Advertisement

ಪಡುಬಿದ್ರಿಗೆ ಬೇಕು ಉಚಿತ ಆ್ಯಂಬ್ಯುಲೆನ್ಸ್‌

06:10 AM Mar 31, 2018 | Team Udayavani |

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ ಬದಿಯ ಪ್ರಮುಖ ಪಟ್ಟಣವಾಗಿ ಬೆಳೆಯುತ್ತಿರುವ ಪಡುಬಿದ್ರಿಗೆ ತುರ್ತಾಗಿ ಉಚಿತ ಆ್ಯಂಬ್ಯುಲೆನ್ಸ್‌ ವ್ಯವಸ್ಥೆ ಬೇಕಿದೆ. ಇದರೊಂದಿಗೆ ವಾಹನಗಳ ಉತ್ತಮ ನಿರ್ವಹಣೆಯೂ ಬೇಕಿದ್ದು, ರೋಗಿಗಳ ಅಮೂಲ್ಯ ಜೀವ ಉಳಿಸಲು ನೆರವಾಗಬೇಕಿದೆ. 

Advertisement

ಪಡುಬಿದ್ರಿಗೆ ಸದ್ಯ ಕಾಪು, ಮೂಲ್ಕಿ, ಸುರತ್ಕಲ್‌ಗ‌ಳ 108 ಸರಕಾರಿ ಆ್ಯಂಬುಲೆನ್ಸ್‌ ಸೇವೆ ಲಭ್ಯವಾಗುತ್ತಿದೆ. ಆದರೆ ಕೆಲವೊಮ್ಮೆ ಅಲ್ಲಿಂದ ಬಂದ ಆ್ಯಂಬ್ಯುಲೆನ್ಸ್‌ಗಳು ಮೂಲ್ಕಿಗೆ ತೆರಳಿ ಮತ್ತೂಂದು ವಾಹನಕ್ಕೆ ರೋಗಿಗಳನ್ನು ಶಿಫ್ಟ್ ಮಾಡುವ ನಿದರ್ಶನಗಳೂ ಇವೆ. ಇದಕ್ಕೆ ಕಾರಣ ವಾಹನದ ನಿರ್ವಹಣೆಯಲ್ಲಿನ ಕೊರತೆ. ಮೊನ್ನೆಯಷ್ಟೇ ಆ್ಯಂಬ್ಯುಲೆನ್ಸ್‌ ಕೆಟ್ಟು, ರೋಗಿಯೊಬ್ಬರು ಮೃತಪಟ್ಟ ಘಟನೆಯಲ್ಲೂ ನಿರ್ವಹಣೆ ಸಮಸ್ಯೆಯೇ ಕಂಡಿದೆ.

ಅಪಘಾತ ವಲಯ 
ಹೆದ್ದಾರಿಯಲ್ಲಿರುವ ಪಡುಬಿದ್ರಿ ಅಪಘಾತ ವಲಯವಾಗಿ ರೂಪು ಗೊಂಡಿದ್ದು, 2016ರಲ್ಲಿ ಇಲ್ಲಿ 77 ಅಪಘಾತಗಳು ಸಂಭವಿಸಿ 24 ಮಂದಿ ಮೃತಪಟ್ಟಿದ್ದರು. 2017ರಲ್ಲಿ ಇಲ್ಲಿ 78 ಅಪಘಾತಗಳು ಸಂಭವಿಸಿದ್ದು 15 ಮಂದಿ ಮೃತಪಟ್ಟಿದ್ದರು. 2018ರಲ್ಲಿ ಈವರೆಗೆ 15 ಅಪಘಾತ ಮತ್ತು 2 ಜೀವಹಾನಿಯಾಗಿದೆ. ಆದರೂ ಇಲ್ಲಿ ಸರಕಾರಿ ಆಂಬ್ಯುಲೆನ್ಸ್‌ ವ್ಯವಸ್ಥೆ ಬಂದಿಲ್ಲ. ಇಲ್ಲಿನ ಜನತೆ ತುರ್ತು ಸಂದರ್ಭಗಳಲ್ಲಿ ಖಾಸಗಿ ಆಂಬ್ಯುಲೆನ್ಸ್‌ಗೆ ದುಪ್ಪಟ್ಟು ದರ ಪಾವತಿಸಿ ಸೇವೆ ಪಡೆದುಕೊಳ್ಳಬೇಕಾಗುತ್ತದೆ.  

ಘಟನೆ ಪಾಠ ಕಲಿಸೀತೇ? 
ಮಾ.29ರಂದು ನಡೆದ ಘಟನೆಯಿಂದ ಹೆಜಮಾಡಿಯ ಹೃದ್ರೋಗಿ ವಿನಯಾ ವಿ. ಶೆಣೈ ಅವರು ಮೃತಪಟ್ಟಿದ್ದು, ಪಡುಬಿದ್ರಿಗೆ ಪ್ರತ್ಯೇಕ ಆಂಬ್ಯುಲೆನ್ಸ್‌ ಬೇಕು ಎಂಬ ಬೇಡಿಕೆಯನ್ನು ಬಲಗೊಳಿಸಿದೆ. ಕರೆ ಮಾಡಿದ ಅರ್ಧಗಂಟೆ ಬಳಿಕ ಆಂಬ್ಯುಲೆನ್ಸ್‌ ಆಗಮಿಸಿದ್ದು, ರೋಗಿಯನ್ನು ಮಂಗಳೂರಿನ ಕೆಎಂಸಿಗೆ ಸಾಗಿಸಬೇಕು ಎನ್ನುವಷ್ಟರಲ್ಲಿ  ವಾಹನ ಕೆಟ್ಟು ನಿಂತಿತ್ತು. ಬಳಿಕ ಮತ್ತೆ ಖಾಸಗಿ ವಾಹನಕ್ಕೆ ವರ್ಗಾಯಿಸಿ, ಸಾಗಿಸುವ ವೇಳೆ ಅವರು ಮೃತಪಟ್ಟಿದ್ದರು. ಇದು ಆಂಬ್ಯುಲೆನ್ಸ್‌ನಂತಹ ತುರ್ತುಸೇವೆಯಲ್ಲೂ ಇರುವ ಅವ್ಯವಸ್ಥೆಗೆ ಕೈಗನ್ನಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪಡುಬಿದ್ರಿಗೆ ಪತ್ಯೇಕ ಆಂಬ್ಯುಲೆನ್ಸ್‌ಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆ ಕೇಳಿಬಂದಿದೆ.  

ತುರ್ತು ಸೇವೆಗೆ ಅಗತ್ಯ
ತುರ್ತು ಸಂದರ್ಭ ಖಾಸಗಿ ವಾಹನಗಳನ್ನೇ ನೆಚ್ಚಿಕೊಳ್ಳುವಂತಾಗಿದೆ. ಸರಕಾರಿ 108 ಆ್ಯಂಬ್ಯುಲೆನ್ಸ್‌ ಸೇವೆ ಅಗತ್ಯವಿದ್ದು ಕೂಡಲೇ ಪಡುಬಿದ್ರಿಯಲ್ಲಿ ಶುರುವಾಗಬೇಕು. 

– ಶ್ರೀಕಾಂತ್‌ ಪಡುಬಿದ್ರಿ, ಕ್ಲಿನಿಕಲ್‌ ಲ್ಯಾಬ್‌ ಮಾಲಕ

Advertisement

– ಆರಾಮ

Advertisement

Udayavani is now on Telegram. Click here to join our channel and stay updated with the latest news.

Next