Advertisement

ಪಡುಬಿದ್ರಿ ಬ್ರಹ್ಮಸ್ಥಾನ: ಬಯಲು ಆಲಯದ ಚಿದಂಬರ ರಹಸ್ಯ

04:58 PM Jan 18, 2023 | Team Udayavani |

ಕಟ್ಟಡ ಪ್ರಧಾನವಾಗದೆ ’ಕಟ್ಟಳೆಗಳೇ’ ಮುಖ್ಯವಾಗಿರುವ ಆದಿಮ ಆಚರಣೆಯ ಸತ್ವಗಳನ್ನು ಉಳಿಸಿಕೊಂಡು, ಬದಲಾವಣೆಯ ಯಾವುದೇ ಸುಳಿಗೆ ಸಿಗದೆ ತನ್ನ ಮೂಲ ಸ್ವರೂಪದಲ್ಲಿ ಸಂಪ್ರದಾಯಬದ್ಧವಾಗಿ ಆಚರಣೆಗಳ ವೈವಿಧ್ಯಗಳೊಂದಿಗೆ ಪಡುಬಿದ್ರಿಯ ’ಬ್ರಹ್ಮಸ್ಥಾನ’ವು (ಬೆರ್ಮಸ್ಥಾನ) ರಾಜ್ಯದಾದ್ಯಂತ ಆಸ್ತಿಕರ, ಚಿಂತಕರ, ವಾಸ್ತವವಾದಿಗಳ, ಸಂಶೋಧಕರ ಗಮನಸೆಳೆದ ಶ್ರದ್ಧಾಕೇಂದ್ರ.ಇಲ್ಲಿ ನಡೆಯುವ ರೋಚಕ ವಿಧಿಗಳ ವಿಲಕ್ಷಣ ಆರಾಧನಾ ವಿಧಾನವನ್ನು ಸ್ಥೂಲವಾಗಿ ಗಮನಿಸಿದರೆ ಏನೂ ತಿಳಿಯದು. ಆದರೆ ಸೂಕ್ಷ್ಮ ಅವಲೋಕನದಿಂದ ಎಲ್ಲವೂ ಒಗಟಾಗುತ್ತಾ ವಿವರಗಳು ನಿಗೂಢವಾಗುತ್ತವೆ. ಆದುದರಿಂದಲೇ ಆ ಆರಾಧನಾ ಸನ್ನಿಧಾನವು ವಿಭಿನ್ನ ಸ್ತರಗಳ ಜನರ ಆಸಕ್ತಿಯನ್ನು ಕೆರಳಿಸುತ್ತದೆ.

Advertisement

ಇಲ್ಲಿ ನೆರವೇರುವ ಕೇವಲ ಒಂದು ಢಕ್ಕೆ ಬಲಿ, ಹಗಲು ತಂಬಿಲ, ರಾತ್ರಿ ತಂಬಿಲಗಳನ್ನು ಗಮನಿಸುವುದರಿಂದ ಆಸಕ್ತನ ಪ್ರಶ್ನೆಗಳಿಗೆ ಉತ್ತರ ದೊರಕಲಾಗದು. ಆದರೆ ಆಚರಣೆಯ ಕ್ರಮ, ಕಟ್ಟುಕಟ್ಟಳೆ, ವಿಧಿಗಳನ್ನು ನಿರ್ವಹಿಸುವ ವೇಳೆ ಬಳಸಲಾಗುವ ಶಬ್ದಗಳು, ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯಗಳು ವಿಧಿಸಲ್ಪಟ್ಟಿರುವ ನಿಯಮ ನಿಬಂಧನೆಗಳನ್ನು ಜಿಲ್ಲೆಯಲ್ಲಿ ಹರಡಿರುವ ಪ್ರಾಕ್ತನ ಉಪಾಸನಾ ಸ್ಥಾನಗಳಲ್ಲಿ ನಡೆಯುವ ಆಚರಣೆಗಳೊಂದಿಗೆ ಹೋಲಿಸಿ ತೌಲನಿಕವಾಗಿ ಅಧ್ಯಯನ ನಡೆಸಿದರೆ ಮೇಲ್ನೋಟಕ್ಕೆ ಒಂದು ಸ್ಥೂಲ ಚಿತ್ರಣ ಲಭಿಸುವ ಸಾಧ್ಯತೆ ಇದೆ. ಇದಕ್ಕೆ ಸಂಶೋಧನೆಯೆಂಬ ಹಣೆಪಟ್ಟಿಯನ್ನು ತೆಗೆದು ಹಾಕಿ ಅಧ್ಯಯನವೆಂಬ ವಿನೀತಭಾವ ಸ್ವೀಕರಿಸಿದಾಗ ಮಾತ್ರ ಈ ಬಯಲು ಆಲಯದ ನಿಗೂಢ ರಹಸ್ಯಗಳತ್ತ ಗಮನ ಕೇಂದ್ರೀಕರಿಸಲು ಸಾಧ್ಯ. ಇಲ್ಲವಾದಲ್ಲಿ ಎಲ್ಲವೂ ಗೋಜಲು, ಪ್ರತೀ ಹಂತವೂ ಕ್ಲಿಷ್ಟ.

ಬ್ರಹ್ಮಸ್ಥಾನ

ಬ್ರಹ್ಮಸ್ಥಾನ – ಬೆರ್ಮಸ್ಥಾನವೆಂದೊಡನೆ ತಟ್ಟನೆ ನಮ್ಮ ಮುಂದೆ ನಿಲ್ಲುವುದು ಬ್ರಹ್ಮ( ಬೆರ್ಮೆರ್ – ಬ್ರಹ್ಮೆರ್) , ನಾಗ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ ಎಂಬ ಪಂಚದೈವಗಳನ್ನೊಳಗೊಂಡ ಪೂಜಾಸ್ಥಳ. ಇಂತಹ ಸ್ಥಾನಗಳು ಕುಟುಂಬಕ್ಕೊಂದರಂತೆ ಅಥವಾ ಊರಿಗೊಂದರಂತೆ ಜಿಲ್ಲೆಯಲ್ಲಿ ಬಹುಸಂಖ್ಯೆಯಲ್ಲಿವೆ.ಒಂದೊಂದರಲ್ಲಿ ಅದರದ್ದೇ ಆದ ವಿಶಿಷ್ಟ ಪೂಜಾಕ್ರಮವಿದೆ. ಸಮಗ್ರವಾದ ಒಂದು ಏಕತಾನತೆ ಇದೆ. ಈ ಕಾರಣದಿಂದ ಅವುಗಳ ಸ್ವರೂಪ ನಿರ್ಧಾರ ಆಚರಣಾ ಪದ್ಧತಿಗಳನ್ನು ನಿಖರವಾಗಿ ಗ್ರಹಿಸಬಹುದಾಗುತ್ತದೆ.ಈ ಪಂಚದೈವಗಳೊಂದಿಗೆ ಸಿರಿಗಳು, ದೈವಗಳು ಸೇರಿಕೊಂಡಾಗ ಆಲಡೆಗಳಾಗಿ ಈ ಬ್ರಹ್ಮಸ್ಥಾನಗಳೇ ಗುರುತಿಸಲ್ಪಡುತ್ತವೆ.

ದೇವಸ್ಥಾನಗಳ ಪರಿವಾರ ದೇವತೆಗಳಾಗಿಯೂ ಪಂಚದೈವಗಳ ಆರಾಧನೆ ರೂಢಿಯಲ್ಲಿದೆ. ಒಟ್ಟಿನಲ್ಲಿ ಒಂದು ಮೂಲಭೂತವಾದ ’ಸಮೂಹ ಆರಾಧನಾ’ ಪರಿಕಲ್ಪನೆಯು ನಾಗರಿಕತೆ ಬೆಳೆದಂತೆ ರೂಪಾಂತರ, ನಿಷ್ಟಾಂತರ, ನಾಮಾಂತರಗೊಳ್ಳುತ್ತಾ ಮಾನವ ವಿಕಾಸದೊಂದಿಗೆ ಸಾಗಿ ಬಂದುದನ್ನು ಸ್ಪಷ್ಟವಾಗಿ ವಿಶ್ಲೇಷಿಸಬಹುದಾಗುತ್ತದೆ. ಆದರೆ ಯಾವುದೇ ಬದಲಾವಣೆಗೆ ಒಳಗಾಗದೆ, ವೈದಿಕದ ಪ್ರಭಾವವನ್ನೂ ಸ್ವೀಕರಿಸದೆ ಆದಿಮ, ಸರಳ, ಸಹಜವಾಗಿ ಪ್ರಕೃತಿಯ ಮಡಿಲಲ್ಲಿ ಪ್ರಕೃತಿ ಸಹಜವಾದ ಶಕ್ತಿ ವಿಶೇಷಗಳ ಉಪಾಸನಾ ಕೇಂದ್ರವಾಗಿ ’ಪಡುಬಿದ್ರಿಯ ಬ್ರಹ್ಮಸ್ಥಾನ’ ಗಮನಾರ್ಹವಾಗುತ್ತದೆ.

Advertisement

ಪ್ರಕೃತಿ ಮೂಲದ ಆರಾಧನೆ
ಪ್ರಕೃತಿಯ ವಿಕೋಪ ಮತ್ತು ಅನುಗ್ರಹ ವಿಶೇಷ ಕಂಡು ಬೆರಗಾದ ಮಾನವ ಪ್ರಕೃತಿಯಲ್ಲಿ ಸರ್ವೋತ್ಕೃಷ್ಟ ಚೈತನ್ಯವನ್ನು ಗುರುತಿಸಿದ , ಮುಂದೆ ಪ್ರಕೃತಿ ಮೂಲವಾಗಿ ಕೆಲವೊಮ್ಮೆ ’ಸ್ತ್ರೀ’ ಎಂದೂ ಮತ್ತು ಕೆಲವೊಮ್ಮೆ ’ಪುರುಷ’ನೆಂದೂ ಭಯಭಕ್ತಿಗಳಿಂದ ಆರಾಧಿಸತೊಡಗಿದ್ದು ಬಹುಶಃ ಅಲೆಮಾರಿ ಬದುಕಿಗೆ ಸ್ಥಿರ ಆಶ್ರಯ ದೊರೆತಾಗ. ಕೃಷಿ ಮಾಡಿ ಸಾಂಘಿಕ ಜೀವನ ಆರಂಭಿಸಿದ ಬಳಿಕ.

ಈ ’ಪ್ರಕೃತಿ’ ಉಪಾಸನಾ ವಿಧಾನವೇ ದೊಡ್ಢದು, ಶ್ರೇಷ್ಠ ಎಂಬ ಅರ್ಥದಲ್ಲಿ ಜೈನ ಹಾಗೂ ವೈದಿಕ ಪ್ರಭಾವದಿಂದ ’ಬ್ರಹ್ಮ’ ಆರಾಧನಾ ಕ್ರಮವಾಗಿ ರೂಢಿಯಲ್ಲಿ ಬಂದಿರುವುದನ್ನು ಗಮನಿಸಬಹುದು. ಮುಂದೆ ಪ್ರಕೃತಿಯನ್ನು ಒಂದೆಡೆ ಸಂಕೇತದ ಮೂಲಕ ಗುರುತಿಸಿ, ತನಗೆ ಯಾವುದನ್ನೆಲ್ಲ ಪೂಜಿಸಬೇಕೆಂದು ಅನ್ನಿಸಿತೋ ಅವುಗಳನ್ನೆಲ್ಲ ಸಂಕಲ್ಪಿಸಿ ಸಮೂಹ ಪೂಜೆಯನ್ನು ಯಾವಾಗ ಮಾನವ ಆರಂಭಿಸಿದನೋ ಅಷ್ಟು ಪ್ರಾಚೀನತೆ ಪಡುಬಿದ್ರಿಯ ಬ್ರಹ್ಮಸ್ಥಾನಕ್ಕಿದೆ. ಪ್ರಕೃತಿಯ ಮಡಿಲಲ್ಲಿ ಪ್ರಕೃತಿಯನ್ನು ಪ್ರಧಾನವಾಗಿರಿಸಿ ಪ್ರಕೃತಿಜನ್ಯ ಶಕ್ತಿ ವಿಶೇಷಗಳನ್ನು (ನಾಗ) ಪೂಜಿಸುವ ಸಂಕಲ್ಪವೇ ಇಲ್ಲಿಯ ವೈಶಿಷ್ಟ್ಯ. ಆದುದರಿಂದಲೇ ಇಲ್ಲಿ “ಕಟ್ಟಡಗಳು ಪ್ರಧಾನವಲ್ಲ. ಪ್ರಕೃತಿ ಪೂಜೆಯ ವೇಳೆ ಅಲಂಕೃತಳಾಗಿ ಅರಳುವ, ಪೂಜೆಗೊಳ್ಳುವ ಹಾಗೂ ಪೂಜೆ ಮುಗಿದಾಗ ಅಲಂಕಾರ ವಿಸರ್ಜನೆಯಾದಾಗ ಮತ್ತೆ ಯಥಾಸ್ಥಿತಿಗೆ ಬರುವ ಸಹಜ ಪರಿವರ್ತನೆಯನ್ನು ಕಾಣಬಹುದಾಗುತ್ತದೆ”. ಈ ಸಹಜತೆಯೇ ಕ್ಲಿಷ್ಟವಾಗಿ, ಅಭೇದ್ಯವಾಗಿ, ಚಿದಂಬರ ರಹಸ್ಯವಾಗಿ ನಮ್ಮ ದೃಷ್ಟಿಯನ್ನು ತೊರೆದು ಪ್ರಾಕ್ತನ, ಮುಗ್ಧ, ಸಹಜ, ಸರಳ ಎಂಬ ಭಾವದಿಂದ ಅವಲೋಕಿಸಿದಾಗ ಪರಮಸತ್ಯ ’ಪ್ರಕೃತಿ’ಯ “ವಿರಾಡ್-ದರ್ಶನ”ವಾಗುತ್ತದೆ.

ಪ್ರಕೃತಿ ಆರಾಧನೆಯೇ ಇಲ್ಲಿ ಬ್ರಹ್ಮ ಸ್ಪರೂಪದ ಪ್ರಧಾನ ಉಪಾಸನೆಯಾಗಿ, ನಾಗ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ ಸಹಿತ ಹತ್ತು ಹಲವು ಶಕ್ತಿ ವಿಶೇಷಗಳ ಪೂಜಾ ಸ್ಥಾನವಾಗಿದೆ.ನಾವು ಇಂದು ಕಾಣುವ ಸುವ್ಯವಸ್ಥಿತ ಸ್ಥಾನ ಕಲ್ಪನೆಗಳು ಪರಿವಾರ ದೇವತೆಗಳಿಗೆ ಇಲ್ಲಿಲ್ಲ. ಆದರೆ ಸಂಪ್ರದಾಯಬದ್ಧ, ಶಿಸ್ತಿನ ಆರಾಧನಾ ಕ್ರಮಗಳ ಅನುಸಂಧಾನವಿದೆ. ಆದುದರಿಂದಲೇ ಇಲ್ಲಿಯ ’ಸಾನಿಧ್ಯ’ವು ಪ್ರಶ್ನಾತೀತವಾಗಿ ನಿಲ್ಲುತ್ತದೆ. ದೋಷಗಳನ್ನು ಗುರುತಿಸುತ್ತಾ, ಪ್ರತಿಯೊಂದನ್ನೂ ಪ್ರಶ್ನಿಸುತ್ತಾ, ಸಂಶಯದ ದೃಷ್ಟಿಯಿಂದ ನೋಡುತ್ತಾ ಬ್ರಹ್ಮಸ್ಥಾನ ಪ್ರವೇಶಿಸಿದರೆ ಎಲ್ಲವೂ ನಿಗೂಢ. ಆದರೆ ಮುಕ್ತ ಮನಸ್ಸಿನಿಂದ ನಂಬಿಕೆ, ಶ್ರದ್ಧೆ, ಆರಾಧನೆಗಳ ಮೂಲ ಸಾರಾಂಶವನ್ನು ಅರಿತು, ತಿಳಿದುಕೊಳ್ಳುವ ಸಹಜ ಉತ್ಸುಕತೆಯಿಂದ ’ನಡೆ’ಯಲ್ಲಿ ನಿಂತರೆ ಮಾನವ ಬದುಕಿನೊಂದಿಗೆ ಸಾಗಿ ಬಂದ ಸಹಸ್ರಾರು ವರ್ಷ ಪುರಾತನವಾದ ಒಂದು ’ಆರಾಧನ ಪ್ರಕಾರ’ದ ಸಾಕ್ಷಾತ್ಕಾರವಾಗುತ್ತದೆ. ಅಂದರೆ ಇಲ್ಲಿಯ ಪ್ರತಿಯೊಂದು ಕಟ್ಟಳೆಯ ಹಿಂದೆಯೂ ಸಮಷ್ಟಿಯ ಪರಿಕಲ್ಪನೆ ಇದೆ. ಮುಗ್ಧ ಭಕ್ತಿ ಇದೆ, ಸರಳ ವಿಧಾನಗಳಿವೆ, ಮಾನವ ಬದುಕಿನ ಸಮೀಪವಾದ ವಿಶ್ವ ಚೈತನ್ಯದ ಪರಿಕಲ್ಪನೆ ಮತ್ತು ಅನುಸಂಧಾನದ ಒಂದು ವಿಧಾನವಿದೆ. ಆದುದರಿಂದಲೇ ಈ ಬ್ರಹ್ಮಸ್ಥಾನ ಆಕರ್ಷಣೆಯ ಕೇಂದ್ರ. ಸಿದ್ಧಿಕ್ಷೇತ್ರ (ನಂಬಿಕೆ). ಸತ್ಯಶೋಧನೆಯ ಹೆಗ್ಗಳಿಕೆಗಿಂತಲೂ ಸತ್ಯ ಸಾಕ್ಷಾತ್ಕಾರಕ್ಕೆ ಅಂದರೆ ಸರಳ, ಸಹಜವಾದುದನ್ನು ಪರಿಗ್ರಹಿಸಿ ಇತರೆಡೆಗಳಲ್ಲಿರುವ ಆರಾಧನಾ ವಿಧಾನಗಳೊಂದಿಗೆ ತುಲನಾತ್ಮಕವಾಗಿ ಅಧ್ಯಯನ ನಡೆಸಿದರೆ ಈ ಬಯಲು ಆಲಯದಲ್ಲಿ ಎಲ್ಲವೂ ಬಟ್ಟಂಬಯಲು. ಆದರೆ ಸತ್ಯ ಸ್ವೀಕಾರಕ್ಕೆ ಮುಕ್ತ ಮನಸ್ಸುಬೇಕು.

ದಳ್ಯ, ಕೊರಡು, ಪುಷ್ಪನೀರ್ …….ಇತ್ಯಾದಿ

ಅವೈದಿಕವಾದರೂ ವೈದಿಕರಿಂದ ನೆರವೇರುವ ಇಲ್ಲಿಯ ಆಚರಣೆಗಳಲ್ಲಿ ವೈದಿಕದ ಛಾಯೆ ಇಲ್ಲ. ಎಲ್ಲವೂ ತಲೆಮಾರಿನಿಂದ ನಡೆದು ಬಂದಂತೆ ತಂತ್ರ ಪ್ರಧಾನವಾಗಿ ನಡೆಯುತ್ತದೆ. ವೈದಿಕದ ಒಪ್ಪ-ಓರಣ, ವ್ಯನಸ್ಥೆಯ ಚೌಕಟ್ಟೊಂದು ಸ್ಪ?ಷ್ಟವಾಗುತ್ತದೆ. ಇಲ್ಲಿ ಪೂಜಾದಿ ವಿಧಿಗಳನ್ನು ನಿರ್ವಹಿಸುವ, ಗುರಿಕಾರರಾಗಿ ಕರ್ತವ್ಯವೆಸಗುವ, ಸ್ವಯಂ ಸೇವಕರಾಗಿ ದುಡಿಯುವ, ಉಸ್ತುವಾರಿ ನೋಡಿಕೊಳ್ಳುವ ಎಲ್ಲರೂ ತಮ್ಮ ದೈನಂದಿನ ಜೀವನದಲ್ಲಿ ಯಾವುದೇ ಸಂದರ್ಭದಲ್ಲಿ ಉಚ್ಚರಿಸದ ಕೆಲವೊಂದು ವಿಶಿಷ್ಟ ಶಬ್ಧಗಳು ಬ್ರಹ್ಮಸ್ಥಾನದ ಒಳಗೆ ಉಚ್ಚರಿಸುವುದು ಗಮನಿಸತಕ್ಕ ವಿಷಯ.

ದರ್ಶನ ಪಾತ್ರಿಗಳು ಉಡುವ ಮಡಿ ಬಟ್ಟೆ, ದಳ್ಯ, (ದಲ್ಯ-ದಲಿಯ). ದರ್ಶನ ಪಾತ್ರಿಗಳು ’ಕೊರಡ್’ ಅಥವಾ ನೆಯಿಮಾಣಿಕುಳು (ಸ್ಥಾನಿಗಳೆಂದು ಇತ್ತೀಚೆಗೆ), ’ಪುಷ್ಪನೀರ್’(ಪೂನೀರ್) ಮುಂತಾದ ಕನಿಷ್ಟ ಹದಿನೈದು ದ್ರಾವಿಡ ಮೂಲ ಶಬ್ದಗಳು (ಭಾಷಾ ಶಾಸ್ತ್ರದ ವಿಭಾಗಕ್ಕೆ ಅನುಗುಣವಾಗಿ) ಇಲ್ಲಿ ಕೇಳಿ ಬರುತ್ತವೆ. ಈ ಅಂಶವು ಅಧ್ಯಯನ ಯೋಗ್ಯವಾದುದು ಅನ್ನಿಸುತ್ತದೆ.

ವೀಳ್ಯೆದೆಲೆಯಲ್ಲಿ ಗಂಧ,ಮರಳು ಇಲ್ಲಿ ಪ್ರಸಾದ
ಆರಾಧನೆಯ ಸಂದರ್ಭಗಳಲ್ಲಿ‌ವೀಳ್ಯೆದೆಲೆಯಲ್ಲಿ ಗಂಧ ನೀಡುವುದು,(ಉಳಿದ ದಿನಗಳಲ್ಲಿ ಸನ್ನಿಧಾನಕ್ಕೆ ನಮಸ್ಕರಿಸುವಾಗ ಮೈಗೆ ಅಂಟಿಕೊಳ್ಳುವ ಮರಳು ಇಲ್ಲಿ ಪ್ರಸಾದ).ಅಡಿಕೆ ಮರದ ಹಾಳೆ ವೀಳ್ಯೆದೆಲೆಯ ಹರಿವಾಣವಾಗುವುದು, ತಾರತಮ್ಯಗಳಿಲ್ಲದ ಸಭಾ ವ್ಯವಸ್ಥೆ – ಎಂದರೆ ಆಸನಗಳಿಲ್ಲದೆ ನೆಲದಲ್ಲೆ ಕುಳಿತುಕೊಳ್ಳುವುದು , ದೊಂದಿ ಬೆಳಕಿಗೆ ಪ್ರಾಧಾನ್ಯ, ವೈಬವದ ವಾದ್ಯಗಳಿಗೆ ಅವಕಾಶವಿಲ್ಲದಿರುವುದು, ಯಾವುದೇ ವಿಧಿ ನಿರ್ವಹಣೆಯಲ್ಲಿ ರಾಜಿ ಸೂತ್ರವಿಲ್ಲ, ನಿಯಮದಂತೆ ನಡೆಯತಕ್ಕದ್ದು, ಕರ್ತವ್ಯಲೋಪದಲ್ಲಿ ಕ್ಷಮೆ ಇಲ್ಲದಿರುವುದು ಇವು ಇಲ್ಲಿಯ ವಿಶೇಷಗಳು.

ಢಕ್ಕೆ ಬಲಿ
ಭೂತ ನಾಗರಿಗೆ ಮಂಡಲ ಬರೆದು ನಡೆಯುವ ಒಂದು ಬಗೆಯ ನೃತ್ಯ ರೂಪದ ಆರಾಧನೆ ಅಥವಾ ಆರಾಧನಾ ಮೂರ್ತಿಯನ್ನು ಹೊತ್ತುಕೊಂಡು ಢಕ್ಕೆ ಬಾರಿಸಿಕೊಂಡು ಗುಡಿಗೆ ಪ್ರದಕ್ಷಿಣೆ ಬರುವ ಆಚರಣೆ ಎಂಬುದು ’ಢಕ್ಕೆ ಬಲಿ’ ಶಬ್ದಕ್ಕೆ ತುಳು ನಿಘಂಟು ನೀಡುವ ಅರ್ಥ.ಜಿಲ್ಲೆಯಾದ್ಯಂತ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯುವ ಢಕ್ಕೆ ಬಲಿಯನ್ನು ಮತ್ತು ಅದರ ವಾಸ್ತವ ಸ್ವರೂಪವನ್ನು ಗಮನಿಸಿದರೆ ’ಬ್ರಹ್ಮ’ ಪ್ರಧಾನವಾಗಿ ಉಳಿದ ನಾಗ, ರಕ್ತೇಶ್ವರಿ (ಚಿಕ್ಕಿ), ನಂದಿಗೋಣ (ಹಾಯ್ಗುಳಿ) ಮುಂತಾದ ದೈವಗಳಿಗೆ ಸಮೂಹದಲ್ಲಿ ನಡೆಸುವ ಆಚರಣೆ ಎಂಬುದು ಸ್ಪಷ್ಟವಾಗುತ್ತದೆ.ಈ ಸಂದರ್ಭದಲ್ಲಿ ಕೆಲವೊಮ್ಮೆ ’ನಾಗ’ ಪಾರಮ್ಯ ಏರ್ಪಟ್ಟು ಢಕ್ಕೆ ಬಲಿ ಅಥವಾ ಬ್ರಹ್ಮಮಂಡಲವು ’ನಾಗಮಂಡಲ’ವಾಗುವುದೂ ಇದೆ.

ಬ್ರಹ್ಮಪ್ರಧಾನವಾಗಿರುವ ಢಕ್ಕೆ ಬಲಿ ಅಥವಾ ಬ್ರಹ್ಮಮಂಡಲದಲ್ಲಿ ಬರುವ ಬ್ರಹ್ಮ ಚತುರ್ಮುಖ ಬ್ರಹ್ಮನೆಂದು ಢಕ್ಕೆಯವರ ಹಾಡಿನಿಂದ ಅರಿಯಬಹುದಾಗುತ್ತದೆ.ಆದರೆ ಪಡುಬಿದ್ರಿಯ ಬ್ರಹ್ಮ ಸ್ತ್ರೀರೂಪಿ, ಶಕ್ತಿ ಸ್ವರೂಪಿಣಿ. ಬ್ರಹ್ಮ ಪರಿಕಲ್ಪನೆಯು ಪ್ರಕೃತಿಯೊಂದಿಗಿನ ಮಾನವನ ಅವಿನಾಭಾವ ಸಂಬಂಧವನ್ನು ಹಾಗೂ ಮಾತೃ ಆರಾಧನಾ ಮೂಲವನ್ನು ದೃಢೀಕರಿಸುತ್ತದೆ. ಆದುದರಿಂದಲೇ ಜಿಲ್ಲೆಯ ಎಲ್ಲೆಡೆಗಿಂತ ಭಿನ್ನವಾಗಿ ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಢಕ್ಕೆ ಬಲಿ ನಡೆಯುತ್ತದೆ.

ಇಲ್ಲಿ ಯಾವತ್ತೂ ’ಬ್ರಹ್ಮ’ರು ಪುರುಷ ರೂಪಿ ಶಕ್ತಿಯಲ್ಲ; ಮಾತೃಶಕ್ತಿ, ಸ್ತ್ರೀರೂಪಿ, ’ಅಮ್ಮಾ ಬೆರ್ಮೆರೇ’, ’ಅಮ್ಮಾ, ತಾಯೇ’ ಮುಂತಾಗಿ ಭಕ್ತರು ಸಂಬೋಧಿಸುವ ಶಕ್ತಿ. ವನದುರ್ಗಾ, ಖಡ್ಗೇಶ್ವರಿ ಮುಂತಾದವುಗಳು ಇತ್ತೀಚೆಗಿನ ನಾಮಕರಣಗಳು. ಆದರೆ ಈ ಹೆಸರುಗಳು ಮೂಲತಃ ಇದ್ದ ಮಾತೃರೂಪದ ಸ್ತ್ರೀರೂಪಿ ಬ್ರಹ್ಮಕಲ್ಪನೆಯಿಂದಲೇ ಹುಟ್ಟಿದಂತಹವುಗಳು.

ತಂಬಿಲ
ಅಕ್ಕಿ, ತೆಂಗಿನಕಾಯಿ ಸ್ವಸ್ತಿಕೆ ಇಟ್ಟು, ಕಜ್ಜಾಯ, ಹಣ್ಣು, ವೀಳ್ಯದೆಲೆ, ಅಡಿಕೆ ನೈವೇದ್ಯಗಳನ್ನು ಸಮರ್ಪಿಸಿ ಭೂತ, ನಾಗ ಮೊದಲಾವುಗಳಿಗೆ ನಡೆಸುವ ಪೂಜಾ ವಿಧಾನವೇ ’ತಂಬಿಲ’ (ತುಳು ನಿಘಂಟು). ಹಗಲು ತಂಬಿಲ, ರಾತ್ರಿ ತಂಬಿಲ, ಢಕ್ಕೆಬಲಿ ವೇಳೆ, ಪೂರ್ವರಂಗವಾಗಿ ನಡೆಯುವ ವಿಧಿಯೂ ’ತಂಬಿಲ’ ಇವು ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲಿ ನಡೆಯುವ ತಂಬಿಲ ವಿವರ.

ಈ ಮೇಲಿನ ವಿವರಗಳ ಆಧಾರದಲ್ಲಿ ಭೂತಗಳು ಸೇರಿದಂತೆ ದೇವ-ದೇವತೆಗಳ ನೆಲೆಬೀಡು ಪಡುಬಿದ್ರಿಯ ಬ್ರಹ್ಮಸ್ಥಾನ. ಇಲ್ಲಿ ಪ್ರಕೃತಿ ರೂಪಿ ಸ್ತ್ರೀಶಕ್ತಿ ’ಬ್ರಹ್ಮ’ರು ನಿಯಾಮಕ ಶಕ್ತಿ.

ವಾರ್ಷಿಕ ನಡೆಯುವ ಇತರ ಪರ್ವ ದಿನಗಳಲ್ಲಿ ಆಚರಿಸಲ್ಪಡುವ ವಿಧಿಗಳಿಂದಲೂ ಯಾವುದೋ ಒಂದು ಪರಮ ಸತ್ಯ ಗುಪ್ತವಾಗಿದೆ ಎನ್ನಲಡ್ಡಿ ಇಲ್ಲ. ಆದುದರಿಂದಲೇ ಈ ಕ್ಷೇತ್ರ ಪ್ರಶ್ನಾತೀತವಾಗಿದೆ ಎಂಬುದಾಗಿ ಭಾವಿಸಬಹುದು.

ಸನ್ನಿಹಿತ ಸಾನಿಧ್ಯ
ಪ್ರಮುಖ ’ಬ್ರಹ್ಮ’ ಸಂಕಲ್ಪದ ಮುಂದೆ ಯಾವ ಶಕ್ತಿಯನ್ನು ಕುರಿತಾಗಿ ಪೂಜಿಸಿ, ಹಾಡಿ, ಢಕ್ಕೆಯ ನಾದ ಹೊರಡಿಸಿ, ಪಂಚವಾದ್ಯ ಘೋಷವಾದಾಗ ಆ ಶಕ್ತಿ ಸನ್ನಿಹಿತವಾಗುವ (ಪಾತ್ರಿಯ ಮೈಮೇಲೆ ಆವೇಶ) ಒಂದು ಅಪೂರ್ವ ವಿಧಾನವು ನಮ್ಮನ್ನು ಬಹಳ ಪೂರ್ವಕ್ಕೆ ಕರೆದೊಯ್ಯುತ್ತದೆ. ’ಸಾನಿಧ್ಯವಿದೆ ಎಂದು ಪೂಜೆ ಅಲ್ಲ. ಪೂಜೆ ನಡೆಯುತ್ತಿರುವಂತೆಯೇ ಸಾನ್ನಿಧ್ಯ ಸನ್ನಿಹಿತವಾಗುವುದು’ -ಈ ಸಂಸ್ಕೃತಿಯ ಮೂಲತತ್ವ ಎಂಬ ವಿದ್ವಾಂಸರ ಮಾತು ಇಲ್ಲಿಗೆ ಸಮನ್ವಯವಾಗುತ್ತದೆ.

ಸಂಪ್ರದಾಯ – ರಹಸ್ಯ
ಪಡುಬಿದ್ರಿ, ಬ್ರಹ್ಮಸ್ಥಾನದ ದ್ವೈವಾರ್ಷಿಕ ನಡಾವಳಿ ’ಢಕ್ಕೆ ಬಲಿ’ ಏನು? ಹೇಗೆ? ಏಕೆ? ಮುಂತಾದ ಜಿಜ್ಞಾಸುಗಳ ಪ್ರಶ್ನೆಗೆ ’ಸಂಪ್ರದಾಯ’ ಎಂಬ ಸಿದ್ಧ ಉತ್ತರ ಬಿಟ್ಟರೆ ಯಾರಿಗೂ ಏನೂ ತಿಳಿಯದು ಈ ಪೂಜಾ ಸ್ಥಳದ ಪೂರ್ವಾಪರ. ಹಾಗಾಗಿಯೇ ನಿಗೂಢವಾಗಿರುವ ಸ್ಥಳ ವಿಶೇಷವೇ ಇಲ್ಲಿನ ಸಾನ್ನಿಧ್ಯ. ಇದೇ ಪ್ರಾಕ್ತನ ಸಂಸ್ಕೃತಿಯ ’ಕಟ್ಟಡಗಳು ಪ್ರಧಾನವಾಗಿರದೆ ಕಟ್ಟಡಗಳೇ ಪ್ರಾಮುಖ್ಯ ಪಡೆಯುವ’ ಮೂಲ ಅಂಶ.
ಗರ್ಭಗೃಹಗಳಂತಹ ನಿರ್ಮಾಣಗಳು ಇಲ್ಲಿಲ್ಲ. ಕಾಡಿನ ಮಧ್ಯೆ, ಬಂಡೆಕಲ್ಲಿನ ಬುಡದಲ್ಲಿ ಬ್ರಹ್ಮ ಸಂಕಲ್ಪವಿದೆ. ಪಕ್ಕದಲ್ಲೆ ನಂದಿಗೋಣ, ಮುಂಭಾಗದಲ್ಲಿ ನಾಗ, ರಕ್ತೇಶ್ವರಿ ಸಾನ್ನಿಧ್ಯಗಳು, ವಾಯವ್ಯ ದಿಕ್ಕಿಗೆ ಸಮೀಪದಲ್ಲಿ ಕ್ಷೇತ್ರಪಾಲ ಕಲ್ಲು. ಈ ಪರಿಕಲ್ಪನೆಯ ಆಧಾರದಿಂದ ಇಂದು ಬ್ರಹ್ಮಸ್ಥಾನ ಅಥವಾ ಪಂಚದೈವ ಸ್ಥಾನ. ತುಪ್ಪದ ದೀಪ, ಅಗರುಬತ್ತಿ, ಹೂ-ಹಿಂಗಾರ ನಿತ್ಯದ ಸೇವಾ ವಸ್ತುಗಳಾದರೆ, ಹಣ್ಣು ಹಂಪಲು, ಅಡಿಕೆ-ವೀಳ್ಯದೆಲೆ, ತೆಂಗಿನಕಾಯಿ, ಹೆಡಿಗೆಗಟ್ಟಳೆ ಹೂ-ಹಿಂಗಾರ, ತೆಂಗಿನ ಗರಿಗಳ ಅಲಂಕಾರ, ಸೀಯಾಳಗಳ ರಾಶಿ, ಢಕ್ಕೆಯ ನಿನಾದ, ವಾದ್ಯಘೋ?, ಡೋಲಿನ ಸದ್ದು ವಿಶೇ? ನಡಾವಳಿ ಢsಕ್ಕೆ ಬಲಿಯ ವೇಳೆಯ ಸಂಭ್ರಮ.

ತಂಬಿಲ, ಢಕ್ಕೆ ಬಲಿ ವೇಳೆ ವೀಳ್ಯದೆಲೆಯಲ್ಲಿ ನೀಡುವ ಗಂಧ ಹಾಗೂ ಹಿಂಗಾರ ಇಲ್ಲಿ ಪ್ರಸಾದ. ಉಳಿದ ಸಂದರ್ಭಗಳಲ್ಲಿ ಸನ್ನಿಧಾನದಲ್ಲಿರುವ ಮರಳೇ ಪ್ರಸಾದ, ರೋಗನಿವಾರಕ ಔಷಧ, ಆಸ್ತಿಕರ ಶರೀರಕ್ಕೆ ರಕ್ಷಾ ಕವಚ, ದೊಂದಿ ದೀಪ, ಗ್ಯಾಸ್‌ಲೈಟ್ ದೀಪ ಮಾತ್ರ ಇಲ್ಲಿ ಬೆಳಕು.ಕಾಣಿಕೆ ಡಬ್ಬಿಗಳಿಲ್ಲ. ಧಾರ್ಮಿಕ ವಿಧಿಗಳಿಗೆ ಯಾವುದೇ ಹಣ ಪಾವತಿಗಳಿಲ್ಲ (ಕಾಲಬದಲಾಗಿದೆ,ಭಕ್ತರ ಅನುಕೂಲಕ್ಕೆ ಸೇವೆಗೆ ವಸ್ತುಗಳ ಸಂಗ್ರಹ ಹಾಗೂ ನಿರ್ವಹಣೆಗಾಗಿ ಪಾವತಿಗಳಿವೆ). ಇವು ಇಲ್ಲಿಯ ವಿಶೇಷ. ಹಾಗಾಗಿ ಈ ಕ್ಷೇತ್ರ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡು ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ.

ಬಡವ-ಶ್ರೀಮಂತ, ವಿದ್ಯಾವಂತ-ಅವಿದ್ಯಾವಂತ, ಜಾತಿ-ಮತಗಳ ತಾರತಮ್ಯಕ್ಕೆ ಇಲ್ಲಿ ಅವಕಾಶವಿಲ್ಲ. ಎಲ್ಲರೂ ಸಮಾನರು. ಪೂಜಾ ಕಾರ್ಯ ನಿರ್ವಹಿಸುವ ವರ್ಗ ಮಾತ್ರ ಹೆಚ್ಚು ಜವಾಬ್ದಾರರಾಗಿರುತ್ತಾರೆ.

ಕೊರಳ ಸರ ಕದ್ದ ಕಳ್ಳನಿಗೆ ಸರ ನಾಗರ ಹಾವಾಗಿ ಕಂಡಿದೆ. ಢಕ್ಕೆ ಬಲಿ ಹೊರಟು ದಾರಿ ತಪ್ಪಿದವರನ್ನು ದೀಪ ಕೊಟ್ಟು ಬ್ರಹ್ಮಸ್ಥಾನ ತಲುಪಿಸಿದ ಪುರಾವೆಗಳಿವೆ. ಮಹಿಳೆಯರನ್ನು ಛೇಡಿಸಿದವರಿಗೆ ಹಿಂಗಾರದಿಂದ ಪೆಟ್ಟು ಬಿದ್ದದ್ದಿದೆ. ಹೀಗೆ ಹಲವು ಪವಾಡಗಳು ಇಲ್ಲಿ ನಡೆಯುತ್ತಿರುತ್ತವೆ. ವ್ಯಾಧಿ ಗುಣವಾಗುವುದು, ಆಪತ್ತು ಪರಿಹಾರವಾಗುವುದು, ಇಷ್ಟಾರ್ಥ ಸಿದ್ಧಿ, ಸಂತಾನ ಲಾಭ ಮುಂತಾದುವುಗಳು ಇಲ್ಲಿಯ ಅನುಗ್ರಹ ವಿಶೇಷಗಳು. ಹೂ-ಹಿಂಗಾರ, ಹಣ್ಣು ಹಂಪಲುಗಳೊಂದಿಗೆ ವೈಭವದ ನಿಸರ್ಗ ನಿಮಾರ್ಣ. ಈ ಅಲಂಕರಣದ ನಡುವೆ ತಾದಾತ್ಮ್ಯದ ಅನುಸಂಧಾನ ಏರ್ಪಡುವುದೇ ಪಡುಬಿದ್ರಿಯ ಬ್ರಹ್ಮಸ್ಥಾನದ ಸ್ಥಳ ವಿಶೇಷ.

(ಬ್ರಹ್ಮಸ್ಥಾನದ ನಡಾವಳಿ ಹಾಗೂ ಇತರ ಪರ್ವದಿನಗಳ ಆಚರಣಾ ವಿಧಾನವನ್ನು ಹತ್ತಿರದಿಂದ ಗಮನಿಸಿ, ವಿವಿಧ ಉಪಾಸನಾ ಕ್ರಮಗಳೊಂದಿಗೆ ತೌಲನಿಕವಾಗಿ ವಿಶ್ಲೇಷಿಸಿ ನಿರೂಪಿಸಿದ ಲೇಖನವೇ ಹೊರತು ಸತ್ಯ ಶೋಧನೆಯ ಹಠವಲ್ಲ. ಅಧ್ಯಯನವಾಗಿ ಅಥವಾ ವೀಕ್ಷಣೆಯಾಗಿ ದಾಖಲಿಸಿದ ವಿವರಗಳ ಸಂಗ್ರಹ.)

ಬರಹ • ಕೆ.ಎಲ್.ಕುಂಡಂತಾಯ

Advertisement

Udayavani is now on Telegram. Click here to join our channel and stay updated with the latest news.

Next