ಶಿರ್ವ: ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಪಡುಬೆಳ್ಳೆಯಲ್ಲಿ ಮನೆಗೆ ಮನೆಗೆ ತೆರಳಿ ಅನಧಿಕೃತವಾಗಿ ಮನೆಯವರ ಜಾತಿ,ಪಕ್ಷ ಮತ್ತಿತರ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದ ನಾಲ್ಕು ಮಂದಿ ಯುವಕರನ್ನು ಪಡುಬೆಳ್ಳೆ ವಿಶ್ವ ಹಿಂದು ಪರಿಷದ್,ಬಜರಂಗದಳದ ಕಾರ್ಯಕರ್ತರು ಹಿಡಿದು ಗುರುವಾರ ಶಿರ್ವ ಪೊಲೀಸರಿಗೊಪ್ಪಿಸಿದ್ದಾರೆ.
ನಾಲ್ಕು ಮಂದಿ ಅನ್ಯ ಮತೀಯ ಯುವಕರು ಉದ್ಯಾವರದ ಲಾಡ್ಜೊಂದರಲ್ಲಿ ನಿಂತಿದ್ದು, ಪಡುಬೆಳ್ಳೆಗೆ ಬಂದು ವೋಟರ್ ಲಿಸ್ಟ್ ಹಿಡಿದುಕೊಂಡು ಸುಮಾರು ಹತ್ತಿಪ್ಪತ್ತು ಮನೆಗಳ ಸಮೀಕ್ಷೆ ನಡೆಸಿದ್ದರು. ಸಂಶಯಗೊಂಡ ಕೆಲ ಮನೆಯವರು ಪಡುಬೆಳ್ಳೆ ವಿಶ್ವಹಿಂದು ಪರಿಷದ್,ಬಜರಂಗದಳದ ಕಾರ್ಯಕರ್ತರಿಗೆ ಕರೆ ಮಾಡಿದ್ದಾರೆ. ಯವಕರು ಬೇರೆ ಜಿಲ್ಲೆಯವರಾಗಿದ್ದು, ಹೊಸಪೇಟೆ ಮುನಿರಾಬಾದ್‌ನ ದೇವರಾಜ್ ಎಂಬವರ ಸೂಚನೆ ಮೇರೆಗೆ ಸಮೀಕ್ಷೆ ನಡೆಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಒಬ್ಬಳೇ ಮಹಿಳೆ ಇರುವ ಸಂದರ್ಭದಲ್ಲಿ ಸರ್ವೆ ನೆಪದಲ್ಲಿ 4 ಮಂದಿ ಯುವಕರು ಬಂದು ದರೋಡೆ ಯಾ ಮಾನಭಂಗಕ್ಕೆ ಯತ್ನಿಸಿದರೆ ಯಾರು ಗತಿ ಎಂದು ಪರಿಸರದ ಮಹಿಳೆಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಯಾವುದೇ ಸರ್ವೇ ನಡೆಸುವವರು ಜಿಲ್ಲಾಡಳಿತದ ಅನುಮತಿ ಪತ್ರ ಪಡೆದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪ್ರತಿ ನೀಡಿ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆ ಮತ್ತು ಗ್ರಾ. ಪಂ.ಗೆ ಮಾಹಿತಿ ನೀಡಿದ ಬಳಿಕ ಸರ್ವೆ ನಡೆಸ ಬೇಕಾಗಿದೆ. ಇಲ್ಲದಿದ್ದಲ್ಲಿ ಗ್ರಾಮಸ್ಥರು ಅಂತಹ ವ್ಯಕ್ತಿಗಳು ಪರಿಸರದಲ್ಲಿ ಕಂಡುಬಂದರೆ ಗ್ರಾ.ಪಂ.ಗೆ ಮಾಹಿತಿ ನೀಡಿ ಅಥವಾ ಪೊಲೀಸ್‌ಠಾಣೆಗೆ ಕರೆ ಮಾಡಿ ಎಂದು ಶಿರ್ವ ಠಾಣಾಧಿಕಾರಿ ರಾಘವೆಂದ್ರ ಸಿ.ತಿಳಿಸಿದ್ದಾರೆ.
ಯುವಕರಲ್ಲಿ ದಿಲ್ಲಿ ಗುರ್ಗಾಂವ್‌ನ ನೇಶನ್‌ಟೈಮ್ ಸಂಸ್ಥೆಯ ಗುರುತು ಚೀಟಿ ಇದ್ದು ಶಿರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.