ಉಡುಪಿ : ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಿವೃತ್ತ ಎಎಸ್‌ಐ ಮತ್ತು ಪತ್ನಿ ಮತ್ತು ಕಾರು ಚಾಲಕ ಗಾಯಗೊಂಡ ಘಟನೆ ನಡೆದಿದೆ. ಅಪಘಾತದ ಬಳಿಕ ರಾ.ಹೆ.66 ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಬೇಕಾಯಿತು.
ಕುಮಟಾದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ನಿವೃತ್ತ ಎಎಸ್‌ಐ ಅರುಣ್ ನಾಯಕ್(61)ಪತ್ನಿ ಮಂಗಳಾ ಮತ್ತು ಕಾರು ಚಾಲಕ ಸಣ್ಣ ಮಟ್ಟದ ಗಾಯಗಳೊಂದಿಗೆ ಪಾರಾಗಿದ್ದಾರೆ. ಲಾರಿ ಮಂಗಳೂರಿನಿಂದ ಉಡುಪಿಗೆ ಬರುತ್ತಿತ್ತು ಎನ್ನಲಾಗಿದೆ.
ಪಡುಬದ್ರಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಹನ ಸಂಚಾರ ಸುಗಮಗೊಳಿಸುವಲ್ಲಿ ಪೊಲೀಸರು ಶ್ರಮವಹಿಸಿದರು.
ಹೆದ್ದಾರಿಯಲ್ಲಿ ಇನ್ನೂ ಚತುಷ್ಪಥ ಕಾಮಗಾರಿಯಾದೆ ಏಕಮುಕ ಸಂಚಾರ ವ್ಯವಸ್ಥೆ ಇರುವುದರಿಂದ ಪಡುಬಿದ್ರಿಯಲ್ಲಿ ಪದೇ ಪದೇ ಅವಘಡಗಳು ಸಂಭವಿಸುತ್ತಲೇ ಇವೆ.
ಸಕಾಲದಲ್ಲಿ ಕ್ರೇನ್ ಲಭಿಸದೇ ಇದ್ದ ಕಾರಣ ಕಾರನ್ನು ಮೇಲಕ್ಕೆತ್ತಲು ಕೆಲಕಾಲ ಕಾಯಬೇಕಾಗಿ ಬಂತು ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಯಿತು.