಮಣ ಸಮಾಜವನ್ನು ಇನ್ನಷ್ಟು ಪ್ರಬಲವಾಗಿ ಕಟ್ಟಬೇಕಾದರೆ ಮಕ್ಕಳಿಗೆ ಸಂಸ್ಕಾರ ಯುತವಾದ ಶಿಕ್ಷಣವನ್ನು ನೀಡುವ ಅಗತ್ಯವಿದೆ. ಇಂದಿನ ಮಕ್ಕಳಿಗೆ ಕುಲಕಸುಬಿನ ಬಗ್ಗೆ ಮನವರಿಕೆ ಮಾಡಿ ಕೊಟ್ಟು, ಅದನ್ನು ಮುಂದು ವರಿಸಿಕೊಂಡು ಹೋಗಲು ನಾವು ಪ್ರೋತ್ಸಾಹ ನೀಡಬೇಕಿದೆ. ಪಂಚ ಕುಲಕಸುಬುಗಳ ಸಹಿತವಾಗಿ ಸಮಾಜದ ಅಭ್ಯುದಯಕ್ಕೆಆನೆಗುಂದಿ ಪ್ರತಿಷ್ಠಾನವು ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಸೆ. 29ರಂದು ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದಲ್ಲಿ ಜರಗಿದ 19ನೇ ಚಾತುರ್ಮಾಸ್ಯ ವ್ರತಾಚರಣೆಯ ಸಮಾರೋಪ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಪ್ರತಿಷ್ಠಾನ ಮತ್ತು ಚಾತುರ್ಮಾಸ್ಯ ವ್ರತ ನಿರ್ವಹಣ ಸಮಿತಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ಆಸ್ಥಾನ ವಿದ್ವಾಂಸರಾದ ಪಂಜ ಭಾಸ್ಕರ ಭಟ್, ಉಮೇಶ್ ಆಚಾರ್ಯ ಪಡೀಲು, ವೇ| ಬ್ರ| ಶಂಕರಾಚಾರ್ಯ ಗುರು ನಾಥಾಚಾರ್ಯ ಕಡ್ಲಾಸ್ಕರ್ ಹುಬ್ಬಳ್ಳಿ ಶುಭಾಶಂಸನೆಗೈದರು. ಯೋಗಾಚಾ ರ್ಯ ಪುಂಡರೀಕಾಕ್ಷ ಬೆಳ್ಳೂರು ವಿಶ್ವಕರ್ಮ ಧ್ವಜ, ಸಮಾಜದ ಐಕ್ಯತೆ ಮತ್ತು ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಬಾಡೂರು ಎನ್. ಸುಬ್ರಹ್ಮಣ್ಯ ಅವರನ್ನು ಗೌರವಿಸಲಾಯಿತು.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಸುವರ್ಣ, ಕೋಟ ಅಮೃತೇಶ್ವರೀ ದೇವಸ್ಥಾನದ ಧರ್ಮದರ್ಶಿ ಆನಂದ ಸಿ. ಕುಂದರ್, ಗಣ್ಯರಾದ ಡಾ| ಹರೀಶ್ ಆಚಾರ್ಯ ಜಲಕದಕಟ್ಟೆ, ಉಪೇಂದ್ರ ಆಚಾರ್ಯ ಪೆರ್ಡೂರು, ಮಧು ಆಚಾರ್ಯ ಮೂಲ್ಕಿ, ಪಿ.ವಿ. ಗಂಗಾಧರ ಆಚಾರ್ಯ, ಕುತ್ಯಾರು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಆಚಾರ್ಯ, ಲೋಕೇಶ್ ಎಂ. ಬಿ. ಆಚಾರ್ ಕಂಬಾರು, ವೈ. ಅರವಿಂದ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಸೀಮೋಲಂಘನ
ಬೆಳಗ್ಗೆ ವಿಶ್ವಕರ್ಮ ಯಜ್ಞ ನಡೆದ ಬಳಿಕ ಮಹಾಸಂಸ್ಥಾನದ ಮಠದ ಸಮೀಪದಲ್ಲಿ ಸೀಮೋಲಂಘನ ನಡೆಯಿತು. ಅನಂತರ ದಿಗ್ವಿಜಯ ಮೆರವಣಿಗೆಯ ಮೂಲಕ ಕಟಪಾಡಿ ಯಲ್ಲಿ ಶ್ರೀ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ವೃಂದಾವನ ಭೇಟಿ, ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ, ಕಟಪಾಡಿಯ ಆನೆಗುಂದಿ ಮಹಾಸಂಸ್ಥಾನಕ್ಕೆ ಭೇಟಿ ನೀಡಿದರು.
ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನ, ಪಡುಕುತ್ಯಾರು ಶ್ರೀ ದುರ್ಗಾದೇವಿ ಮಂದಿರಕ್ಕೆ ಭೇಟಿ ನೀಡಿದರು.