ಹೊಸದಿಲ್ಲಿ: ಐತಿಹಾಸಿಕ ಕಥಾ ಹಂದರವಿರುವ ಪದ್ಮಾವತಿಗೆ ಕೇಂದ್ರ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿ ಚಿತ್ರದ ಹೆಸರನ್ನು ‘ಪದ್ಮಾವತ್’ ಎಂದು ಬದಲಾಯಿಸುವಂತೆ ಸೂಚಿಸಿದ ಬಳಿಕವೂ ರಜಪೂತ್ ಕರ್ಣಿ ಸೇನೆ ಚಿತ್ರದ ವಿರುದ್ಧ ಹೋರಾಟ ಮುಂದುವರಿಸಿದೆ.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕರ್ಣಿ ಸೇನೆಯ ಅಧ್ಯಕ್ಷ ಸುಖ್‌ದೇವ್ ಸಿಂಗ್ ಗೋಗಾಮೆಡಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವೆ ಸ್ಮೃತಿ ಇರಾನಿ ಮತ್ತು ಕೇಂದ್ರ ಸೆನ್ಸಾರ್ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಷಿ ವಿರುದ್ಧ ಕಿಡಿ ಕಾರಿದರು.
‘ಕೇಂದ್ರ ಸರಕಾರ ಯಾವ ಕಾರಣಕ್ಕಾಗಿ,ಇಲ್ಲ ಲಾಭಕ್ಕಾಗಿ ಚಿತ್ರಕ್ಕೆ ಬೆಂಬಲ ಸೂಚಿಸುತ್ತಿದೆ. ಹಿಂದುತ್ವದ ಪಾಠ ಕಲಿಸಿರುವ ಹಿಂದೂ ಪರ ಸಂಘಟನೆಗಳು ಚಿತ್ರದ ಕುರಿತಾಗಿ ಯಾಕೆ ಸುಮ್ಮನೆ ಕುಳಿತಿವೆ’ ಎಂದು ಕಿಡಿ ಕಾರಿದರು.
ಕೇಂದ್ರ ಸರಕಾರ ಗಮನಿಸಬೇಕು , ಚಿತ್ರವನ್ನು ನೋಟ್ ಬ್ಯಾನ್ ಆದ ಅವಧಿಯಲ್ಲಿ ವಿದೇಶಿ ಕಂಪೆನಿ ವಯಾಕಾಮ್ 18 ಮೋಷನ್ ಪಿಕ್ಚರ್ಸ್ ನಿರ್ಮಿಸಿದೆ. ನಮಗೆ 4 ಸಾವಿರ ಸಿಗುವುದು ಕಷ್ಟವಾದ ಕಾಲದಲ್ಲಿ ಸಂಜಯ್ ಲೀಲಾ ಬನ್ಸಾಲಿಗೆ 160 ರಿಂದ 180 ಕೋಟಿ ರೂಪಾಯಿ ಹೇಗೆ ಸಿಕ್ಕಿತು’ ಎಂದು ಪ್ರಶ್ನಿಸಿದರು.
‘ಬನ್ಸಾಲಿ ಅವರು ಇಂಗ್ಲೆಂಡ್‌ನ ಸದ್ಯ ಜೈಲಿನಲ್ಲಿರುವ ಹೆಡ್ಲಿಯಿಂದಲೂ ಹಣ ಪಡೆದಿದ್ದಾರೆ. ಇದು ದೇಶ ದ್ರೋಹದ ಕೆಲಸ. ಬನ್ಸಾಲಿಗೆ ಯಾಕೆ ಜೈಲಿಗೆ ಹಾಕಿಲ್ಲ’ ಎಂದು ಪ್ರಶ್ನಿಸಿದರು.
‘ಚಿತ್ರಕ್ಕೆ ಸರ್ಟಿಫಿಕೇಟ್ ನೀಡುವ ವೇಳೆ ನಮ್ಮನ್ನೇಕೆ ಚಿತ್ರ ವೀಕ್ಷಣೆಗೆ ಸೆನ್ಸಾರ್ ಮಂಡಳಿ ಕರೆದಿಲ್ಲ’ ಎಂದು ಪ್ರಶ್ನಿಸಿದರು.
‘ನಾವು ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಉಗ್ರ ಹೋರಾಟ ನಡೆಸುತ್ತೇವೆ. ಸಚಿವೆ ಇರಾನಿ ಮತ್ತು ಪ್ರಸೂನ್ ಜೋಷಿ ಅವರ ಪ್ರತಿಕೃತಿಗಳನ್ನು ದಹಿಸುತ್ತೇವೆ’ ಎಂದರು.