ಪಡುಬಿದ್ರಿ: 2004ರಲ್ಲಿ ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿ ದಾಖಲಿತ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಡುಬಿದ್ರಿ ಪೊಲೀಸರು ಕುಂಬಳೆಯಲ್ಲಿ ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಉಜಿರೆ-ಲಾಯಿಲ ಗ್ರಾಮದ ನಿವಾಸಿ ಪ್ರಸ್ತುತ ಕೇರಳದ ಕುಂಬಳೆಯಲ್ಲಿ ವಾಸವಿರುವ ಮಣಿ ಯಾನೆ ಮಣಿಕಂಠ ಬಂಧಿತ ಆರೋಪಿಯಾಗಿದ್ದಾನೆ.
ಈತನು ಕೇರಳ ರಾಜ್ಯದ ಕುಂಬಳೆಯಲ್ಲಿ ವಾಸವಾಗಿರುವ ಬಗ್ಗೆ ಮಾಹಿತಿ ಪಡೆದ ಪಡುಬಿದ್ರಿ ಠಾಣಾ ತನಿಖಾ ಪಿಎಸ್‌ಐ ಸುದರ್ಶನ್ ದೊಡ್ಡಮನಿ ಮತ್ತು ಸಿಬಂದಿ ರುದ್ರೇಶ್, ರಾಜೇಶ್, ಸಂದೇಶ್ ಅವರು ಸೋಮವಾರ ಕುಂಬಳೆಯಲ್ಲಿ ಬಂಧಿಸಿ ಪಡುಬಿದ್ರಿಗೆ ಕರೆತಂದಿದ್ದಾರೆ.
ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ 14 ವರ್ಷಗಳಿಂದ ಹಾಜರಾಗದ ಈತನ ವಿರುದ್ಧ ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ 14 ಪ್ರಕರಣಗಳು ದಾಖಲಾಗಿತ್ತು.
2004ರಲ್ಲಿ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲದ ಗೋಪಾಲಕೃಷ್ಣ ಶೆಣೈ ಅವರ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿತ್ತು.
ಕಳ್ಳತನ ಸಂದರ್ಭ ಮಣಿಕಂಠನ ಜತೆಗಾರನಾಗಿದ್ದ ಸುದರ್ಶನ್ ಬಳೆಗಾರ ಕೊಲೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದಾನೆ. ಘಟನೆ ಬಳಿಕ ಮಣಿಕಂಠನೂ ಪೊಲೀಸರಿಂದ ಬಂಧಿತನಾಗಿ ಮೂರೂವರೆ ವರ್ಷ ಜೈಲಿನಲ್ಲಿದ್ದು, ಜಾಮೀನು ಬಳಿಕ ಹೊರಬಂದವ ತಲೆಮರೆಸಿಕೊಂಡಿದ್ದ.