ಪಡುಬಿದ್ರಿ: ಅವರು ಬಯಸಿ ಬ್ರಹ್ಮಸ್ಥಾನದತ್ತ ಬಂದಿರಲಿಲ್ಲ. ರಾತ್ರಿ ತಂಬಿಲ ಸೇವೆ ನಡೆದಿದ್ದ ಜ. 5ರಂದು ಶಕ್ತಿಯ ಆಕರ್ಷಣೆಯೊಂದಿಗೆ ಅಂದಿನ ಅಯೋಧ್ಯೆಯ ಕರಸೇವಕ, ಇಂದಿನ ಪಿಗ್ಮಿ ಸಂಗ್ರಾಹಕ ಪಡುಬಿದ್ರಿಯ ವಾಮನ ಸಂತಾನದ ಹರಿನಾರಾಯಣ ರಾವ್(65) ಪಡುಬಿದ್ರಿ ಬ್ರಹ್ಮಸ್ಥಾನದ ಎರಡನೇ ಪಾತ್ರಿ(ಕೊರಡು) ಆಗಿ ಸನ್ನಿಧಾನಕ್ಕೆ ಅರ್ಪಿತವಾಗಿದ್ದಾರೆ.
ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಕೊರಡುಗಳ ಬರವೆಂಬ ಮಾತು ಭಕ್ತರ ಮಧ್ಯೆ ಇತ್ತೀಚೆಗೆ ಬಹಳಷ್ಟು ಹರಿದಾಡಿತ್ತು.
ಈ ನಡುವೆಯೇ ಊರ ಶಿವಳ್ಳಿ ಬ್ರಾಹ್ಮಣ ಸಮಾಜದ ಹತ್ತು ಸಮಸ್ತರು ಒಂದಾಗಿ ಬನ್ನಿರಿ. ನಾನೂ ತೋರಿಸುವೆನೆಂಬಂತೆ ಖಡ್ಗೇಶ್ವರೀ ತಾಯಿಯ ಅಪ್ಪಣೆಯಾಗಿತ್ತು.
ಈ ನಡುವೆ ಇತ್ತೀಚೆಗಷ್ಟೇ ನವೀಕರಣಗೊಂಡಿದ್ದ ಶ್ರೀ ಖಡ್ಗೇಶ್ವರೀ ಜ್ಞಾನಮಂದಿರದ ಪ್ರಯುಕ್ತ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ವತಿಯಿಂದ ಜ. 5ರ ರಾತ್ರಿ ತಂಬಿಲ ಸೇವೆಯು ನಿಗದಿಯಾಗಿತ್ತು. ಇದು ಭಕ್ತರ ಗೋವಿಂದ ಘೋಷದೊಂದಿಗೇ ಆರಂಭವಾಗಿತ್ತು. ಪ್ರಥಮ ಪಾತ್ರಿ ಸುರೇಶ್ ರಾವ್ ಆದಿಯಿಂದಲೇ ಅತ್ಯಂತ ಆವೇಶಭರಿತರಾಗಿದ್ದರು.
ಇದು ಏನೇನೂ ವಿಶೇಷವಲ್ಲವೆಂಬಂತೆ ಸಾಮಾನ್ಯವಾಗಿಯೇ ಭಾಗವಹಿಸಿದ್ದ ಹರಿನಾರಾಯಣ ರಾವ್ ಭಕ್ತರ ಜಂಗುಳಿಯಲ್ಲಿ ಹತ್ತರಲ್ಲೊಬ್ಬರಾಗಿದ್ದರು. ಅಂತಹ ಅವರನ್ನೇ ಬೆರಳೆತ್ತಿ ಆಹ್ವಾನಿಸಿದ ತಾಯಿ ಖಡ್ಗೇಶ್ವರಿಯಿಂದಾಗಿ ತಂಬಿಲದ ಕೊನೆಯ ಕಾಲಘಟ್ಟದಲ್ಲಿ ಕೊರಡಾಗಿ ಆಯ್ಕೆಯಾಗಿರುವುದು ಖಡ್ಗೇಶ್ವರೀ ಸನ್ನಿಧಾನ ಕುರಿತಾದ ಬಗೆಯಲಾರದ ಚಿದಂಬರ ರಹಸ್ಯಗಳ ದಾಖಲೆಗಳ ಪುಂಜಕ್ಕೆಮಗದೊಂದು ವೈಶಿಷ್ಟ್ಯವಾಗಿ ಸೇರ್ಪಡೆಗೊಂಡಿದೆ.
ಈ ಸಂದರ್ಭದಲ್ಲಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಅರ್ಚಕ ವೃಂದ, ಶ್ರೀ ಖಡ್ಗೇಶ್ವರೀ ವನದುರ್ಗಾ ಟ್ರಸ್ಟ್ ನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಸದಸ್ಯರು, ಗುರಿಕಾರರು, ಸ್ಥಾನಿಗಳು, ಮಾನಿಗಳು, ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ನೆರೆದಿದ್ದರು.