ಹೊಸದಿಲ್ಲಿ : ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಿತ ಐತಿಹಾಸಿಕ ಕಥಾ ಚಿತ್ರ “ಪದ್ಮಾವತ್’ ಇಂದು ಗುರುವಾರ ದೇಶಾದ್ಯಂತ ತೀವ್ರ ಪ್ರತಿಭಟನೆಯ ನಡುವೆ ತೆರೆಕಂಡಿದೆ.
ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ, ಗುಜರಾತ್ ಜತೆಗೆ ಈಗ ಬಿಹಾರ ಕೂಡ “ಪದ್ಮಾವತ್’ ಚಿತ್ರವನ್ನು ನಿಷೇಧಿಸಿರುವ ರಾಜ್ಯಗಳ ಪಟ್ಟಿಗೆ ಸೇರಿದೆ.
ಆದರೆ ಪದ್ಮಾವತ್‌ಗೆ ಕ್ಲೀನ್ ಚಿಟ್ ನೀಡಿರುವ ಸುಪ್ರೀಂ ಕೋರ್ಟ್, ಕೇಂದ್ರ ಸೆನ್ಸಾರ್ ಮಂಡಳಿಯ ಸರ್ಟಿಫಿಕೇಟ್ ಪಡೆದಿರುವ ಚಿತ್ರವೊಂದನ್ನು ಯಾವುದೇ ರಾಜ್ಯ ಸರಕಾರಗಳು ನಿಷೇಧಿಸುವಂತಿಲ್ಲ; ಅಂತಹ ಚಿತ್ರದ ಪ್ರದರ್ಶನದಿಂದ ಉಂಟಾಗಬಹುದಾದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ನಿಭಾಯಿಸುವುದು ಆಯಾ ರಾಜ್ಯ ಸರಕಾರಗಳ ಬದ್ಧತೆಯಾಗಿರುತ್ತದೆ ಎಂದು ಹೇಳಿದೆ.
ಈ ನಡುವೆ ಚಿತ್ರ ನಿರ್ಮಾಪಕರು “ಪದ್ಮಾವತ್’ ಐತಿಹಾಸಿಕ ಕಥಾ ಚಿತ್ರ ಅಲ್ಲ; ಅದು 16ನೇ ಶತಮಾನದ ಅವಧ್‌ನ ಸೂಫಿ ಸಂತ ಕವಿ ಓರ್ವರು ಬರೆದಿದ್ದ ಸುದೀರ್ಘ ಕವನವನ್ನು ಆಧರಿಸಿದ ಚಿತ್ರವಾಗಿದೆ ಎಂದು ಹೇಳಿದ್ದಾರೆ. ಆದರೆ ಚಿತ್ರ ನಿರ್ಮಾಮಪಕರ ಈ ಸಮಜಾಯಿಸಿಕೆ ಪ್ರತಿಭಟನಕಾರರನ್ನು ತೃಪ್ತಿ ಪಡಿಸಿಲ್ಲ.
ಪದ್ಮಾವತ್ ವಿರುದ್ಧ ಮೊದಲಿನಿಂದಲೇ ತೀವ್ರ ಪ್ರತಿಭಟನೆ ನಡೆಸಿಕೊಂಡು ಬಂದಿರುವ ರಜಪೂತ ಕರ್ಣಿ ಸೇನೆಯು “ಪದ್ಮಾವತ್’ಗೆ ಸರಕಾರ ನಿಷೇಧ ಹೇರುವ ತನಕ ತನ್ನ ಪ್ರತಿಭಟನೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತ ಹೇಳಿದೆ. ಪದ್ಮಾವತ್ ಚಿತ್ರ ಪ್ರದರ್ಶಿಸುವ ಚಿತ್ರ ಮಂದಿರಗಳಿಗೆ ಬೆಂಕಿ ಹಾಕಲಾಗುವುದು ಮತ್ತು ಅವುಗಳ ಮುಂದೆ ಜನತಾ ಕರ್ಫ್ಯೂ ಹೇರಲಾಗುವುದು ಎಂದು ಅದು ಬೆದರಿಕೆ ಹಾಕಿದೆ.