ಮುಂಬಿಯಿ: ಪದ್ಮಾವತಿ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಅವರಿಗೆ ರಜಪೂತ್ ಕರ್ನಿ ಸೇನೆ ಮತ್ತು ಚಾತ್ರೀಯ ಸಮಾಜ್ ಹತ್ಯೆ ಬೆದರಿಕೆ ಹಾಕಿದ ಬೆನ್ನಲ್ಲೇ ಭದ್ರತೆ ಬಿಗಿ ಗೊಳಿಸಲಾಗಿದೆ.
ದೀಪಿಕಾ ಅವರ ಮುಂಬಯಿಯ ನಿವಾಸದ ಹೊರಗೆ ಶಸ್ತ್ರಧಾರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಚೇರಿಗೂ ಭದ್ರತೆ ನೀಡಲಾಗಿದೆ.
ಚಿತ್ರದ ಬಿಡುಗಡೆಗೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆಸುತ್ತಿರುವ ಉತ್ತರಪ್ರದೇಶದ ಚಾತ್ರೀಯ ಸೇನೆ ದೀಪಿಕಾ ಹತ್ಯೆಗೈದವರಿಗೆ 5 ಕೋಟಿ ರೂಪಾಯಿ ಇನಾಮು ನೀಡುವುದಾಗಿ ಘೋಷಿಸಿತ್ತು.
ಚಾತ್ರೀಯ ಸಮಾಜ್ ನ ಅಭಿಷೇಕ್ ಠಾಕೂರ್ ಸೋಮ್ ಅವರು ದೀಪಿಕಾಗೆ ಬೆದರಿಕೆ ಹಾಕಿ 5 ಕೋಟಿ ರೂ ಇನಾಮು ಘೋಷಿಸಿದ್ದರು. ಸೋಮ್ ಸಮಾಜವಾದಿ ಪಕ್ಷದ ನಾಯಕ.
ರಜಪೂತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಚಿತ್ರದ ವಿರುದ್ಧ ಕಿಡಿ ಕಾರಿದ್ದು, ಯಾವ ರಜಪೂತ ನಾರಿಯೂ ಬಹಿರಂಗವಾಗಿ ನಾಟ್ಯ ಮಾಡುವುದಿಲ್ಲ, ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಈ ಬಗ್ಗೆ ಗೊತ್ತಿಲ್ಲ, ದೀಪಿಕಾ ಅವರು ಪದ್ಮಾವತಿ ಪಾತ್ರದಲ್ಲಿ ಕಾಣಿಸಿಕೊಂಡು ನಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಡಿಸೆಂಬರ್ 1 ರಂದು ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು ಕರ್ನಿ ಸೇನೆ ಭಾರತ್ ಬಂದ್‌ಗೆ ಕರೆ ನೀಡಿದೆ.