Advertisement

ರಗಳೆ ನಡುವೆಯೇ ಪದ್ಮಾವತ್‌ ತೆರೆಗೆ

07:05 AM Jan 26, 2018 | Karthik A |

ಹೊಸದಿಲ್ಲಿ: ರಾಜಸ್ಥಾನ, ಗುಜರಾತ್‌, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಹಬ್ಬಿದ್ದ ‘ಪದ್ಮಾವತ್‌’ ಸಿನೆಮಾ ವಿರುದ್ಧದ ಜ್ವಾಲೆಯ ವ್ಯಾಪ್ತಿಗೆ ಬಿಹಾರ, ಉತ್ತರಾಖಂಡ ಕೂಡ ಸೇರ್ಪಡೆ, ಕರ್ಣಿ ಸೇನೆ ಕರೆ ನೀಡಿದ್ದ ಭಾರತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ, ಗುರುಗ್ರಾಮದಲ್ಲಿ ಮಂಗಳವಾರ ನಡೆದಿದ್ದ ಶಾಲಾ ಮಕ್ಕಳಿದ್ದ ಬಸ್‌ ಮೇಲೆ ಕಲ್ಲು ತೂರಾಟಕ್ಕೆ ರಾಜಕೀಯ ರಂಗು, ಗಲಭೆ ಪೀಡಿತ ರಾಜ್ಯ ಸರಕಾರಗಳು ಹಾಗೂ ಕರ್ಣಿ ಸೇನೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ, ಇಷ್ಟೆಲ್ಲಾ ಗಲಭೆಯ ಮಧ್ಯೆಯೇ ರಾಷ್ಟ್ರಾದ್ಯಂತ ಬಿಡುಗಡೆಯಾದ ‘ಪದ್ಮಾವತ್‌’ ಬಗ್ಗೆ ಪ್ರೇಕ್ಷಕರ ಭರ್ಜರಿ ಪ್ರತಿಕ್ರಿಯೆ… ಇದೆಲ್ಲವೂ ‘ಪದ್ಮಾವತ್‌’ ಕಿಚ್ಚಿನ ಗುರುವಾರದ ಝಳದ ಝಲಕ್‌!

Advertisement

ಸುಪ್ರೀಂ ವಿಚಾರಣೆ: ‘ಪದ್ಮಾವತ್‌’ ಬಿಡುಗಡೆಗೆ ಸುಪ್ರೀಂಕೋರ್ಟ್‌ ಆದೇಶಿದ್ದರೂ ಅಡ್ಡಿಪಡಿಸಿದ ಕರ್ಣಿ ಸೇನೆ  ಹಾಗೂ ಆದೇಶದ ಪಾಲನೆಯಲ್ಲಿ ಎಡವಿರುವ ಆರೋಪದ ಮೇಲೆ ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತ್‌ ಹಾಗೂ ಹರಿಯಾಣ ರಾಜ್ಯ ಸರಕಾರಗಳ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ದಾಖಲಿಸುವಂತೆ ಕೋರಿ 2 ಅರ್ಜಿಗಳು ಸಲ್ಲಿಕೆಯಾಗಿದ್ದು, ವಿಚಾರಣೆಯನ್ನು ಸುಪ್ರೀಂ ಕೋರ್ಟ್‌, ಸೋಮವಾರ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ಏತನ್ಮಧ್ಯೆ,  ಚಿತ್ರಕ್ಕೆ ನೀಡಿರುವ ಸೆನ್ಸಾರ್‌ ಪ್ರಮಾಣ ಪತ್ರ ರದ್ದುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕರಿಸಿರುವ ದಿಲ್ಲಿ ಹೈಕೋರ್ಟ್‌, ಸುಪ್ರೀಂಕೋರ್ಟ್‌ಗೆ ಹೋಗುವಂತೆ ಸೂಚಿಸಿದೆ.

ರಾಜಕೀಯ ರಂಗು: ಬುಧವಾರ, ಗುರುಗ್ರಾಮದ ಶಾಲಾ ಬಸ್‌ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿರುವುದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ‘ಹಿಂದೆ ದಲಿತರನ್ನು, ಮುಸ್ಲಿಮರನ್ನು ಕೊಂದವರು ಈಗ ಮಕ್ಕಳನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಘಟನೆ ಬಗ್ಗೆ ಟ್ವಿಟರ್‌ನಲ್ಲಿ ಕಿಡಿಕಾರಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಘಟನೆಗೆ ಬಿಜೆಪಿಯೇ ಕಾರಣ ಎಂದಿದ್ದಾರೆ.

ಪದ್ಮಾವತ್‌ಗೆ ಸೂಪರ್‌ ರೆಸ್ಪಾನ್ಸ್‌ 


ಗಲಭೆಯ ಮಧ್ಯೆಯೇ ಬಿಡುಗಡೆಯಾಗಿರುವ ಪದ್ಮಾವತ್‌ಗೆ ದೇಶದ ಹಲವೆಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿಲ್ಲಿಯ ಮಲ್ಟಿಪ್ಲೆಕ್ಸ್‌ಗಳಲ್ಲಿ ಗುರುವಾರದ ಮೊದಲೆರಡು ಷೋಗಳು ಶೇ. 60ರಷ್ಟು ಭರ್ತಿಯಾಗಿದ್ದು, ದೇಶದ ಉಳಿದೆಡೆಯೂ ಫ‌ುಲ್‌ಹೌಸ್‌ ಪ್ರದರ್ಶನ ಕಂಡಿದೆ. 10 ಲಕ್ಷ ಮಂದಿ ಚಿತ್ರ ವೀಕ್ಷಿಸಿದ್ದಾರೆಂದು ನಿರ್ಮಾಣ ಸಂಸ್ಥೆ ತಿಳಿಸಿದೆ.

ಎಲ್ಲೆಲ್ಲಿ ಏನೇನಾಯ್ತು?
ರಾಜಸ್ಥಾನ :
ಜೈಪುರದಲ್ಲಿ ಶ್ರೀ ರಜಪೂತ್‌ ಕರ್ಣಿ ಸೇನೆಯ ಕಾರ್ಯಕರ್ತರ ಬೈಕ್‌ ರ್ಯಾಲಿ, ಉದಯ್‌ಪುರ್‌ನಲ್ಲಿ ಪ್ರತಿಭಟನೆ ವೇಳೆ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ವಿಫ‌ಲ ಯತ್ನ,  ಚಿತ್ರ ವೀಕ್ಷಿಸದಿರುವಂತೆ ಆರೆಸ್ಸೆಸ್‌ ಮನವಿ. 

Advertisement

ಉತ್ತರಾಖಂಡ: ಹೃಷಿಕೇಶದಲ್ಲಿನ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಮೇಲೆ ಹಲ್ಲೆ, ದಿಲ್ಲಿ-ಜೈಪುರ ಹೈವೇ ಸೇರಿ ಹೆದ್ದಾರಿ ಬಂದ್‌.

ಮಧ್ಯಪ್ರದೇಶ: ಹಲವೆಡೆ ಪ್ರತಿಭಟನೆ. ಚಿತ್ರ ಮಂದಿರಗಳ ಮೇಲೆ ದಾಳಿ, ಚಿತ್ರಮಂದಿರಗಳ ಮಾಲೀಕರಿಂದ ಸಿಎಂ ಚೌಹಾಣ್‌ ಭೇಟಿ.

ಉತ್ತರ ಪ್ರದೇಶ: ಮುಜಾಫ‌ರ್‌ನಗರ, ಆಗ್ರಾ, ಮುಘಲ್‌ಸರಾಯ್‌ಗಳಲ್ಲಿ ಪ್ರತಿಭಟನೆ, ಲಕ್ನೋದಲ್ಲಿ ಪದ್ಮಾವತ್‌ ಪ್ರೇಕ್ಷಕರಿಗೆ ಮನೆದಾರಿ ತೋರಿಸಿದ ಪ್ರತಿಭಟನಕಾರರು, ಮಥುರಾದಲ್ಲಿ ಪ್ರಯಾಣಿಕರ ರೈಲು ತಡೆ.

ಹರಿಯಾಣ: ಶಾಲಾ ಬಸ್‌ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆ ಗುರುವಾರ ಹಲವಾರು ಶಾಲೆಗಳಿಗೆ ರಜೆ, ನಿರ್ದೇಶಕ ಬನ್ಸಾಲಿಗೆ ಬೆದರಿಕೆ ಹಾಕಿದ್ದಕ್ಕೆ ಬಿಜೆಪಿ ನಾಯಕ ಅಮು ಬಂಧನ.

ಮಹಾರಾಷ್ಟ್ರ: ಮುಂಬಯಿಯಲ್ಲಿ ಪ್ರತಿಭಟನೆ, ಕರ್ಣಿ ಸೇನೆಯ ಮುಂಬೈ ಶಾಖಾ ಮುಖ್ಯಸ್ಥ ಅಜಯ್‌ ಸಿಂಗ್‌ ಬಂಧನ.

ಗುಜರಾತ್‌: ಅಲ್ಲಲ್ಲಿ ಸಣ್ಣಪುಟ್ಟ ಪ್ರತಿಭಟನೆ, ಶಿಕ್ಷಣ ಸಂಸ್ಥೆಗಳು, ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಣೆ. 

ತಮ್ಮವರದೇ ಕಾರಿಗೆ ಬೆಂಕಿ


ಪದ್ಮಾವತ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದ್ದ ಕರ್ಣಿ ಸೇನೆಯ ಸದಸ್ಯರು ಬುಧವಾರ, ತಮ್ಮ ಸಂಘಟನೆಯ ಸದಸ್ಯರೊಬ್ಬರ ಕಾರಿಗೇ ಬೆಂಕಿ ಹಚ್ಚಿ ಬೇಸ್ತು ಬಿದ್ದ ಘಟನೆ ನಡೆದಿದೆ. ಭೋಪಾಲ್‌ನಲ್ಲಿ ಪ್ರತಿಭಟನೆ ವೇಳೆ ಅಲ್ಲಿಗೆ ಕರ್ಣಿ ಸೇನಾ ಸದಸ್ಯ ಸುರೇಂದ್ರ ಸಿಂಗ್‌ ಚೌಹಾಣ್‌ ತಮ್ಮ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದರು. ಹಿಂಸೆಯಲ್ಲಿ ತೊಡಗಿದ್ದ ಕರ್ಣಿ ಸೇನೆಯ ಸದಸ್ಯರು ಗೊತ್ತಿಲ್ಲದೇ ಅದೇ ಕಾರಿಗೆ ಬೆಂಕಿ ಹಚ್ಚಿದ್ದು, ಕಾರು ಸುಟ್ಟು ಕರಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next