ಪಡುಬಿದ್ರಿ: ಪೇಟೆ ಭಾಗದಲ್ಲಿ ಸರ್ವಿಸ್ ರಸ್ತೆ ಅರ್ಧ ಮಾತ್ರ ಮುಗಿದಿದ್ದು ಉಳಿದ ರಸ್ತೆ ಹೊಂಡಗಳಿಂದ ತುಂಬಿದೆ. ಒಂದು ಪಾರ್ಶ್ವದಲ್ಲಿ ಮಳೆ ನೀರು ಹರಿಯುವ ಚರಂಡಿ ಕಾಮಗಾರಿ ಅಪೂರ್ಣವಾಗಿದ್ದು , ರಸ್ತೆಯಲ್ಲೇ ನೀರು ಹರಿಯುತ್ತಿದೆ. ಮಂಗಳೂರು ಕಡೆಗೆ ಹಾಗೂ ಕಾರ್ಕಳ, ಉಡುಪಿಗೆ ತೆರಳುವ ಪ್ರಯಾಣಿಕರು ಸೂಕ್ತ ಬಸ್ ನಿಲ್ದಾಣವಿಲ್ಲದೆ ಮಳೆಯಲ್ಲೇ ಬಸ್ ಕಾಯುವ ಸ್ಥಿತಿ ಇದೆ.
ಆಟೋ ರಿಕ್ಷಾ, ಟೂರಿಸ್ಟ್ ಕಾರು, ಟೆಂಪೋ ನಿಲುಗಡೆಗೂ ಇಲ್ಲಿ ಸೂಕ್ತ ನಿಲ್ದಾಣಗಳಿಲ್ಲ. ರಿಕ್ಷಾ ಹಾಗೂ ಖಾಸಗಿ ವಾಣಿಜ್ಯ ಮಳಿಗೆಗಳಿಗೆ ಬರುವ ಮಂದಿ ವಾಹನಗಳನ್ನು ಸರ್ವಿಸ್ ರಸ್ತೆಯಲ್ಲಿಯೇ ನಿಲುಗಡೆ ಮಾಡುತ್ತಿದ್ದಾರೆ. ಬಸ್‌ಗಳು ಹೆದ್ದಾರಿಯಲ್ಲಿಯೇ ಪ್ರಯಾಣಿಕರನ್ನು ಹತ್ತಿ ಇಳಿಸುತ್ತಿವೆ.
ಎರ್ಮಾಳು ಕಲ್ಸಂಕ ಬಳಿ ಕೇವಲ ಒಂದು ಭಾಗದ ಸೇತುವೆಯನ್ನಷ್ಟೇ ನಿರ್ಮಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇನ್ನೊಂದು ಪಾರ್ಶ್ವದ ಸೇತುವೆ ಕಾಮಗಾರಿ ಅಪೂರ್ಣವಾಗಿದ್ದು ಸೇತುವೆ ಉತ್ತರ ಭಾಗದ ಹೆದ್ದಾರಿಯ ಇಕ್ಕೆಲಗಳಲ್ಲಿ ಮಣ್ಣು ರಾಶಿ ಹಾಕಲಾಗಿದ್ದು, ಕೃತಕ ನೆರೆಗೆ ಆಹ್ವಾನ ನೀಡಿದೆ. ಕಳೆದ ಮಳೆಗಾಲದಲ್ಲಿ ನೆರೆಯಿಂದ ಹೆದ್ದಾರಿ ಮುಳುಗಡೆಯಾಗಿತ್ತು, ಪೂರ್ಣ ಗೊಂಡ ಪೇಟೆ ಭಾಗದ ರಸ್ತೆಯ ಹಲವೆಡೆ ಡಾಮರು ಕಿತ್ತುಹೋಗಿ ಸಂಚಾರಕ್ಕೆ ಸಮಸ್ಯೆಯಾಗಿದೆ.
ಕಾರ್ಮಿಕರ ಕೊರತೆ ಕಾರಣ
ಜಿಲ್ಲಾಧಿಕಾರಿಯವರು ಗುತ್ತಿಗೆದಾರರನ್ನು ಕರೆಸಿ ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು. ಆದರೆ ಕೊರೊನಾದಿಂದಾಗಿ ಕಾರ್ಮಿಕರ ಕೊರತೆ ಇರುವುದಾಗಿ ಕಂಪೆನಿ ತಿಳಿಸಿದೆ. ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರೂ ಸಮಯ ಮಿತಿ ತಿಳಿಸಿಲ್ಲ. .
ಕೆ. ರಾಜು,
ಅಸಿಸ್ಟೆಂಟ್ ಕಮಿಶನರ್, ಕುಂದಾಪುರ