Advertisement

ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಪದ್ಮಶ್ರೀ ಪ್ರಶಸ್ತಿ

09:56 AM Jan 26, 2020 | sudhir |

ಮಂಗಳೂರು :ಪ್ರಸಕ್ತ ಸಾಲಿನ ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ, ಗಣರಾಜ್ಯೋತ್ಸವ ಮುನ್ನಾದ ದಿನ ಕೇಂದ್ರ ಸರಕಾರ ಪ್ರಶಸ್ತಿ ಪುರಸ್ಕೃತ ಪಟ್ಟಿಯನ್ನು ಪ್ರಕಟಿಸಿದ್ದು ಕರ್ನಾಟಕದಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದವರಿಗೆ ಪ್ರಶಸ್ತಿ ಘೋಷಿಸಲಾಗಿದೆ.

Advertisement

ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಅಕ್ಷರ ಸಂತ ಎಂದೇ ಖ್ಯಾತರಾಗಿರುವ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಮಂಗಳೂರಿನ ಕೇಂದ್ರ ಪ್ರದೇಶ ಸ್ಟೇಟ್ ಬ್ಯಾಂಕ್ ಸರ್ಕಲಿನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದ ಹಾಜಬ್ಬ ತಾವೇ ಶಾಲೆಯೊಂದನ್ನು ತನ್ನೂರಿನಲ್ಲಿ ನಿರ್ಮಿಸಿದ್ದರು.

ಹಾಜಬ್ಬರ ಸಾಧನೆಯ ಹಾದಿ:

ಸ್ವಂತ ಮನೆಯೂ ಇರಲಿಲ್ಲ. ಉನ್ನತ ವಿದ್ಯಾಭ್ಯಾಸವಂತೂ ದೂರದ ಬೆಟ್ಟವಾದರೂ ಅಕ್ಷರ ಸ್ನೇಹಿ. ಮಂಗಳೂರಿನ ರಸ್ತೆ ಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಹಾಜಬ್ಬನವರು ತಮ್ಮ ಜೀವನ ಸುಃಖಗಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವವರು.

ಒಂದು ದಿನ ಹಣ್ಣು ಮಾರುವಾಗ ವಿದೇಶಿ ವ್ಯಾಪಾರಿಯೊಬ್ಬರು ಇಂಗ್ಲೀಷ್ ನಲ್ಲಿ ಹಣ್ಣಿನ ಬೆಲೆ ಕೇಳುತ್ತಾರೆ. ಶಿಕ್ಷಣ ಇಲ್ಲದ ಹಾಜಬ್ಬರಿಗೆ ಬೆಲೆ ಹೇಳಲು ಗೊತ್ತಾಗಲಿಲ್ಲ. ಇದರಿಂದ ಮನನೊಂದ ಹಾಜಬ್ಬ ಅವರಿಗೆ ಶಿಕ್ಷಣ ಎಷ್ಟು ಮುಖ್ಯ ಅನ್ನೋದು ಮನದಟ್ಟು ಆಗುತ್ತೆ.
ತನ್ನದೇ ಊರಿನಲ್ಲಿದ್ದ ಮಕ್ಕಳಿಗೆ ಹತ್ತಿರದಲ್ಲೇ ಇದ್ದ ಖಾಸಗಿ ಶಾಲೆಗೆ ಸೇರಿಸಲು ಈ ಊರಿನ ಜನರು ಪರದಾಡುವುದನ್ನ ನೋಡಿ ಹಾಜಬ್ಬ ನಮ್ಮ ಊರಿಗೆ ಉಚಿತ ಶಿಕ್ಷಣ ಸಿಗೋ ಶಾಲೆ ಬೇಕು ಅನ್ನೋ ನಿರ್ಧಾರಕ್ಕೆ ಬರುತ್ತಾರೆ. ಹೇಗಾದ್ರೂ ಮಾಡಿ ಶಾಲೆ ಕಟ್ಟಲೇ ಬೇಕು ಅಂತ ನಿರ್ಧಾರ ಮಾಡಿ ಶಾಲೆ ಕಟ್ಟಲು, ಜಾಗಕ್ಕಾಗಿ ಸರ್ಕಾರಿ ಕಛೇರಿಗಳನ್ನ ಅಲೆಯೋದಕ್ಕೆ ಶುರು ಮಾಡಿದ್ರು ಇದರ ಫಲವಾಗಿ ಮೂರು ದಿನಗಳ ನಂತರ ಹಾಜಬ್ಬರ ಆಸೆಯಂತೆ ಸರ್ಕಾರದಿಂದ ಸ್ವಲ್ಪ ಜಾಗ ಸಿಕ್ಕಿತು . ಜಾಗ ಸಿಕ್ಕ ನಂತ್ರ ಅಧಿಕಾರಿಗಳು ಸ್ಥಳ ಕೊಟ್ಟು ಕೈ ತೊಳೆದು ಕೊಳ್ತಾರೆ.
ಆದರೆ ಹಾಜಬ್ಬ ಇಷ್ಟಕ್ಕೆ ಸುಮ್ಮನಾಗೋದಿಲ್ಲ. ಹಾಜಬ್ಬ ಅಂದಿನಿಂದ ಹೆಚ್ಚಿನ ಸಮಯ ಕಿತ್ತಳೆ ಹಣ್ಣು ಮಾರೋದಕ್ಕೇ ಶುರು ಮಾಡುತ್ತಾರೆ.

Advertisement

ಯಾಕಂದ್ರೆ ಕಿತ್ತಳೆ ಹಣ್ಣನ್ನು ಮಾರಿ ಬಂದ ಹಣದಿಂದ ಹಾಜಬ್ಬ ತನ್ನ ಹೆಂಡತಿ ಮಕ್ಕಳನ್ನ ಸಾಕಬೇಕಿತ್ತು. ಜೊತೆಗೆ ಇನ್ನು ಹೆಚ್ಚು ಹಣ್ಣು ಮಾರಿ ಬಂದ ನಂತರ ಹಳೆ ಬಟ್ಟೆ ತೊಟ್ಟು ಹಾಜಬ್ಬ ಶಾಲೆಗೆ ಕೊಟ್ಟ ಜಾಗವನ್ನ ಸಮತಟ್ಟು ಮಾಡೋ ಕೆಲಸ ಪ್ರಾರಂಭ ಮಾಡುತ್ತಾರೆ .

ಇದಾದ ನಂತರ ಹೆಚ್ಚು ಹೊತ್ತು ಹಣ್ಣು ಮಾರಿ ಕೊಡಿಟ್ಟ ಹಣದಲ್ಲಿ ಶಾಲೆ ಕಟ್ಟಲು ಜಲ್ಲಿ ಸೀಮೆಂಟ್ ಇಟ್ಟಿಗೆಯನ್ನ ತರಿಸಿ ಶಾಲೆ ಕಟ್ಟಡ ಕಟ್ಟಲು ಶುರು ಮಾಡುತ್ತಾರೆ.

1995ರಿಂದ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. 1999-2000ರ ಸಾಲಿಗೆ ನ್ಯೂಪಡುಗೆ ಪ್ರಾಥಮಿಕ ಶಾಲೆ ಮಂಜೂರಾಯಿತು . ಆದರೆ ಮೂಲ ಸೌಕರ್ಯದ ವ್ಯವಸ್ಥೆ ಮಾಡುವುದು ಕಷ್ಟಕರವಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಹಾಜಬ್ಬ ಸರಕಾರಿ ಇಲಾಖೆ ಸೇರಿದಂತೆ ದಾನಿಗಳ ಸಹಕಾರದಿಂದ ಶಾಲಾ ಕಟ್ಟಡ ಸೇರಿದಂತೆ, ಮೈದಾನ ನಿರ್ಮಿಸಿಕೊಟ್ಟರು.
1999ರಲ್ಲಿ ಹರೇಕಳದಲ್ಲಿ ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಪಾಠ ಶಾಲೆ ಶುರುವಾಗುತ್ತೆ. ಶಾಲೆ ಕಟ್ಟಿ ಸುಮ್ಮನಾಗದ ಹಾಜಬ್ಬ ಶಾಲೆಯ ಕಸ ಗುಡಿಸೋದು ,ತೊಳೆಯೋ ಕೆಲಸವನ್ನ ತಾವೇ ಮಾಡುತ್ತಾರೆ.

ಕಿತ್ತಲೆ ವ್ಯಾಪಾರ ಮುಗಿಸಿ ಮನೆಗೆ ಹೋದವರೇ ಹಳೆ ಬಟ್ಟೆ ತೊಟ್ಟುಕೊಂಡು ಜಾಗ ಸಮತಟ್ಟು ಮಾಡಲು ಶುರುವಿಟ್ಟುಕೊಂಡರು.

ಅದೆಷ್ಟೋ ದಿನದ ನಂತರ ಜಾಗ ಸಮತಟ್ಟುಗೊಂಡಿತು. ನಂತರ ಕಿತ್ತಳೆ ಹಣ್ಣಿನ ವ್ಯಾಪಾರದಲ್ಲಿ ಶಾಲೆಗಾಗಿ ಉಳಿಸಿದ ಹಣದಲ್ಲಿ ಜಲ್ಲಿ, ಕಲ್ಲು, ಸಿಮೆಂಟು ತಂದು ರಾಶಿ ಹಾಕಿದರು. ಹಣ ಇದ್ದಷ್ಟು ಕೆಲಸದವರನ್ನು ನೇಮಿಸಿ ಕಟ್ಟಡ ಕೆಲಸ ಶುರುವಿಟ್ಟುಕೊಂಡರು. ಹಣ ಖಾಲಿಯಾದರೆ ತಾನೇ ಮೇಸ್ತ್ರಿಯಾಗಿ ಕೆಲಸ ಮಾಡಿದರು. ಅಂತೂ ಹಾಜಬ್ಬರ ಸಂತೋಷಕ್ಕೆ ಪಾರವೇ ಇರಲಿಲ್ಲ. ಚಿಕ್ಕ ಮಗುವಿನಂತೆ ಕುಣಿದರು. ದಿನಾ ಶಾಲೆಯಲ್ಲಿ ನೆಲ ಒರೆಸುವುದರಿಂದ ಹಿಡಿದು, ಅಂಗಳ ಗುಡಿಸುವುದನ್ನೂ ತಾನೇ ನಿರ್ವಹಿಸಿ ಕಿತ್ತಳೆ ವ್ಯಾಪಾರಕ್ಕೆ ತೆರಳುತ್ತಿದ್ದರು.

ಅಷ್ಟರಲ್ಲಿ ಹಾಜಬ್ಬರ ಪತ್ನಿ ಮೈಮುನಾ ಆರೋಗ್ಯ ಕೈಕೊಟ್ಟಿತ್ತು. ಆದರೆ ಮಗುವಿನ ಮನಸ್ಸಿನ ಹರೆಕಳ ಹಾಜಬ್ಬರಿಗೆ ಹೊಸತೊಂದು ಆಶೆ ಹುಟ್ಟಿಕೊಂಡಿದು. ಅದು ಐದನೇ ತರಗತಿಯವರೆಗೆ ಇದ್ದ ಶಾಲೆಯನ್ನು ಏಳನೇ ತರಗತಿಯವರೆಗೆ ವಿಸ್ತರಿಸುವುದು.

ಒಂದು ಸರ್ಕಾರ ಮಾಡಬೇಕಾದ ಎಲ್ಲಾ ಕೆಲಸವನ್ನು ಕೇವಲ ಕಿತ್ತಳೆ ಹಣ್ಣು ಮಾರಾಟ ಮಾಡಿದ ದುಡ್ಡಿನಲ್ಲಿ ಹಾಜಬ್ಬ ಮಾಡುತ್ತಿರುವುದನ್ನು ಗಮನಿಸಿದ ಹಲವಾರು ಸಂಘ ಸಂಸ್ಥೆಗಳು ಹಾಜಬ್ಬರನ್ನು ಕರೆದು ಸನ್ಮಾನಿಸಿದವು. ಆ ಸನ್ಮಾನದ ಪತ್ರದ ಜೊತೆ ನೀಡುವ ಕವರಿನಲ್ಲಿ ಐನೂರು ರೂಪಾಯಿಯೋ, ಒಂದು ಸಾವಿರ ರೂಪಾಯಿಯೋ ಇರುತ್ತಿದ್ದವು. ಅದೆಲ್ಲವೂ ಬಳಕೆಯಾಗುತ್ತಿದ್ದುದು ಶಾಲೆಯ ಕಲ್ಲು, ಜಲ್ಲಿ, ಮರಳು, ಸಿಮೆಂಟಿಗೆ.

ಹಾಜಬ್ಬರ ಶಾಲೆ ಪ್ರಚಾರಕ್ಕೆ ಬಂದ ನಂತರ ಮಂಗಳೂರಿನಲ್ಲಿರುವ ಕೆಲವೊಂದು ಪ್ರತಿಷ್ಠಿತ ಕಂಪನಿಗಳೂ ಹಾಜಬ್ಬರ ಸಾಧನೆ ಕಂಡು ಹರೆಕಳ ಗ್ರಾಮಕ್ಕೆ ಬಂದು ಶಾಲೆ ವೀಕ್ಷಿಸಿ ಒಂದಷ್ಟು ದಾನ ಮಾಡಿದ್ದಾರೆ. ಒಂದೆರಡು ಲಕ್ಷ ರೂಪಾಯಿ ದಾನ ಮಾಡಿ ಗೊಡೆಯಲ್ಲಿ ಹೆಸರು ಕೆತ್ತಿಸಿಕೊಂಡಿದ್ದಾರೆ. ಆದರೆ ಶಾಲೆಯ ಯಾವ ಮೂಲೆಯಲ್ಲಾಗಲಿ ಎಲ್ಲೂ ಹಾಜಬ್ಬರ ಹೆಸರಾಗಲೀ, ಫೋಟೋ ಆಗಲಿ ಕಾಣ ಸಿಗುವುದಿಲ್ಲ.

ಒಮ್ಮೆ ಕಟ್ಟಡದ ಕಾಂಕ್ರೀಟ್ ಕೆಲಸ ನಡೆಯುತ್ತಿದ್ದಾಗ ಸಿಮೆಂಟಿಗೆ ನೀರು ಹಾಕಲು ಕಟ್ಟಡದ ಮೇಲೆ ಹೋದ ಹಾಜಬ್ಬ ಆಯ ತಪ್ಪಿ ಮೇಲಿಂದ ಕೆಳಗೆ ಬಿದ್ದು ಬಿಟ್ಟರು. ತನ್ನ ಕೈಗೆ ಬಂದ ಸನ್ಮಾನದ ದುಡ್ಡುಗಳೆಲ್ಲಾ ಕಟ್ಟಡದ ಪಾಲಾಗಿತ್ತು. ಖಾಸಗಿ ಆಸ್ಪತ್ರೆಗೆ ಸೇರಿದರೆ ಬಿಲ್ಲು ತೆರಲು ದುಡ್ಡಿಲ್ಲ. ಅದಕ್ಕಾಗಿ ಸರಕಾರಿ ಆಸ್ಪತ್ರೆಯಲ್ಲಿ ತುಂಬಾ ಸಮಯ ಚಿಕಿತ್ಸೆ ಪಡೆಯಬೇಕಾಯಿತು. ಇದರಿಂದಾಗಿ ಹಾಜಬ್ಬರ ಹೈಸ್ಕೂಲ್ ಕಟ್ಟಡ ನೆನೆಗುದಿಗೆ ಬಿತ್ತು. ಅಂತೂ ಇಂತೂ ಸಾವರಿಸಿಕೊಂಡ ಹಾಜಬ್ಬ ಆಸ್ಪತ್ರೆಯಿಂದ ಬಿಡುಗಡೆ ಆದವರೇ ಮತ್ತೆ ಕಟ್ಟಡ ನಿರ್ಮಾಣಕ್ಕೆ ತೊಡಗಿದರು. ಕೊನೆಗೂ ಹೈಸ್ಕೂಲ್ ಕಟ್ಟಡ ಪೂರ್ಣಗೊಂಡಿತು.

ಹಾಜಬ್ಬ ಇಷ್ಟೆಲ್ಲಾ ಮಾಡಿದ್ದು ಸರಕಾರಿ ಶಾಲೆಯೊಂದರ ನಿರ್ಮಾಣಕ್ಕೆ. ಅಲ್ಲಿರುವುದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ. ಇಡೀ ಶಾಲೆಗೆ ಸರಕಾರಿ ಜಮೀನೊಂದು ಹೊರತುಪಡಿಸಿ ಉಳಿದೆಲ್ಲಾ ಹಣ ಬಳಕೆಯಾಗಿದ್ದು ಹಾಜಬ್ಬರದ್ದು ಮತ್ತು ದಾನಿಗಳದ್ದು.

 

Advertisement

Udayavani is now on Telegram. Click here to join our channel and stay updated with the latest news.

Next