Advertisement

ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಪದ್ಮಕಲಾ ಭವನದ ಉದ್ಘಾಟನೆ

07:29 AM Mar 28, 2019 | Vishnu Das |

ಮುಂಬಯಿ: ನಮ್ಮ ಬಹುದಿನದ ಕನಸು ಇಂದು ನನಸಾಗಿದೆ. 83 ವರ್ಷಗಳ ಹಿಂದೆ ಹಿರಿಯರು ಸಮಾಜ ಸೇವೆಯ ದೃಷ್ಟಿಯಿಂದ ಸ್ಥಾಪಿಸಿದ ಈ ಸಂಸ್ಥೆಯು ಇಂದು ಭವನದೊಂದಿಗೆ ಕಂಗೊಳಿಸುತ್ತಿರುವುದು ನಮಗೆ ಆನಂದದ ಸಂಗತಿಯಾಗಿದೆ. ಕುಲ ದೇವರಾದ ವೀರಭದ್ರ ಮತ್ತು ದುರ್ಗಾಪರಮೇಶ್ವರಿಯ ಅನುಗ್ರಹ ಹಾಗೂ ಸಮಾಜ ಬಾಂಧವರ ಸಂಪೂರ್ಣ ಸಹಕಾರದಿಂದ ಈ ಭವನವನ್ನು ನಿರ್ಮಿಸಲು ಸಾಧ್ಯವಾಯಿತು. ಇದು ನನ್ನ ಹೆಮ್ಮೆಯ ಯೋಜನೆಯಾಗಿದೆ ಎಂದು ಹರ್ಷ ಫೌಂಡೇಶನ್‌ ಟ್ರಸ್ಟಿನ ಅಧ್ಯಕ್ಷ, ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಇದರ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣಾನಂದ ಶೆಟ್ಟಿಗಾರ್‌ ನುಡಿದರು.

Advertisement

ಮಾ. 24ರಂದು ಥಾಣೆ ಪಶ್ಚಿಮದ ಗೋಡ್‌ಬಂದರ್‌, ವಾಗಿºಲ್‌ ರೋಡ್‌, ಕಾಸ್‌ಮೋಸ್‌ ರಿಜೆನ್ಸಿಯಲ್ಲಿ ನಡೆದ ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಇದರ ಪದ್ಮಕಲಾ ಭವನ ಮತ್ತು ಮಂಜುನಾಥ ಸಭಾಗೃಹದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮೆಲ್ಲರ ಪ್ರತಿಷ್ಠೆಯ ಭವನವಾದ ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು. ಇದರಿಂದ ಬರುವ ಆದಾಯ ನಮ್ಮ ಸೇವೆಗೆ ಅನುಕೂಲವಾಗುತ್ತದೆ. ಯುವ ಜನರು ಮುಂದೆ ಬಂದು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ನಮ್ಮ ಕನಸು ನನಸಾಗಲು ಸಾಧ್ಯವಿದೆ. ಸಮಾಜದಲ್ಲಿ ಹಿಂದುಳಿದವರ ಏಳ್ಗೆಗಾಗಿ ನಮ್ಮಲ್ಲಿ ಇನ್ನೂ ಹಲವಾರು ಯೋಜನೆಗಳಿದ್ದು, ಇದರ ಯಶಸ್ಸಿಗೆ ಎಲ್ಲರ ಸಹಕಾರ ಸದಾಯಿರಲಿ ಎಂದು ನುಡಿದರು.

ಭವನವನ್ನು ಉದ್ಘಾಟಿಸಿ ಆಶೀರ್ವ ಚನ ನೀಡಿದ ವಿದ್ಯಾವಿಹಾರ್‌ ಶ್ರೀ ಅಂಬಿಕಾ ಮಂದಿರದ ವೇದಮೂರ್ತಿ ಪೆರ್ಣಂಕಿಲ ಹರಿದಾಸ ಭಟ್‌ ಅವರು, 83 ವರ್ಷಗಳ ಸಾಧನೆಯ ಫಲವಾಗಿ ಇಂದು ಭವ್ಯ ಪದ್ಮಕಲಾ ಭವನವು ನಮ್ಮ ಮುಂದೆ ನಿಂತಿದೆ. ಇದು ನಿಮ್ಮ ಸಮಾಜ ಸೇವೆಗೆ ಒಂದು ಉತ್ತಮ ನಿದರ್ಶನ ವಾಗಿದೆ. ನಾವು ಹುಟ್ಟೂರಿನಿಂದ ಕರ್ಮಭೂಮಿಗೆ ಬರುವಾಗ ದೈವ-ದೇವರ ಪ್ರಸಾದ, ಗುರು ಹಿರಿಯರ ಆಶೀವಾದದೊಂದಿಗೆ ಬಂದಿದ್ದೇವೆ. ಇಲ್ಲಿ ನಾವು ಕಠಿಣ ಪರಿಶ್ರಮದಿಂದ ಸಂಪಾದನೆಯನ್ನು ಮಾಡಿ, ಸ್ವಂತ ಹೊಟ್ಟೆಯನ್ನು ತುಂಬಿಸುವುದರೊಂದಿಗೆ ಸಮಾಜ ಸೇವೆಯಲ್ಲೂ ತೊಡಗಿದ್ದೇವೆ. ಇದು ನಾವು ಊರಿನಿಂದ ತಂದ ಪ್ರಸಾದ ಹಾಗೂ ಗುರುಹಿರಿಯರ ಆಶೀ ರ್ವಾದದ ಫಲವಾಗಿದೆ. ತುಳುನಾಡಿನ ಅಭಿವೃದ್ಧಿಯಲ್ಲೂ ಮುಂಬಯಿಗರ ಪಾಲು ಬಹಳಷ್ಟಿದೆ. ಇಂತಹ ಭವನಗಳ ನಿರ್ಮಾಣದಿಂದಾಗಿ ಸಮಾಜವನ್ನು ಒಂದುಗೂಡಿಸುವುದರೊಂದಿಗೆ ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಮಕ್ಕಳಿಗೆ ತಿಳಿಯಪಡಿಸುವಲ್ಲಿ ಸಹ ಕಾರಿಯಾಗುತ್ತದೆ ಎಂದರು.

ಗೌರವ ಅತಿಥಿಯಾಗಿ ಆಗಮಿಸಿದ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಮಾತನಾಡಿ, ಸಮಾಜ ಎಲ್ಲರಿಗೂ ಬೇಕು. ಬಹಳ ಕಷ್ಟದಿಂದ ನಾವು ಮುಂಬಯಿಗೆ ಬಂದು ಇಲ್ಲಿ ಕಠಿಣ ಪರಿಶ್ರಮದಿಂದ ಸಂಪಾದಿಸುವುದರಲ್ಲಿ ಅಲ್ಪಾಂಶವನ್ನು ಉಳಿಸಿ ಸಮಾಜಕ್ಕಾಗಿ ನೀಡುವ ಮುಂಬಯಿ ತುಳು -ಕನ್ನಡಿಗರ ಮನೋಭಾವ ಮೆಚ್ಚುವಂ ಥದ್ದು. ಇಲ್ಲಿ ನಾವು ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಜೀವನ ಸಾಗಿಸುತ್ತಿದ್ದು, ಇದು ತುಳು- ಕನ್ನಡಿಗರ ವಿಶೇಷತೆಯಾಗಿದೆ. ಇದ್ದವರು ಇಲ್ಲದವರಿಗೆ ನೀಡಿ, ಸಮಾಜದಲ್ಲಿ ಹಿಂದುಳಿದವರನ್ನು ಮೇಲೆತ್ತುವ ಕಾರ್ಯ ನಮ್ಮಿಂದಾಗಬೇಕು ಎಂದರು.

ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅವರು ಉಪಸ್ಥಿತರಿದ್ದು ಮಾತನಾಡಿ, ಸಮಾಜದಲ್ಲಿ ಹಿಂದುಳಿದವರಿಗೆ ಸಹಾಯ ಮಾಡುವುದು ಸಂಘ-ಸಂಸ್ಥೆಗಳ ಕರ್ತವ್ಯವಾಗಿದೆ. ಪದ್ಮಶಾಲಿ ಸಮಾಜದ ಸಮಾಜ ಸೇವೆ ಮೆಚ್ಚುವಂಥದ್ದಾಗಿದೆ. ಇಂದಿನ ಸಮಾರಂಭಕ್ಕೆ ಮುಂಬಯಿಯ ಎಲ್ಲಾ ಜಾತೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ಗೌರವಿಸಿರುವುದು ತುಳು-ಕನ್ನಡಿಗರ ಒಗ್ಗಟ್ಟನ್ನು ಪ್ರತಿನಿಧಿಸುತ್ತದೆ. ಇದೀಗ ಪದ್ಮಶಾಲಿ ಸಮಾಜಕ್ಕೆ ಸ್ವಂತ ಭವನ ನಿರ್ಮಾಣವಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ವಾಗಿದೆ. ಇದು ಸಮಾಜಕ್ಕೊಂದು ಬಲವನ್ನು ತಂದುಕೊಟ್ಟಂತಾಗಿದೆ ಎಂದು ನುಡಿದು ಶುಭಹಾರೈಸಿದರು.

Advertisement

ಥಾಣೆ ಮಹಾಪೌರೆ ಮೀನಾಕ್ಷೀ ರಾಜು ಶಿಂಧೆ ಅವರು ಉಪಸ್ಥಿತರಿದ್ದು ಮಾತನಾಡಿ, ತುಳುನಾಡಿನಿಂದ ಬಂದ ಕನ್ನಡಿಗರು ಇಲ್ಲಿ ಕಠಿಣ ಪರಿಶ್ರಮದಿಂದ ತಮ್ಮ ಅಸ್ತಿತ್ವವನ್ನು ಬೆಳೆಸುವುದರೊಂದಿಗೆ ಸಮಾಜ ಸೇವೆಯಲ್ಲಿ ಇತರರಿಗೆ ಮಾದರಿಯಾಗುವುದರೊಂದಿಗೆ ಮಹಾರಾಷ್ಟÅದ ಮಣ್ಣನ್ನು ಪ್ರೀತಿಸಿ ಗೌರವಿಸುವ ಕೆಲಸವನ್ನು ಮಾಡಿದ್ದಾರೆ. ಇಲ್ಲಿಯ ತುಳು-ಕನ್ನಡಿಗರಿಗೆ ನಾನು ಸದಾ ನನ್ನಿಂದಾಗುವ ಸಹಾಯ, ಸಹಕಾರವನ್ನು ನೀಡುತ್ತಿದ್ದೇನೆ. ನಿಮ್ಮ ಸಮಾಜ ಸೇವೆ ಮೆಚ್ಚುವಂಥದ್ದಾಗಿದೆ. ಈ ಭವನದ ಮೂಲಕ ಸಂಸ್ಥೆಯು ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಿ ಪದ್ಮಶಾಲಿ ಸಮಾಜ ಬಾಂಧವರಿಗೆ ವರದಾನವಾಗಿದೆ ಎಂದು ಹಾರೈಸಿದರು.

ಗೌರವಾನ್ವಿತ ಅತಿಥಿಗಳಾಗಿ ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್‌ ದೇವಾಡಿಗ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ. ಎಲ್‌. ಬಂಗೇರ, ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಆರ್‌. ಎಂ. ಭಂಡಾರಿ, ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್‌ ಕುಲಾಲ್‌, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ, ವಿಶ್ವಕರ್ಮ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಸದಾನಂದ ಎನ್‌. ಆಚಾರ್ಯ, ದೇವಾಡಿಗ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ದೇವಾಡಿಗ, ದೇವಾಡಿಗ, ಕಲಾಜಗತ್ತು ಮುಂಬಯಿ ಅಧ್ಯಕ್ಷ ತೋನ್ಸೆ ವಿಜಯಕುಮಾರ್‌ ಶೆಟ್ಟಿ, ಕನ್ನಡಿಗ ಕಲಾವಿದರ ಪರಿಷತ್ತು ಮುಂಬಯಿ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಆದಿ ಉಡುಪಿ ಅಧ್ಯಕ್ಷ ಎಂ. ಜಯರಾಮ ಶೆಟ್ಟಿಗಾರ್‌, ಯುಎಇ ಪದ್ಮಶಾಲಿ ಸೇವಾ ಕೂಟದ ಅಧ್ಯಕ್ಷ ಅಧ್ಯಕ್ಷ ರವಿ ಕಾರ್ಕಳ, ದಕ್ಷಿಣ ಕನ್ನಡ ಪದ್ಮಶಾಲಿ ಸೇವಾ ಕೂಟ ಬೆಂಗಳೂರು ಕಾರ್ಯದರ್ಶಿ ಎಂ. ಪ್ರಭಾಕರ ಶೆಟ್ಟಿಗಾರ್‌, ವಿದ್ಯಾವರ್ಧಕ ಸಂಘ ಆದಿ ಉಡುಪಿ ಅಧ್ಯಕ್ಷ ಓಂ ಪ್ರಕಾಶ್‌ ಶೆಟ್ಟಿಗಾರ್‌, ಶ್ರೀ ಜಗದಂಬಾ ಕಾಳಭೈರವ ದೇವಸ್ಥಾನ ಜೋಗೇಶ್ವರಿ ಅಧ್ಯಕ್ಷ ಜಿ. ಟಿ. ಆಚಾರ್ಯ, ಸ್ಥಳೀಯ ನಗರ ಸೇವಕ ನರೇಶ್‌ ಮಣೇರಾ, ಘೋಡ್‌ಬಂದರ್‌ರೋಡ್‌ ಕನ್ನಡ ಅಸೋಸಿಯೇಶನ್‌ ಕಾರ್ಯದರ್ಶಿ ಹರೀಶ್‌ ಡಿ. ಸಾಲ್ಯಾನ್‌, ಸ್ಥಳೀಯ ಸಮಾಜ ಸೇವಕ ಮಹೇಶ್‌ ಕರ್ಕೇರ, ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ರಾಮಚಂದ್ರ ಗಾಣಿಗ ಮೊದಲಾದವರು ಸಂದಭೋìಚಿತವಾಗಿ ಮಾತನಾಡಿ ಶುಭಹಾರೈಸಿದರು.

ಸಂಸ್ಥೆಯ ಮಹಿಳಾ ವಿಭಾಗದ ಗೀತಾ ಶೆಟ್ಟಿಗಾರ್‌, ಕಾಂತಿ ಶೆಟ್ಟಿಗಾರ್‌, ಹರಿಣಾಕ್ಷೀ ಶೆಟ್ಟಿಗಾರ್‌ ಅವರು ಪ್ರಾರ್ಥನೆಗೈದರು. ಗೌರವ ಕಾರ್ಯದರ್ಶಿ ಲೀಲಾಧರ ಬಿ. ಶೆಟ್ಟಿಗಾರ್‌, ಜತೆ ಕಾರ್ಯದರ್ಶಿ ನರೇಂದ್ರ ಕುಮಾರ್‌ ಕಬ್ಬಿನಾಲೆ, ಶ್ರೀನಿವಾಸ ಶೆಟ್ಟಿಗಾರ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಕೇಶವ ಶೆಟ್ಟಿಗಾರ್‌ ಮತ್ತು ಸ್ವರಾ ಶ್ರೀನಿವಾಸ್‌ ಅವರು ಅತಿಥಿಗಳನ್ನು ಪರಿಚಯಿಸಿದರು. ಸಂಸ್ಥೆಯ ಉಪಾಧ್ಯಕ್ಷರಾಗಿ ಕಿಶೋರ್‌ ಎಸ್‌. ಶೆಟ್ಟಿಗಾರ್‌, ಗೌರವ ಕಾರ್ಯದರ್ಶಿ ಲೀಲಾಧರ ಬಿ. ಶೆಟ್ಟಿಗಾರ್‌, ಗೌರವ ಕೋಶಾಧಿಕಾರಿ ನವೀನ್‌ ಎಂ. ಶೆಟ್ಟಿಗಾರ್‌, ಜತೆ ಕಾರ್ಯದರ್ಶಿ ನರೇಂದ್ರ ಕುಮಾರ್‌ ಕಬ್ಬಿನಾಲೆ, ಜತೆ ಕೋಶಾಧಿಕಾರಿಯಾಗಿ ಗಿರಿಧರ ಎಸ್‌. ಶೆಟ್ಟಿಗಾರ್‌, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ವೈ. ಚಂದ್ರಶೇಖರ ಜಿ. ಶೆಟ್ಟಿಗಾರ್‌, ದಯಾನಂದ ಡಿ. ಶೆಟ್ಟಿಗಾರ್‌, ಕೇಶವ ವಿ. ಶೆಟ್ಟಿಗಾರ್‌, ಭೋಜ ಸಿ. ಶೆಟ್ಟಿಗಾರ್‌, ಮಾಧವ ಐ. ಶೆಟ್ಟಿಗಾರ್‌, ಸುಧಾಕರ ವಿ. ಪದ್ಮಶಾಲಿ, ಜಗನ್ನಾಥ ಟಿ. ಶೆಟ್ಟಿಗಾರ್‌, ಎಸ್‌. ಚಂದ್ರಕಾಂತ್‌ ಶೆಟ್ಟಿಗಾರ್‌, ಉಮಾ ಜಿ. ಶೆಟ್ಟಿಗಾರ್‌, ಮಧುಮತಿ ಬಿ. ಶೆಟ್ಟಿಗಾರ್‌, ಮದುಸೂಧನ್‌ ಡಿ. ಶೆಟ್ಟಿಗಾರ್‌, ಮನೋಜ್‌ ಎಂ. ಶೆಟ್ಟಿಗಾರ್‌, ಮೋಹಿನಿ ಪಿ. ಶೆಟ್ಟಿಗಾರ್‌, ಸಲಹೆಗಾರರಾಗಿ ಕೆ. ಕೆ. ಪದ್ಮಶಾಲಿ, ಗಂಗಾಧರ ವಿ. ಶೆಟ್ಟಿಗಾರ್‌, ಬಾಲಕೃಷ್ಣ ಎಂ. ಶೆಟ್ಟಿಗಾರ್‌ ಹಾಗೂ ಪದ್ಮಶಾಲಿ ಎಜುಕೇಶನ್‌ ಸೊಸೈಟಿ, ಮಹಿಳಾ ವಿಭಾಗದ ಮತ್ತು ಪದ್ಮಶಾಲಿ ಕಲಾಭವನ ಕಟ್ಟಡ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯೆಯರು ಉಪಸ್ಥಿತರಿದ್ದು ಸಹಕರಿಸಿದರು.
ಮುಂಬಯಿ ಪದ್ಮಶಾಲಿ ಬಾಂಧವರಿಗೆ ಇದೊಂದು ಅಪ್ರತಿಮ ಹಾಗೂ ಆಶ್ಚರ್ಯದ ದಿನವಾಗಿದೆ. ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣಾನಂದ ಶೆಟ್ಟಿಗಾರರು ತನ್ನ ಅತೀ ಮೂಲ್ಯವಾದ ಸಮಯವನ್ನಷ್ಟೇ ಅಲ್ಲದೆ ಧನ ಸಹಾಯ ಮಾಡುವ ಮತ್ತು ನಿರಂತರ ಸೇವೆಯ ಭಾವನೆಗಳನ್ನು ಕಾರ್ಯಕಾರಿ ಸಮಿತಿಯ ಸದಸ್ಯರೊಳಗೆ ಮೂಡಿಸಿ ಸಂಘದ ಹಲವಾರು ವರ್ಷಗಳ ಹಿಂದಿನ ಈ ಕನಸನ್ನು ಕೆಲವೇ ಸಮಯದಲ್ಲಿ ನನಸಾಗಿಸಿದ್ದಾರೆ. ಈ ಕಲಾಭವನ ಹಾಗೂ ಸಭಾಗೃಹದ ಉಪಯೋಗವು ಎಲ್ಲ ಸಮಾಜದವರಿಗೆ ಹಾಗೂ ಅದರ ನೆರೆಕರೆಯವರಿಗೆ ಸಮಯದಲ್ಲಿ ಒದಗಲಿ. ಕಾರ್ಯಕ್ರಮಕ್ಕೆ ಬಂದು ನಮ್ಮ ಆನಂದೋತ್ಸವದಲ್ಲಿ ಸಹಭಾಗಿಯಾದ ಅನ್ಯ ಸಂಸ್ಥೆಗಳ ಬಾಂಧವರಿಗೆ ಹೃದಯಾಂತರಾಳದ ಕೃತಜ್ಞತೆಗಳು.
– ಉತ್ತಮ್‌ ಶೆಟ್ಟಿಗಾರ್‌,ಅಧ್ಯಕ್ಷರು, ಪದ್ಮಶಾಲಿ ಸಮಾಜ ಸೇವೆ ಸಂಘ ಮುಂಬಯಿ

ಚಿತ್ರ-ವರದಿ : ಸುಭಾಶ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next